ಮುಂಡರಗಿ: ಪಟ್ಟಣದ ವಾರ್ಡಿನ ವಿದ್ಯಾನಗರದ ಕಾಲವಾಡ ಅವರ ಪ್ಲಾಟಿನಲ್ಲಿ ನೆನಗುದಿಗೆ ಬಿದ್ದಿರುವ ನಗರೋತ್ಥಾನ ಕಾಮಗಾರಿಯನ್ನು 8 ದಿನಗಳಲ್ಲಿ ಪ್ರಾರಂಭಿಸಿ ಮುಕ್ತಾಯಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಕಳೆದ ಒಂದೂವರೆಯಿಂದ ಎರಡು ವರ್ಷದ ಹಿಂದೆ ನಗರೋತ್ಥಾನ ಕಾಮಗಾರಿ ಪ್ರಾರಂಭವಾಗಿದ್ದು, ಮುಕ್ತಾಯಗೊಳಿಸುವಂತೆ ಅನೇಕ ಬಾರಿ ಒತ್ತಾಯಿಸಿದರೂ ಇದುವರೆಗೂ ಮುಕ್ತಾಯಗೊಂಡಿಲ್ಲ. ನಿತ್ಯ ಈ ರಸ್ತೆಯಲ್ಲಿ ಸಾವಿರಾರು ಮಕ್ಕಳು ಶಾಲೆಗೆ ತೆರಳುತ್ತಾರೆ. ತುಂಬಾ ತೊಂದರೆಯಾಗಿದೆ ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಜಿಲ್ಲಾಧಿಕಾರಿಗೆ ವಿವರಿಸಿದರು.
18ನೇ ವಾರ್ಡಿನಲ್ಲಿ ಕಾಮಗಾರಿ ನೆನಗುದಿಗೆ ಬಿದ್ದಿರುವ ಕುರಿತು ವಾರ್ಡಿನ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿಯವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರನ್ನು 18ನೇ ವಾರ್ಡಿಗೆ ಕರೆತಂದು ವಿಳಂಬವಾಗಿರುವ ಕಾಮಗಾರಿ ತೋರಿಸಿದರು.ಸುಮಾರು ಎರಡು ವರ್ಷಗಳಿಂದ ಕಾಮಗಾರಿ ನೆನಗುದಿಗೆ ಬಿದ್ದಿರುವುದರಿಂದ ವಾರ್ಡಿನಲ್ಲಿ ನಿತ್ಯ ಓಡಾಡುವ ಜನತೆ ನನಗೆ ಹಿಡಿಶಾಪ ಹಾಕಿದ್ದಾರೆ. ಕೆಲವು ವೃದ್ಧರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ ಅವರು ಕಾಮಗಾರಿ ಪ್ರಾರಂಭಿಸಲಿಲ್ಲ. ಇದೇ ರಸ್ತೆಯಲ್ಲಿ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದ್ದು, ಮಳೆಗಾಲದಲ್ಲಿ ಮಕ್ಕಳು ಓಡಾಡುವಾಗ ಅನೇಕ ಬಾರಿ ಬಿದ್ದಿದ್ದಾರೆ. ಹೀಗಾಗಿ ನಾನು ಮಕ್ಕಳೊಂದಿಗೆ ಪುರಸಭೆ ಎದುರಿನಲ್ಲಿ ಧರಣಿ ನಡೆಸಲು ನಿರ್ಧರಿಸಿದ್ದೆ ಎಂದು ನಾಗೇಶ ಹುಬ್ಬಳ್ಳಿ ವಿವರಿಸಿದರು.