ರೈತರಿಗೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಡಿಸಿ ಸೂಚನೆ

KannadaprabhaNewsNetwork |  
Published : May 06, 2026, 01:15 AM IST
೫ಕೆಎಲ್‌ಆರ್-೫ಕೋಲಾರದ ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ಉನ್ನತ ಮಟ್ಟದ ಮಧ್ಯಸ್ಥಗಾರರ ಸಮಾಲೋಚನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ನೂತನವಾಗಿ ಪ್ರಸ್ತಾಪಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಹಾಗೂ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸಂಪರ್ಕ ರಸ್ತೆ ಯೋಜನೆಗಳ ಅಂತಿಮ ಜೋಡಣೆ ಸಂದರ್ಭದಲ್ಲಿ ಜಿಲ್ಲೆಯ ರೈತರ ಹಿತರಕ್ಷಣೆ ಹಾಗೂ ಸೇವಾ ರಸ್ತೆಗಳನ್ನು ಸಂಪರ್ಕ ಮಾಡಬೇಕು

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ನೂತನವಾಗಿ ಪ್ರಸ್ತಾಪಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಹಾಗೂ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸಂಪರ್ಕ ರಸ್ತೆ ಯೋಜನೆಗಳ ಅಂತಿಮ ಜೋಡಣೆ ಸಂದರ್ಭದಲ್ಲಿ ಜಿಲ್ಲೆಯ ರೈತರ ಹಿತರಕ್ಷಣೆ ಹಾಗೂ ಸೇವಾ ರಸ್ತೆಗಳನ್ನು ಸಂಪರ್ಕ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಮಧ್ಯಸ್ಥಗಾರರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.ಯೋಜನೆಗಳ ಅನುಷ್ಠಾನದ ವೇಳೆ ಪರಿಸರ ಸೂಕ್ಷ್ಮ ವಲಯಗಳ ಸಂರಕ್ಷಣೆ ಮತ್ತು ಕೃಷಿಕರ ಹಿತರಕ್ಷಣೆಗೆ ಸಭೆಯಲ್ಲಿ ಮೊದಲ ಆದ್ಯತೆ ನೀಡಲು ಸೂಚಿಸಿದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಭಾರಿ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಪ್ರಸ್ತಾಪಿಸಲಾಗಿರುವ ಕುಪ್ಪಂ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಈ ಹಿಂದೆ ಯೋಜಿಸಲಾಗಿದ್ದ ಮಾರ್ಗವು ಕಾಮಸಮುದ್ರಂ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ವಲಯದ ಮೂಲಕ ಹಾದು ಹೋಗುತ್ತಿತ್ತು. ಇದರಿಂದಾಗಿ ಉಂಟಾಗಬಹುದಾದ ಕಾನೂನು ತೊಡಕುಗಳು ಹಾಗೂ ಅರಣ್ಯ ನಾಶವನ್ನು ತಪ್ಪಿಸಲು ಸಭೆಯಲ್ಲಿ ನೂತನ ನಕ್ಷೆಗಳನ್ನು ಪರಿಶೀಲಿಸಿದರು.

ಸೂಕ್ಷ್ಮ ಮಾರ್ಪಾಡು ಮಾಡಿ:

