ಕನ್ನಡಪ್ರಭ ವಾರ್ತೆ ಕಾರವಾರ
ಇಲ್ಲಿನ ರವೀಂದ್ರನಾಥ ಟಾಗೋರ ಕಡಲತೀರದ ಶೇಡ್‌ನಲ್ಲಿ ನಿಲ್ಲಿಸಿರುವ ಬೀಚ್ ಕ್ಲೀನಿಂಗ್ ಯಂತ್ರವನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಗುರುವಾರ ವೀಕ್ಷಣೆ ಮಾಡಿ ದುರಸ್ತಿಗೆ ಕ್ರಮವಹಿಸುವಂತೆ ನಗರಸಭೆಗೆ ಸೂಚಿಸಿದ್ದಾರೆ.ಬೀಚ್ ಕ್ಲೀನಿಂಗ್ ಯಂತ್ರ ಹಾಳಾಗಿದ್ದು, ವರ್ಷದಿಂದ ಬಳಕೆ ಮಾಡುತ್ತಿಲ್ಲವೆಂದು ಕನ್ನಡಪ್ರಭ ಆ. ೧೫ರಂದು ವರದಿ ಪ್ರಕಟಿಸಿತ್ತು. ೨೦೧೭ರಲ್ಲಿ ಈ ಯಂತ್ರವನ್ನು ಪ್ರವಾಸೋದ್ಯಮ ಇಲಾಖೆ ಅನುದಾನದ ಅಡಿಯಲ್ಲಿ ಖರೀದಿಸಿ ತರಲಾಗಿತ್ತು. ಬಳಿಕ ನಿರ್ವಹಣೆಗೆ, ಕಡಲ ತೀರದ ಸ್ವಚ್ಛತೆಗೆ ನಗರಸಭೆಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ಯಂತ್ರದ ಚೈನ್ ತುಂಡಾಗಿದ್ದು, ದುರಸ್ತಿಗೆ ಅನುದಾನವಿಲ್ಲದೇ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಇರುವ ಚಾಪೆಲ್ ಯುದ್ಧ ವಿಮಾನ ಸಂಗ್ರಹಾಲಯದ ಸಮೀಪ ಇರುವ ಶೆಡ್‌ನಲ್ಲಿ ಇರಿಸಲಾಗಿತ್ತು.
ಅಲಿಗದ್ದ ಕಡಲತೀರದಿಂದ ದಿವೇಕರ ಕಾಲೇಜಿನ ವರೆಗೆ ತೀರವನ್ನು ಪ್ರತಿನಿತ್ಯ ಸ್ವಚ್ಛ ಮಾಡಲಾಗುತ್ತಿತ್ತು. ಆದರೆ ಈ ಯಂತ್ರ ಹಾಳಾದ ಬಳಿಕ ಸ್ವಚ್ಛತೆ ಪ್ರತಿನಿತ್ಯ ನಡೆಯುತ್ತಿರಲಿಲ್ಲ. ಸಂಘ-ಸಂಸ್ಥೆ, ಸಾರ್ವಜನಿಕರು, ಸರ್ಕಾರಿ ನೌಕರರ ವಿಶೇಷ ಸಂದರ್ಭದಲ್ಲಿ ಸ್ವಚ್ಛತೆ ಮಾಡುತ್ತಿದ್ದರು. ಹೀಗಾಗಿ ಉಳಿದ ದಿನಗಳಲ್ಲಿ ತೀರದ ಉದ್ದಕ್ಕೂ ತ್ಯಾಜ್ಯಗಳು ಬಿದ್ದಿರುತ್ತಿದ್ದವು. ಇದು ಪ್ರವಾಸಿಗರಿಗೆ, ವಾಯುವಿಹಾರಿಗಳಿಗೆ ಅಸಹ್ಯ ಉಂಟಾಗಲು ಕಾರಣವಾಗಿತ್ತು.ಯಂತ್ರ ವೀಕ್ಷಣೆಯ ಬಳಿಕ ''''ಕನ್ನಡಪ್ರಭ''''ದೊಂದಿಗೆ ಮಾತನಾಡಿದ ಡಿಸಿ ಗಂಗೂಬಾಯಿ ಮಾನಕರ, ಕಡಲ ತೀರದಲ್ಲಿ ಸಾರ್ವಜನಿಕರಿಂದ, ಸಂಘ-ಸಂಸ್ಥೆಗಳಿಂದ, ಸರ್ಕಾರಿ ಇಲಾಖೆಗಳಿಂದ ಸ್ವಚ್ಛತೆ ನಡೆಯುತ್ತದೆ. ಆದರೆ ದಿನವೂ ಈ ಕೆಲಸ ಮಾಡಲು ಆಗುವುದಿಲ್ಲ. ಹೀಗಾಗಿ ಬೀಚ್ ಕ್ಲೀನಿಂಗ್ ಯಂತ್ರ ತೀರದ ಸ್ವಚ್ಛತೆಗೆ ಬಳಕೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ತಂತ್ರಜ್ಞರು ಹೊರಗಡೆಯಿಂದ ಬರಬೇಕಿದ್ದು, ನಗರಸಭೆಯ ಆಡಳಿತಾಧಿಕಾರಿಯಾಗಿ ಯಂತ್ರದ ದುರಸ್ತಿಗೆ ಅನುಮತಿ ತಮ್ಮಿಂದ ನೀಡಲಾಗಿದೆ. ಆದಷ್ಟು ಶೀಘ್ರದಲ್ಲಿ ದುರಸ್ತಿ ಮಾಡಿಸಿ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ತೀರದಲ್ಲಿ ಕಸ ಹಾಕಲು ಡಸ್ಟ್‌ಬೀನ್ ಇಲ್ಲದಿರುವುದು ಗಮನಕ್ಕೆ ಬಂದಿದೆ. ಅಲ್ಲಲ್ಲಿ ಕಸದ ಡಬ್ಬಿ ಇಡಲು ನಗರಸಭೆಗೆ ಸೂಚನೆ ನೀಡಲಾಗುತ್ತದೆ ಎಂದರು.