ಕನ್ನಡಪ್ರಭ ವಾರ್ತೆ ಕೊಡೇಕಲ್
ವಲಯದ ಹೊರಟ್ಟಿ, ಹಗರಟಗಿ, ಕೊಡೇಕಲ್, ಬೈಲಕುಂಟಿ, ಬರದೇವನಾಳ, ಯರಕಿಹಾಳ ಹಾಗೂ ಸೂಕ್ಷ್ಮ ವಲಯದ ಮತಗಟ್ಟೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು, ಮೂಲಭೂತ ಸೌಕರ್ಯಗಳಾದ ವಿದ್ಯುತ್, ಶೌಚಾಲಯಗಳ ಸ್ಥಿತಿಗತಿ ಪರೀಶಿಲಿಸಿ ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯವಿರುವ ಮತಗಟ್ಟೆಗಳಲ್ಲಿ ಬೇಗನೆ ಸೂಕ್ತವ್ಯವಸ್ಥೆ ಕಲ್ಪಿಸಿ ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಹಗರಟಗಿ ಚೆಕ್ ಪೋಸ್ಟ್ ಭೇಟಿ ನೀಡಿ ಮಾತನಾಡಿದ ಅವರು, ಚೆಕ್‌ಪೋಸ್ಟ್ ಕುರಿತು ಸಮಗ್ರ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಚೆಕ್‌ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಲೋಕಸಭಾ ಹಾಗೂ ಸುರಪುರ ವಿಧಾನಸಭಾ ಉಪಚುನಾವಣೆ ಏಕಕಾಲದಲ್ಲಿ ನಡೆಯುವುದರಿಂದ ಚೆಕ್‌ಪೋಸ್ಟ್ ಕೇಂದ್ರದಲ್ಲಿ ಸದಾ ಜಾಗೃತರಾಗಿರಬೇಕು. ನೀತಿ ಸಂಹಿತೆ ಜಾರಿಯಾಗಿದ್ದರಿಂದ ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕೆಂದು ತಿಳಿಸಿದರು.ಏನೇ ಸಮಸ್ಯೆ ಇದ್ದರೆ ಗೊಂದಲಕ್ಕಿಡಾಗದೇ ಮೇಲಾಧಿಕಾರಿಗಳಿಗೆ ಅಥವಾ ಸಂಬಂಧಿಸಿದ ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಸಲಹೆ ಪಡೆದು ಕಾರ್ಯನಿರ್ವಹಿಸಬೇಕು. ಹಾಗೆಯೇ ಚೆಕ್ ಪೋಸ್ಟ್ ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ನೆರಳಿನ ವ್ಯವಸ್ಥೆ ಮಾಡಲಾಗುವುದಾಗಿ ತಿಳಿಸಿದರು.
ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಯ್ಯ ಸ್ವಾಮಿ ಹಿರೇಮಠ, ಹುಣಸಗಿ ಸಿ.ಪಿ.ಐ. ಸಚಿನ್ ಚೆಲುವಾದಿ, ಕೊಡೇಕಲ್ ಉಪತಹಸೀಲ್ದಾರ್ ಕಲ್ಲಪ್ಪ ಜಂಗಿನಗಡ್ಡಿ, ಕಂದಾಯ ನೀರಿಕ್ಷಕ ಶಾಂತಗೌಡ ಬಿರಾದಾರ್, ಗ್ರಾಮ ಆಡಳಿತಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.