ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಬೇಲೂರು-ಹಾಸನ ರೈಲ್ವೆ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ವಿಳಂಬವಾಗಿಲ್ಲ ಹಾಗೂ ಸಮಸ್ಯೆಗಳಿಲ್ಲ. ಯೋಜನೆಯಡಿಯಲ್ಲಿ ೧೧.೯ ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಸ್ವಾಧೀನ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದು, ಹೆಚ್ಚುವರಿ ಭೂಮಿ ಬೇಡಿಕೆಯ ಸಂದರ್ಭಗಳಲ್ಲಿ ಮಾತ್ರ ಕೆಲ ತಾಂತ್ರಿಕ ಅಡಚಣೆಗಳು ಎದುರಾಗಿವೆ ಎಂದು ಹೇಳಿದರು. ಮಾಜಿ ಸಚಿವರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, “ಯಾವುದೇ ಭ್ರಷ್ಟಾಚಾರ ನಡೆದಿದ್ದರೆ ಸೂಕ್ತ ದೂರು ನೀಡಿದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದರು. ಬೇಲೂರು-ಆಲೂರು ನಡುವೆ ಇರುವ ೨೭ ಗ್ರಾಮಗಳಲ್ಲಿ ೪ ಗ್ರಾಮಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರದೇಶಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಭೂ ಪರಿಹಾರದ ಹಣ ವಾಪಸ್ ಹೋಗಿದೆ ಎಂಬ ಮಾತುಗಳಲ್ಲಿ ಸತ್ಯಾಂಶವಿಲ್ಲ. ಈಗ ಸರ್ಕಾರವೇ ಪ್ರತ್ಯೇಕ ಖಾತೆಯನ್ನು ತೆರೆಯುವ ಮೂಲಕ ನೇರವಾಗಿ ಹಣ ಜಮೆ ಮಾಡುತ್ತಿದೆ ಎಂದು ವಿವರಿಸಿದರು. ಕಾಮಸಮುದ್ರ ಯೋಜನೆಗೆ ಸಂಬಂಧಿಸಿದಂತೆ ಭೂ ಕೋರಿಕೆ ಸಮಿತಿ ಸೂಚನೆ ಮೇರೆಗೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತದೆ, ಜಿಲ್ಲಾಡಳಿತ ಸ್ವಯಂ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು.
ಈ ವರ್ಷದ ಮಳೆಯ ಕುರಿತು ಮಾಹಿತಿ ನೀಡಿದ ಡಿಸಿ, ಜಿಲ್ಲೆಯಲ್ಲಿ ವಾಡಿಕೆಯಂತೆ ೭೯.೯ ಮಿಮೀ ಮಳೆಯಾಗಬೇಕಿದ್ದರೆ ಕೇವಲ ೫೫.೨ ಮಿಮೀ ಮಾತ್ರ ದಾಖಲಾಗಿದೆ ಎಂದು ಹೇಳಿದರು. ಇತ್ತೀಚೆಗೆ ಸುರಿದ ಗಾಳಿಮಳೆಯಿಂದ ಒಬ್ಬ ಮಹಿಳೆ ಹಾಗೂ ೯ ಜಾನುವಾರುಗಳು ಮೃತಪಟ್ಟಿದ್ದು, ಎಲ್ಲಾ ಪ್ರಕರಣಗಳಿಗೆ ಪರಿಹಾರ ವಿತರಿಸಲಾಗಿದೆ. ಆಲೂರು ತಾಲೂಕಿನ ಮಾದಿಹಳ್ಳಿ ಗ್ರಾಮದ ನೀಲಮ್ಮ ಸಿಡಿಲಿಗೆ ಬಲಿಯಾಗಿದ್ದು, ಅವರ ಕುಟುಂಬಕ್ಕೆ ೫ ಲಕ್ಷ ಪರಿಹಾರ ನೀಡಲಾಗಿದೆ. ಇನ್ನೂ ಮೂರು ಪ್ರಕರಣಗಳಿಗೂ ಪರಿಹಾರ ವಿತರಿಸಲಾಗಿದೆ ಎಂದರು. ಮಳೆಯಿಂದಾಗಿ ೫ ದನದ ಕೊಟ್ಟಿಗೆಗಳು ಹಾನಿಗೊಂಡಿದ್ದು, ೩೪ ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಒಂದು ಮನೆ ಸಂಪೂರ್ಣ ಕುಸಿದಿದೆ. ಭಾಗಶಃ ಹಾನಿಗೊಳಗಾದ ಮನೆಗಳಿಗೆ ೬೫ ಸಾವಿರ ಹಾಗೂ ಸಂಪೂರ್ಣ ಕುಸಿದ ಮನೆಗೆ ೧.