ಸದ್ಗುರು ಕೈವಾರ ತಾತಯ್ಯನವರ ರಥೋತ್ಸವ

KannadaprabhaNewsNetwork | Published : Mar 27, 2024 1:03 AM

ಸಾರಾಂಶ

. ಸದ್ಗುರು ತಾತಯ್ಯನವರ ಉತ್ಸವ ವಿಗ್ರಹಕ್ಕೆ ವಿಶೇಷ ಅಭಿಷೇಕ ಮತ್ತು ವೇದಘೋಷಗಳೊಂದಿಗೆ ಅಷ್ಟಾವಧಾನ ಸೇವೆಯನ್ನು ಸಮರ್ಪಿಸಲಾಯಿತು. ನಂತರ ಸದ್ಗುರುಗಳಿಗೆ ಮಹಾಮಂಗಳಾರತಿಯನ್ನು ಸಮರ್ಪಿಸಲಾಯಿತು. ಈ ಪೂಜಾ ಕೈಂಕರ್ಯದಲ್ಲಿ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ದಂಪತಿ ಉಪಸ್ಥಿತರಿದ್ದರು.

ಸಹಸ್ರಾರು ಭಕ್ತರ ಸಮಾಗಮ, ಹರಕೆ,ಭಜನೆಯ ಮೂಲಕ ಭಕ್ತಿ ಸಮರ್ಪಣೆ । ರಾತ್ರಿ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ, ಸದ್ಗುರುವಿನ ಪಲ್ಲಕ್ಕಿ ಉತ್ಸವ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಕಾಲಜ್ಞಾನಿ, ವರಕವಿ, ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ರಥೋತ್ಸವವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸದ್ಗುರು ತಾತಯ್ಯನವರ ರಥೋತ್ಸವ ನೆರವೇರಿತು.

ಶ್ರೀ ಕ್ಷೇತ್ರ ಕೈವಾರದ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮೂಲ ವಿಗ್ರಹವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸದ್ಗುರು ತಾತಯ್ಯನವರ ಉತ್ಸವ ವಿಗ್ರಹಕ್ಕೆ ವಿಶೇಷ ಅಭಿಷೇಕ ಮತ್ತು ವೇದಘೋಷಗಳೊಂದಿಗೆ ಅಷ್ಟಾವಧಾನ ಸೇವೆಯನ್ನು ಸಮರ್ಪಿಸಲಾಯಿತು. ನಂತರ ಸದ್ಗುರುಗಳಿಗೆ ಮಹಾಮಂಗಳಾರತಿಯನ್ನು ಸಮರ್ಪಿಸಲಾಯಿತು. ಈ ಪೂಜಾ ಕೈಂಕರ್ಯದಲ್ಲಿ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ದಂಪತಿ ಉಪಸ್ಥಿತರಿದ್ದರು.

ಪೂಜಾ ನಂತರ ಅಲಂಕೃತ ಪಲ್ಲಕ್ಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಸದ್ಗುರುಗಳ ಉತ್ಸವ ವಿಗ್ರಹವನ್ನು ರಥಕ್ಕೆ ಕರೆ ತರಲಾಯಿತು. ರಥವನ್ನು ವಿಶೇಷ ಹೂಗಳಿಂದ ಸಿಂಗರಿಸಲಾಗಿತ್ತು. ರಥಶಾಂತಿ ಮತ್ತು ಪೂಜೆಯನ್ನು ಸಲ್ಲಿಸಲಾಯಿತು.ನೆರೆದಿದ್ದ ಅಪಾರ ಭಕ್ತರು ರಥಕ್ಕೆ ಬಾಳೆಹಣ್ಣನ್ನು ಅರ್ಪಿಸಿ ಹರಕೆ ಸಲ್ಲಿಸಿದರು.

ರಥೋತ್ಸವದಲ್ಲಿ ಸದ್ಗುರುವಿನ ಭಜನೆಯಲ್ಲಿ ಭಕ್ತರು ಪರಾಕಾಷ್ಠೆಯಲ್ಲಿ ಮಿಂದು ಮುಳುಗಿದರು. ಆಂಧ್ರ, ತಮಿಳುನಾಡು ಮುಂತಾದ ಕಡೆಗಳಿಂದ ಸಾವಿರಾರು ಭಕ್ತರು ಬಂದು ಸೇರಿದ್ದರು. ಭಕ್ತರು ಟ್ರ್ಯಾಕ್ಟರ್‌ಗಳಲ್ಲಿ ಮಜ್ಜಿಗೆ, ಪಾನಕ ಹಂಚುತ್ತಿದ್ದರು.

ರಥೋತ್ಸವದಲ್ಲಿ ಯೋಗಿ ನಾರೇಯಣ ಮಠದ ಟ್ರಸ್ಟ್ ಸಮಿತಿಯ ಸದಸ್ಯರು, ಕೈವಾರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ರಥೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಾಗೂ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ ವಿಶ್ವಗುರು ಶ್ರೀ ಬಸವಣ್ಣನವರ ಕನ್ನಡ ಕಲಾಸಂಘ ನರಸಾಪುರ ರವರು ಶ್ರೀಕೃಷ್ಣ ಸಂಧಾನ ಎಂಬ ಕನ್ನಡ ಪೌರಾಣಿಕ ನಾಟಕವನ್ನು ನಡೆಸಿಕೊಟ್ಟರು. ನಂತರ ಸದ್ಗುರು ಯೋಗಿನಾರೇಯಣ ತಾತಯ್ಯನವರ ಮುತ್ತಿನ ಪಲ್ಲಕ್ಕಿಯ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

Share this article