ಕೋಲಾರ: ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ನೂತನ ಅಧ್ಯಕ್ಷ ಕೊತ್ತೂರು ಮಂಜುನಾಥ್‌ರನ್ನು ವಕ್ಕಲೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ಪಾಲಾಕ್ಷಗೌಡ ನೇತೃತ್ವದ ಆಡಳಿತ ಮಂಡಳಿ ನಿರ್ದೇಶಕರೊಂದಿಗೆ ಗುರುವಾರ ಬ್ಯಾಂಕ್‌ನಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರೈತರ ಅಭಿವೃದ್ಧಿಗಾಗಿ ಸಹಕಾರಿ ವ್ಯವಸ್ಥೆಯಲ್ಲಿ ರಾಜಕೀಯ ಮಾಡಬಾರದು. ವಕ್ಕಲೇರಿ ಸೊಸೈಟಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಅಗತ್ಯವಿರುವಷ್ಟು ಸಾಲ ನೀಡಲು ಡಿಸಿಸಿ ಬ್ಯಾಂಕ್ ಸಿದ್ಧವಿದೆ ಎಂದರು. ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯ ರೈತರು ಹಾಗೂ ಜನರ ಆರ್ಥಿಕ ಚಟುವಟಿಕೆಗಳಿಗೆ ಡಿಸಿಸಿ ಬ್ಯಾಂಕ್ ಜೀವನಾಡಿಯಾಗಿದೆ. ಸಹಕಾರಿ ಸಂಘಗಳು ರೈತರ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಅದಕ್ಕಾಗಿ ಸೊಸೈಟಿಗಳ ಸಹಕಾರ ಮುಖ್ಯವಾಗಿದೆ ಎಂದರು. ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ವಕ್ಕಲೇರಿ ಸೊಸೈಟಿ ಉಪಾಧ್ಯಕ್ಷೆ ರಮಾದೇವಿ, ನಿರ್ದೇಶಕರಾದ ವೀರೇಗೌಡ, ಮೈಲಾಂಡಹಳ್ಳಿ ಮುರಳಿ, ಮುನಿಕೃಷ್ಣಪ್ಪ, ಸಿಇಒ ಮಂಜುನಾಥ್ ಇದ್ದರು.