ಹಾವೇರಿ: ಹಿರಿಯ ನಾಗರಿಕರು, ವಿಶೇಷಚೇತನರು ಹಾಗೂ ಅಗತ್ಯ ಸೇವಾ ಮತದಾರರಿಗೆ ನಮೂನೆ ೧೨ಡಿ ಹಾಗೂ ಅಂಚೆ ಮತದಾನ ಇತರ ಚುನಾವಣಾ ಕರ್ತವ್ಯ ನಿರತರಿಗೆ ೧೨, ೧೨ಎ ನಮೂನೆಗಳ ವಿತರಣೆ ಕಾರ್ಯವನ್ನು ಎರಡು ದಿನದೊಳಗಾಗಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಅವರು, ಈಗಾಗಲೇ ೭೦ ಸಾವಿರ ಎಪಿಕ್ ಕಾರ್ಡ್‌ಗಳು ಬಂದಿದ್ದು, ಈಗಾಗಲೇ ಅಂಚೆ ಮೂಲಕವೂ ರವಾನಿಸಲಾಗಿದೆ. ಅಲ್ಲದೆ ಬಿಎಲ್‌ಒಗಳ ಮೂಲಕ ವಿತರಣೆಗೆ ಕ್ರಮವಹಿಸಬೇಕು. ವೋಟರ್ ಸ್ಲಿಪ್‌ಗಳನ್ನು ವಿತರಿಸಲು ಯೋಜಿತ ಕಾರ್ಯಕ್ರಮ ರೂಪಿಸಿಕೊಳ್ಳುವಂತೆ ಸೂಚನೆ ನೀಡಿದರು.ಏಕಗವಾಕ್ಷಿ: ಚುನಾವಣೆ ಸಭೆ-ಸಮಾರಂಭಗಳಿಗೆ ಮಾಹಿತಿ ನೀಡಲು ಎಲ್ಲ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆಯಡಿ ಅನುಮತಿ ನೀಡಬೇಕು. ಇದಕ್ಕಾಗಿ ಅಗತ್ಯ ಅಧಿಕಾರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಕ್ರಮವಹಿಸಿ ಎಂದು ಸೂಚನೆ ನೀಡಿದರು.ತೀವ್ರ ನಿಗಾ: ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಆದರೆ ಕಡಿಮೆ ದೂರುಗಳು ದಾಖಲಾಗಿವೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮಗಳ ಪತ್ತೆಗಾಗಿ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ತಹಸೀಲ್ದಾರ್‌ಗಳು, ಎಫ್.ಎಸ್.ಟಿ.ತಂಡ ಹಾಗೂ ಎಂ.ಸಿ.ಸಿ.ನೋಡಲ್ ಅಧಿಕಾರಿಗಳು ತೀವ್ರ ತರ ಕಾರ್ಯಾಚರಣೆ ಕೈಗೊಳ್ಳಬೇಕು. ತಮ್ಮ ವ್ಯಾಪ್ತಿಯಲ್ಲಿ ಹೆಚ್ಚು ಸುತ್ತಾಟ ನಡೆಸಬೇಕು. ಆಂತರಿಕ ಮಾಹಿತಿಯನ್ನು ಸಂಗ್ರಹಿಸಿ ಅಕ್ರಮಗಳ ತಡೆಗೆ ಕ್ರಮವಹಿಸುವಂತೆ ಸೂಚನೆ ನೀಡಿದರು. ಚೆಕ್ ಪೋಸ್ಟ್ ಹಾಗೂ ಎಫ್.ಎಸ್.ಟಿ. ತಂಡಕ್ಕೆ ಹೆಚ್ಚುವರಿ ಸಿಬ್ಬಂದಿ ಅಗತ್ಯವಿದ್ದರೆ ಸಹಾಯಕ ಚುನಾವಣಾಧಿಕಾರಿಗಳ ಹಂತದಲ್ಲೇ ನಿಯೋಜಿಸಲು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್, ಸಹಾಯಕ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.