ಚಿತ್ತಾಪುರ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕಟ್ಟಿ ಗ್ರಾಮದಲ್ಲಿ ವಿಶ್ವ ಮಾನವ ಜಗಜ್ಯೊತಿ ಬಸವಣ್ಣನವರ ಭಾವಚಿತ್ರವನ್ನು ಕಳೆದ ರಾತ್ರಿ ವಿರೂಪಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತಾಲೂಕು ಅಧ್ಯಕ್ಷ ಅಣ್ಣಾರಾಯ ಇವಣಿ ಒತ್ತಾಯಿಸಿದ್ದಾರೆ. ೧೨ನೇ ಶತಮಾನದ ದಾರ್ಶನಿಕ ವಿಶ್ವಮಾನವ ಜಗಜ್ಯೋತಿ ಬಸವೇಶ್ವರರು ಸಮಾಜದಲ್ಲಿ ಸಮಾನತೆಗಾಗಿ ಅಂದಿನ ಕಾಲದಲ್ಲಿ ಹೋರಾಟ ಮಾಡಿದ್ದರು. ಇಂತಹ ಮಹಾನ್ ವ್ಯಕ್ತಿಯ ಭಾವಚಿತ್ರವನ್ನು ಕಿಡಿಗೇಡಿಗಳು ಅಪಮಾನ ಮಾಡಿರುವುದು ಅವರ ವಿಕೃತ ಮನಸ್ಸನ್ನು ತೋರಿಸುತ್ತದೆ. ಸಮಾಜದಲ್ಲಿ ಇಂತಹ ಕೃತ್ಯ ಎಸಗಿ ಕೋಮು ಭಾವನೆ ಕೆರಳಿಸುವವರನ್ನು ಕೂಡಲೆ ಬಂದಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು. ವಿಳಂಬ ನೀತಿ ತೋರಿದ್ದಲ್ಲಿ ಇದರ ವಿರುದ್ಧ ರಾಜ್ಯದ್ಯಾಂತ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಇವಣಿ ಎಚ್ಚರಿಕೆ ನೀಡಿದ್ದಾರೆ.