ವನ್ಯಜೀವಿ ಧಾಮದ ಪ್ರಮುಖ ವಲಯಕ್ಕೆ ಧಕ್ಕೆಯಾಗದಂತೆ, ಪರಿಸರ ಸೂಕ್ಷ್ಮ ವಲಯದಿಂದ ಸಂಪೂರ್ಣ ಹೊರಗುಳಿಯುವ ಬಂಗಾರಪೇಟೆ ಕಡೆಯ ’ಆಯ್ಕೆ-೧’ ಮಾರ್ಗವೇ ಅತ್ಯಂತ ಸೂಕ್ತ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು. ಆದರೆ, ಈ ಮಾರ್ಗದಲ್ಲಿ ಬರುವ ನೀರಾವರಿ ಹೊಂಡಗಳ ಸಂರಕ್ಷಣೆಗಾಗಿ ಸಣ್ಣ ನೀರಾವರಿ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಸೂಕ್ಷ್ಮ ಮಾರ್ಪಾಡುಗಳನ್ನು ಮಾಡಲು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಿದರು.೬-ಪಥದ ಹೆದ್ದಾರಿ ನಿರ್ಮಾಣದಿಂದ ಗ್ರಾಮಗಳ ಹಾಗೂ ರೈತರ ಕೃಷಿ ಭೂಮಿಗಳು ವಿಭಜನೆಗೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಹೆದ್ದಾರಿಯ ಇಕ್ಕೆಲಗಳಲ್ಲಿ ಕಡ್ಡಾಯವಾಗಿ ಕನಿಷ್ಠ ೭ ಮೀಟರ್ ಅಗಲದ ಸರ್ವಿಸ್ ರಸ್ತೆಗಳನ್ನು ನಿರ್ಮಿಸಬೇಕು, ರೈತರಿಗೆ ತಮ್ಮದೇ ಜಮೀನುಗಳಿಗೆ ಹೋಗಲು ಮುಕ್ತ ಪ್ರವೇಶ ನಿರಾಕರಿಸುವುದು ಅವರ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಹಿಂದಿನ ಯೋಜನೆಗಳಲ್ಲಿ ಸರ್ವಿಸ್ ರಸ್ತೆಗಳ ಕೊರತೆಯಿಂದಾಗಿ ಎದುರಾಗಿರುವ ನ್ಯಾಯಾಲಯದ ಪ್ರಕರಣ ಗಮನದಲ್ಲಿಟ್ಟುಕೊಳ್ಳಬೇಕು. ಹೀಗಾಗಿ ಹೆದ್ದಾರಿಯ ಒಟ್ಟು ಅಗಲವನ್ನು ೬೦ ಮೀಟರ್‌ಗಳಿಗೆ ನಿಗದಿಪಡಿಸಿ, ಸರ್ವಿಸ್ ರಸ್ತೆ ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದರು.

ಡಿಸಿ ಅಸಮಾಧಾನ: ಸಭೆಗೆ ಗೈರುಹಾಜರಾಗಿದ್ದ ಮತ್ತು ಹೆದ್ದಾರಿ ಯೋಜನೆಗೆ ಪೂರಕ ಮಾಹಿತಿ ನೀಡಲು ವಿಳಂಬ ಮಾಡುತ್ತಿರುವ ಕೆಲವು ಇಲಾಖೆಗಳ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ, ಕಂದಾಯ ಇಲಾಖೆ, ಬೆಸ್ಕಾಂ, ಕೆಪಿಟಿಸಿಎಲ್ ಮತ್ತು ಸಣ್ಣ ನೀರಾವರಿ ಇಲಾಖೆಗಳು ತಕ್ಷಣವೇ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಮನ್ವಯ ಸಾಧಿಸಿ ಭೂಸ್ವಾಧೀನ ಪ್ರಕ್ರಿಯೆ, ಜಮೀನಿನ ವಿವರಗಳು ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಅಗತ್ಯ ವರದಿ ನೀಡಬೇಕು ಎಂದು ಗಡುವು ವಿಧಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಕೋಲಾರ ಎಸ್‌ಪಿ ಕನ್ನಿಕಾ ಸಿಕ್ರಿವಾಲ್, ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ, ಎಸಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ಮಾಲೂರು ತಹಸೀಲ್ದಾರ್ ರೂಪ, ಬಂಗಾರಪೇಟೆ ತಹಸೀಲ್ದಾರ್ ಸುಜಾತಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಸೌಲಭ್ಯ ಸಮರ್ಥ ಬಳಕೆ ಅಗತ್ಯ
ಸಾಮೂಹಿಕ ವಿವಾಹಗಳು ಸಾಮಾಜಿಕ ಬದಲಾವಣೆ ಅಸ್ಮಿತೆ