ಕನ್ನಡಪ್ರಭ ವಾರ್ತೆ ಕುಶಾಲನಗರ
ಸಭೆಯಲ್ಲಿ ಪಾಲ್ಗೊಳ್ಳುವ ಸಂದರ್ಭ ಅಧಿಕಾರಿಗಳು ಸ್ಥಳ ಪರಿಶೀಲನೆ ಜೊತೆಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಿ ಬರುವಂತಾಗಬೇಕು ಎಂದು ಕೊಡಗು ಜಿಲ್ಲಾಧಿಕಾರಿ ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಸೋಮಶೇಖರ್ ತಾಲೂಕು ಮಟ್ಟದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಳೆಗಾಲದಲ್ಲಿ ಪ್ರವಾಹ, ಭೂಕುಸಿತ, ವಿವರ ಪೂರ್ವ ಸಿದ್ಧತೆ ವರದಿ ಮತ್ತಿತರ ವಿಷಯಗಳ ಬಗ್ಗೆ ತಾಲೂಕು ಅಧಿಕಾರಿಗಳಿಂದ ಮಾಹಿತಿ ಪಡೆಯುವ ಸಂದರ್ಭ ಅಧಿಕಾರಿಗಳು ಯಾವುದೇ ಪೂರ್ವ ಸಿದ್ಧತೆಗಳ ಸಭೆ ನಡೆಸದಿರುವ ಬಗ್ಗೆ ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದರು. ಹಿಂದೆ ತಾಲೂಕು ವ್ಯಾಪ್ತಿಯಲ್ಲಿ ಮಳೆಗಾಲ ಸಂದರ್ಭ ನಡೆದ ಘಟನೆಗಳ ಬಗ್ಗೆ ವಿವರ ಬಯಸಿದ ಜಿಲ್ಲಾಧಿಕಾರಿಗಳು ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವಂತೆ ಸೂಚಿಸಿದರು. ಎಲ್ಲ ಪೂರ್ವ ಸಿದ್ಧತೆ ನಂತರ ಮತ್ತೊಮ್ಮೆ ಸಭೆ ನಡೆಸುವುದಾಗಿ ತಿಳಿಸಿದರು.ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಬಡಾವಣೆಗಳ ವಾಸ್ತವ ಸ್ಥಿತಿಗತಿ ಬಗ್ಗೆ ಮುಖ್ಯ ಅಧಿಕಾರಿ ಗಿರೀಶ್ ಅವರಿಂದ ಸಂಪೂರ್ಣ ಮಾಹಿತಿ ಬಯಸಿದರು. ಕಾವೇರಿ ನದಿ ಹಾರಂಗಿ ತುಂಬಿ ಹರಿಯುವ ಸಂದರ್ಭ ನದಿ ತಟದ ತಗ್ಗು ಪ್ರದೇಶಗಳ ಬಡಾವಣೆಗಳು ಜಲಾವೃತಗೊಳ್ಳುವ ಬಗ್ಗೆ ಮಾಹಿತಿ ನೀಡಿದ ಗಿರೀಶ್ ಕಾವೇರಿ ತುಂಬಿ ಹರಿಯುವ ಸಂದರ್ಭ ಹಾರಂಗಿ ಜಲಾಶಯದಿಂದ ಹಂತ ಹಂತವಾಗಿ ನೀರು ಬಿಡುಗಡೆಗೊಳಿಸಿದಲ್ಲಿ ಪ್ರವಾಹ ನಿಯಂತ್ರಣ ಮಾಡಬಹುದು ಎಂದು ತಿಳಿಸಿದರು. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಈ ಮೂಲಕ ಕುಶಾಲನಗರ ವ್ಯಾಪ್ತಿಯ ತಗ್ಗು ಪ್ರದೇಶದ ಬಡಾವಣೆಗಳಲ್ಲಿ ಪ್ರವಾಹ ನಿಯಂತ್ರಣ ಮಾಡಲಾಗಿದೆ ಎಂದು ತಿಳಿಸಿದರು.ಈ ಸಂಬಂಧ ಅಣೆಕಟ್ಟು ಅಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಗಮನಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಪ್ರವಾಹದಿಂದ ಸಂತ್ರಸ್ತರಾಗುವ ನಿವಾಸಿಗಳಿಗೆ ಅಗತ್ಯ ಕಾಳಜಿ ಕೇಂದ್ರಗಳನ್ನು ತೆರೆಯುವ ಸಿದ್ಧತೆ ಬಗ್ಗೆ ಪೂರ್ವ ತಯಾರಿಯ ಬಗ್ಗೆ ನೋಡಲ್ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಚರ್ಚಿಸಿದರು. ನೋಡಲ್ ಅಧಿಕಾರಿಗಳು ಗ್ರಾಮಗಳ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಗ್ರ ಮಾಹಿತಿಯನ್ನು ಕಲೆಹಾಕಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಕಾವೇರಿ ನದಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದ ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಬಿ.ಜೆ. ಪುಟ್ಟಸ್ವಾಮಿ ನದಿ ನಿರ್ವಹಣೆಗಾಗಿ ವಿರಾಜಪೇಟೆ ಶಾಸಕರ ಅನುದಾನ ಅಡಿಯಲ್ಲಿ 50 ಕೋಟಿ ಬಿಡುಗಡೆಯಾಗಿದ್ದು, ಸರ್ವೆ ಕಾರ್ಯ ನಡೆದಿದೆ. ಟೆಂಡರ್ ಪ್ರಕ್ರಿಯೆ ಇನ್ನಷ್ಟೇ ಆಗಬೇಕಿದೆ ಎಂದು ಮಾಹಿತಿ ಒದಗಿಸಿದರು.ಮಾಹಿತಿ ಕೊರತೆಯೊಂದಿಗೆ ಸಭೆಗೆ ಆಗಮಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವನಾಧಿಕಾರಿಗಳು ಸ್ಥಳೀಯ ಗ್ರಾಪಂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಾಸ್ತವ ಸ್ಥಿತಿಗತಿ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.ನದಿ ಬೆಟ್ಟಗೆ ಸನಿಹದಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಆದೇಶಿಸಿದರು.ವಿದ್ಯುತ್ ನಿಗಮದ ತಾಲೂಕುಗಳ ವ್ಯಾಪ್ತಿಯಲ್ಲಿ ಸಿಬ್ಬಂದಿಗಳ ಕೊರತೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಮೂಲಕ ಮಾಹಿತಿ ಬಯಸಿದ ಜಿಲ್ಲಾಧಿಕಾರಿಗಳು, ಮಳೆಗಾಲದಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದರು. ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಸಭೆಯಲ್ಲಿ ಉಪಸ್ಥಿತರಿದ್ದರು.