೨೦ ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಬೇಸಿಗೆಯ ಹಿನ್ನಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.ಫಲಿತಾಂಶದಲ್ಲಿ ಉತ್ತಮ ಸಾಧನೆ:
ಒಂದೊಂದು ಇಲಾಖೆಗೆ ಒಂದೊಂದು ಗುರಿ ನಿಗದಿಪಡಿಸಿದ್ದು, ಪೊಲೀಸ್ ಇಲಾಖೆ ತುಂಬಾ ಗಂಭೀರವಾಗಿ ತೆಗೆದುಕೊಂಡು ಡ್ರಗ್ಸ್ ನಿಯಂತ್ರಣ ಮಾಡಿದ್ದು, ಪ್ರತಿ ಫಾರ್ಮಸಿ ಅಂಗಡಿಗೆ ಭೇಟಿ ಮಾಡಿದ್ದು, ಪ್ರತಿ ಮೆಡಿಕಲ್ ಮುಂದೆ ಮಾದಕ ವಸ್ತುಗಳ ಮಾರಾಟ ನಿಷೇಧಿಸಲಾಗಿದೆ ಎನ್ನುವ ಎಚ್ಚರಿಕೆಯ ನಾಮಫಲಕ ಹಾಕಬೇಕು ಎನ್ನುವ ಸೂಚನೆ ಕೊಡಲಾಗಿದೆ. ಮಾದಕ ದ್ರವ್ಯವನ್ನಾಗಿ ಮಾಡುವುದನ್ನು ಬ್ಯಾನ್ ಮಾಡಿ, ಅಂತಹುದನ್ನು ಅನಾಧಿಕೃತವಾಗಿ ಯಾರು ಬಳಸುತ್ತಿದ್ದಾರೆ ಇಲ್ಲವೇ ನೀಡುತ್ತಿದ್ದಾರೆ ಅದರ ಮೇಲೆ ತಡೆ ಮಾಡಬೇಕು. ಟಾಸ್ಕ್‌ಪೋರ್ಸ್ ಟೀಮ್ ಮಾಡಬೇಕು. ಅಬಕಾರಿ ಇಲಾಖೆ, ಆರೋಗ್ಯ ಇಲಾಖೆಗೆ ಗುರಿ ಕೊಟ್ಟಿದ್ದೇವೆ. ಹೊಸದಾಗಿ ಹಿಮ್ಸ್ ಆಸ್ಪತ್ರೆಯಲ್ಲಿ ಡ್ರಗ್ಸ್ ಪರೀಕ್ಷೆಯ ಕೇಂದ್ರ ಪ್ರಾರಂಭಕ್ಕೆ ಸೂಚನೆ ಕೊಡಲಾಗಿದೆ. ೪೦ ಬೆಡ್ ಇದ್ದು, ಇದರಲ್ಲಿ ೧೦ ಬೆಡ್ ಡ್ರಗ್ಸ್ ಸಂಬಂಧಿಸಿದಂತೆ ಮೀಸಲಿಡಲಾಗಿದೆ. ನಮ್ಮ ಹಾಸನ ಜಿಲ್ಲೆಯಲ್ಲಿ ನಾಲ್ಕು ರಿಹಾಬಿಟೇಶನ್ ಸೆಂಟರ್ ಇದೆ. ಇದರಲ್ಲಿ ೧೮೪ ಜನ ಆಲ್ಕೋಹಾಲ್ ರೋಗಿಗಳು ಇದ್ದಾರೆ. ಇನ್ನೂ ೫ ಜನ ಆಲ್ಕೋ ಹಾಲ್ ಮತ್ತು ಡ್ರಗ್ಸ್ ಎರಡನ್ನ ತೆಗೆದುಕೊಂಡವರು ಇದ್ದಾರೆ. ನಾವು ಪರಿಶೀಲನೆ ಮಾಡಿದಾಗ ಪೊಲೀಸ್ ಇಲಾಖೆಯಿಂದ ಸುಮಾರು ಕೇಸುಗಳು ಎಷ್ಟು ಬುಕ್ ಆಗಿದೆ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದೇವೆ. ಅರಣ್ಯ ಇಲಾಖೆಯಿಂದಲೂ ಮಾಹಿತಿ ಪಡೆಯಲಾಗಿದೆ. ಒಂದೊಂದು ಇಲಾಖೆಗೂ ಅವರವರ ಜವಾಬ್ದಾರಿ ಕೊಡಲಾಗಿದ್ದು, ಸವಾಲು ತುಂಬ ಇದ್ದು ಪ್ರಯತ್ನ ನಿರಂತರ ನಡೆಯುತ್ತಿದೆ ಎಂದರು. ಅಧಿಕಾರಿಗಳು ಯಾವ ಒತ್ತಡದಲ್ಲೂ ಕೆಲಸ ಮಾಡುವ ಅವಶ್ಯಕತೆ ಇಲ್ಲ. ನಿಯಮಾನುಸಾರ ಕೆಲಸ ಮಾಡಿದರೇ ಸಾಕು ಎಂದು ಹೇಳಿದರು.