ತರಕಾರಿ ಮಾರುಕಟ್ಟೆ ಶೀಘ್ರ ಎಪಿಎಂಸಿಗೆ ಸ್ಥಳಾಂತರಿಸಲು ಡಿಸಿ ಆದೇಶ

KannadaprabhaNewsNetwork |  
Published : Sep 20, 2024, 01:32 AM IST
ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರು | Kannada Prabha

ಸಾರಾಂಶ

ಸಂಕೇಶ್ವರದ ಶ್ರೀ ದುರದುಂಡೀಶ್ವರ ಮಠದ ಜಾಗದಲ್ಲಿ ನಡೆಯುತ್ತಿರುವ ಖಾಸಗಿ ತರಕಾರಿ ಪೇಟೆಯನ್ನು ತಕ್ಷಣ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ)ಗೆ ಸ್ಥಳಾಂತರಿಸಲು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಮೌಖಿಕ ಆದೇಶ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಶ್ರೀ ದುರದುಂಡೀಶ್ವರ ಮಠದ ಜಾಗದಲ್ಲಿ ನಡೆಯುತ್ತಿರುವ ಖಾಸಗಿ ತರಕಾರಿ ಪೇಟೆಯನ್ನು ತಕ್ಷಣ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ)ಗೆ ಸ್ಥಳಾಂತರಿಸಲು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಮೌಖಿಕ ಆದೇಶ ನೀಡಿದ್ದಾರೆ.

ಗುರುವಾರ ಸಂಕೇಶ್ವರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತರಕಾರಿ ಬೆಳೆಗಾರರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಅವರು, ರಾಜ್ಯ ಸರ್ಕಾರದ ಕೃಷಿ ಉತ್ಪನ್ನ ಮಾರಾಟದ ನಿಯಮಾವಳಿಗೆ ಅನುಸಾರವಾಗಿ ಖಾಸಗಿ ತರಕಾರಿ ಪೇಟೆಯನ್ನು ಎಪಿಎಂಸಿಗೆ ಸ್ಥಳಾಂತರ ಮಾಡಲಾಗುವುದು ಹಾಗೂ ಇದುವರೆಗೂ ಖಾಸಗಿ ತರಕಾರಿ ಪೇಟೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಕಾನೂನು ಚೌಕಟ್ಟಿನಲ್ಲಿಯೇ ಎಲ್ಲರೂ ವ್ಯವಹರಿಸಬೇಕು. ಕಾನೂನು ಕೈಗೆತ್ತಿಕೊಳ್ಳದಂತೆ ಮನವಿ ಮಾಡಿದರು.

ಇದಕ್ಕೂ ಮುಂಚೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ, 25 ವರ್ಷಗಳಿಂದ ಸಂಕೇಶ್ವರ ಪಟ್ಟಣದಲ್ಲಿ ಖಾಸಗಿ ಜಾಗೆಯಲ್ಲಿ ಠೋಕ ತರಕಾರಿ ಪೇಟೆ ನಡೆಯುತ್ತಿದ್ದು, ಅಲ್ಲಿನ ವರ್ತಕರು ಸರ್ಕಾರದ ಯಾವುದೇ ಲೈಸೆನ್ಸ್‌ ಹೊಂದಿಲ್ಲ. ಅಲ್ಲದೆ, ತರಕಾರಿಗಳ ಬಹಿರಂಗ ಲಿಲಾವು ನಡೆಯುತ್ತಿಲ್ಲ. ಎಷ್ಟು ದರಕ್ಕೆ ತಮ್ಮ ತರಕಾರಿ ಮಾರಾಟವಾಗಿದೆ ಎಂಬುದೂ ಸಹ ರೈತರಿಗೆ ಗೊತ್ತಾಗುವುದಿಲ್ಲ. ಖಾಸಗಿ ಮಾರುಕಟ್ಟೆಗೆ ಬರುವ ಎಲ್ಲ ರೈತರಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ರೈತರ ಉತ್ಪನ್ನ ಮಾರಾಟದ ಮೊತ್ತದ ಮೇಲೆ ಶೇ.10 ಕಮಿಶನ್ ಪಡೆಯಲಾಗುತ್ತಿದೆ. ಶೌಚಾಲಯ ಶುಲ್ಕ ₹10 ವಸೂಲಿ ಮಾಡಲಾಗುತ್ತಿದೆ. ರೈತರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸುವುದು ಸಾಮಾನ್ಯವಾಗಿದೆ. ಹೀಗೆ ನಾನಾ ಸಮಸ್ಯೆಗಳನ್ನು ತರಕಾರಿ ಬೆಳೆಗಾರರು ಎದುರಿಸುತ್ತಿದ್ದು, ತಕ್ಷಣವೇ ಶ್ರೀ ದುರದುಂಡೀಶ್ವರ ಮಠದ ಜಾಗದಲ್ಲಿ ನಡೆಯುತ್ತಿರುವ ತರಕಾರಿ ಪೇಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸಲು ಆಗ್ರಹಿಸಿದರು.

ಹುಕ್ಕೇರಿ, ಸಂಕೇಶ್ವರ, ಗೋಕಾಕ, ಚಿಕ್ಕೋಡಿ ಭಾಗಗಳಿಂದ ಟ್ರ್ಯಾಕ್ಟರ್, ಎತ್ತಿನ ಗಾಡಿಯಲ್ಲಿ ಬಂದಿದ್ದ ತರಕಾರಿ ಬೆಳೆಗಾರರು ಪಟ್ಟಣದಲ್ಲಿ ಬೃಹತ್ ರ್‍ಯಾಲಿ ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