ಶಿಕಾರಿಪುರ ತಾಲೂಕಿನ ಬಹುತೇಕ ಅಧಿಕಾರಿಗಳು ಖಾಸಗಿ ಕಚೇರಿ ಮೂಲಕ ಪಟ್ಟಣದಲ್ಲಿ ದಂಧೆಯಲ್ಲಿ ತೊಡಗಿದ್ದ ಬಗ್ಗೆ ಶಕ್ತಿ ಸಂಗ್ರಾಮ ವೇದಿಕೆ, ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಮನವಿಗೆ ಸೂಕ್ತ ಸ್ಪಂದನೆ ದೊರೆತಿದೆ.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ತಾಲೂಕಿನ ಬಹುತೇಕ ಅಧಿಕಾರಿಗಳು ಖಾಸಗಿ ಕಚೇರಿ ಮೂಲಕ ಪಟ್ಟಣದಲ್ಲಿ ದಂಧೆಯಲ್ಲಿ ತೊಡಗಿದ್ದ ಬಗ್ಗೆ ಶಕ್ತಿ ಸಂಗ್ರಾಮ ವೇದಿಕೆ, ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಮನವಿಗೆ ಸೂಕ್ತ ಸ್ಪಂದನೆ ದೊರೆತಿದೆ ಎಂದು ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಸುನೀಲ್ ಬನ್ನೂರು ಸಂಸತ ವ್ಯಕ್ತಪಡಿಸಿದರು.
ಗುರುವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರ ಸಹಿತ ಕಂದಾಯ ಅಧಿಕಾರಿಗಳು, ಸರ್ಕಾರಿ ನೌಕರರು, ಕೇಂದ್ರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಜನಸಾಮಾನ್ಯರಿಗೆ ಸುಲಭದಲ್ಲಿ ಸರ್ಕಾರದ ಸೇವೆ ಸೌಲಭ್ಯ ದೊರಕಿಸುವಂತೆ ಸರ್ಕಾರ ಸುತ್ತೋಲೆಯ ಸ್ಪಷ್ಟ ಆದೇಶವಿದೆ.
ಹೀಗಿದ್ದರೂ ತಾಲೂಕಿನ ಬಹುತೇಕ ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ಪಟ್ಟಣದಲ್ಲಿನ ಖಾಸಗಿ ಕಟ್ಟಡದಲ್ಲಿ ಕಚೇರಿಗಳನ್ನು ತೆರೆದು, ಸೇವಾಸ್ಥಳದಲ್ಲಿ ಗ್ರಾಮಸ್ಥರ ಸಂಕಷ್ಟ ಅಹವಾಲುಗಳಿಗೆ ಸ್ಪಂದಿಸದೇ, ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಬಗ್ಗೆ ಹಲವು ಬಾರಿ ಎಚ್ಚರಿಸಿದರೂ ತಿದ್ದಿಕೊಳ್ಳದೇ ಹಣ ಪೀಕುತ್ತಿದ್ದರು ಎಂದು ಆರೋಪಿಸಿದರು.
ಅಧಿಕಾರಿಗಳ ಸುಲಿಗೆ ಬಗ್ಗೆ ವೇದಿಕೆಯ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಹಿನ್ನೆಲೆ ಕಳೆದ ಡಿ.7ರಂದು ಸಾಂಸ್ಕೃತಿಕ ಭವನದಲ್ಲಿ ನಡೆದ ಜಿಲ್ಲಾಧಿಕಾರಿ ಅವರ ಜನತಾದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಸಲಾದ ದೂರನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಇದೀಗ ಅಧಿಕಾರಿಗಳು ಮೂಲ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ವೇದಿಕೆ ಮನವಿಗೆ ದೊರೆತ ಸ್ಪಂದನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹೋರಾಟಕ್ಕೆ ಫಲ ದೊರೆತಿದೆ. ಈ ದಿಸೆಯಲ್ಲಿ ಸ್ಪಂದಿಸಿದ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆ ರಾಜ್ಯ ಉಪಾಧ್ಯಕ್ಷ ರವಿ ನಾಯ್ಕ, ತಾಲೂಕು ಅಧ್ಯಕ್ಷ ಆನಂದ್, ಜಯಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ಶಿವಯ್ಯಶಾಸ್ತ್ರಿ, ಶಕ್ತಿ ಸಂಗ್ರಾಮ ವೇದಿಕೆ ಪದಾಧಿಕಾರಿ ಪರಶುರಾಮ, ನಾಗರಾಜ್, ಷಣ್ಮುಖ ಮತ್ತಿತರರು ಉಪಸ್ಥಿತರಿದ್ದರು.