ಪಟ್ಟಣದಾದ್ಯಂತ ಸಂಚರಿಸಿದ ಜಿಲ್ಲಾಧಿಕಾರಿ, ರಸ್ತೆ ಬದಿಗಳಲ್ಲಿ ಬಿದ್ದಿದ್ದ ಕಸ ಹಾಗೂ ರಸ್ತೆ ವಿಭಜಕಗಳ ಬಳಿ ತುಂಬಿದ್ದ ಮಣ್ಣಿನ ಅವ್ಯವಸ್ಥೆ ಕಂಡು ಕೆರಳಿದರು. ಪಟ್ಟಣದಲ್ಲಿ ಕನಿಷ್ಠ ಸ್ವಚ್ಛತೆಯೂ ಇಲ್ಲದ ಬಗ್ಗೆ ಸ್ಥಳದಲ್ಲಿದ್ದ ಪಿಡಿಒ ಗೌಸ್ ಪೀರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಕನ್ನಡಪ್ರಭ ವಾರ್ತೆ, ಚೇಳೂರು:
ಜಿಲ್ಲಾಧಿಕಾರಿ ಪ್ರಭು.ಜಿ ಅವರು ಶನಿವಾರ ಚೇಳೂರು ತಾಲೂಕಿಗೆ ಅನಿರೀಕ್ಷಿತ ಭೇಟಿ ನೀಡಿ ವಿವಿಧ ಇಲಾಖೆಗಳ ಕಾರ್ಯವೈಖರಿ ಹಾಗೂ ಪಟ್ಟಣದ ಸ್ವಚ್ಛತೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಅಲ್ಲದೆ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಕಡಕ್ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಮೊದಲು ಪಟ್ಟಣದ ಬೆಸ್ಕಾಂ ಕಚೇರಿ ಆವರಣಕ್ಕೆ ಭೇಟಿ ನೀಡಿದರು. ಕಚೇರಿ ಸುತ್ತಮುತ್ತಲಿನ ಪರಿಸರ ಹಾಗೂ ನಿರ್ವಹಣೆ ವೀಕ್ಷಿಸಿದ ಅವರು, ಸೌಕರ್ಯಗಳ ಕೊರತೆ ಮತ್ತು ಅಸ್ತವ್ಯಸ್ತವಾಗಿದ್ದ ಆವರಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರಿ ಕಚೇರಿಗಳು ಸಾರ್ವಜನಿಕರಿಗೆ ಮಾದರಿಯಾಗಿರಬೇಕು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.ಪಟ್ಟಣದಾದ್ಯಂತ ಸಂಚರಿಸಿದ ಜಿಲ್ಲಾಧಿಕಾರಿ, ರಸ್ತೆ ಬದಿಗಳಲ್ಲಿ ಬಿದ್ದಿದ್ದ ಕಸ ಹಾಗೂ ರಸ್ತೆ ವಿಭಜಕಗಳ ಬಳಿ ತುಂಬಿದ್ದ ಮಣ್ಣಿನ ಅವ್ಯವಸ್ಥೆ ಕಂಡು ಕೆರಳಿದರು. ಪಟ್ಟಣದಲ್ಲಿ ಕನಿಷ್ಠ ಸ್ವಚ್ಛತೆಯೂ ಇಲ್ಲದ ಬಗ್ಗೆ ಸ್ಥಳದಲ್ಲಿದ್ದ ಪಿಡಿಒ ಗೌಸ್ ಪೀರ್ ಅವರನ್ನು ತರಾಟೆಗೆ ತೆಗೆದುಕೊಂಡರು.ಪಟ್ಟಣದ ಸ್ವಚ್ಛತೆ ಕಾಪಾಡುವುದು ನಿಮ್ಮ ಮೊದಲ ಆದ್ಯತೆಯಾಗಬೇಕು. ಬೀದಿಗಳಲ್ಲಿ ಕಸ ತುಂಬಿಕೊಂಡಿದ್ದರೆ ಸಾರ್ವಜನಿಕರ ಆರೋಗ್ಯದ ಗತಿಯೇನು? ತಕ್ಷಣವೇ ಪಟ್ಟಣವನ್ನು ಶುಚಿಗೊಳಿಸಲು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ನಂತರ ತಾಲೂಕು ಕಚೇರಿಗೆ ಭೇಟಿ ನೀಡಿದ ಅವರು, ಒಂದು ಗಂಟೆಗೂ ಹೆಚ್ಚು ಕಾಲ ವಿವಿಧ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಪ್ರಮುಖವಾಗಿ,ಕಂದಾಯ ಗ್ರಾಮಗಳ ರಚನೆ ಮತ್ತು ಪ್ರಗತಿ. ಆಶ್ರಯ ಯೋಜನೆಯಡಿ ಮನೆಗಳ ಹಂಚಿಕೆ ಮತ್ತು ಬಾಕಿ ಇರುವ ಕಾಮಗಾರಿಗಳು. ಸಾರ್ವಜನಿಕರ ಅರ್ಜಿಗಳ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬ ಧೋರಣೆ ತಪ್ಪಿಸುವಂತೆ ಸೂಚನೆ ನೀಡಿದರು.ಇದೇ ವೇಳೆ ರೈತ ಸಂಘಟನೆಯ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ತಾಲೂಕಿನ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದಾಗಿ ಬಡ ರೋಗಿಗಳು ಸಂಕಷ್ಟಕ್ಕೀಡಾಗುತ್ತಿದ್ದಾರೆ. ತುರ್ತು ಚಿಕಿತ್ಸೆಗೂ ದೂರದ ನಗರಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದು ದೂರಿದರು.ರೈತರ ಅಹವಾಲಿಗೆ ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲೇ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು. ತಾಲೂಕಿನ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಕೂಡಲೇ ಪರ್ಯಾಯ ವ್ಯವಸ್ಥೆ ಮಾಡುವಂತೆ ಮತ್ತು ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.