ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಗರದ ಖಾಸಗಿ ಹೋಟೆಲ್ ನಲ್ಲಿ ಬೆಂಬಲಿಗರ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಅಧ್ಯಕ್ಷರನ್ನಾಗಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಚುನಾವಣಾ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸೋಮವಾರ ದಿನವಿಡೀ ಜಾರಕಿಹೊಳಿ ಬಣ ಹಾಗೂ ರಮೇಶ ಕತ್ತಿ-ಲಕ್ಷ್ಮಣ ಸವದಿ ಬಣದಿಂದ ತೀವ್ರ ರಾಜಕೀಯ ಚಟುವಟಿಕೆ ನಡೆದವು. ಎರಡು ಬಣಗಳಿಂದ ತಂತ್ರ, ಪ್ರತಿತಂತ್ರ ರೂಪಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಭೆ ನಡೆಸಿದವು. ಇತ್ತೀಚೆಗೆ ನಡೆದ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಜಾರಕಿಹೊಳಿ ಬಣ 13 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲೂ ಜಾರಕಿಹೊಳಿ ಬಣ ಮೇಲುಗೈ ಸಾಧಿಸಿದೆ. ಜಾರಕಿಹೊಳಿ ಸಹೋದರರು ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ನೀಡಿದ್ದ ಭರವಸೆಯಂತೆಯೇ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳಿಗೆ ಲಿಂಗಾಯತರಿಗೆ ಆದ್ಯತೆ ನೀಡಿದ್ದಾರೆ.30-30 ತಿಂಗಳು ಅಧಿಕಾರ ಹಂಚಿಕೆ:
ನುಡಿದಂತೆ ನಡೆದಿದ್ದೇವೆ: ಶಾಸಕ ಬಾಲಚಂದ್ರ ಜಾರಕಿಹೊಳಿ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಸ್ಥಾನ ಲಿಂಗಾಯತ ಸಮಾಜಕ್ಕೆ ನೀಡಿದ್ದೇವೆ. ಜೊಲ್ಲೆ ಅವರನ್ನು ಜಾರಕಿಹೊಳಿ ಅವರು ಸೋಲಿಸುತ್ತಾರೆ ಎಂದು ಅಪಪ್ರಚಾರ ಮಾಡಿದ್ದರು. ಮೂರು ಜನ ಅಣ್ತಮ್ಮಂದಿರು ಸೇರಿಕೊಂಡು ಗೆಲ್ಲಿಸಿ ಅಧ್ಯಕ್ಷ ಕೂಡ ಮಾಡಿದ್ದೇವೆ. ಐದು ವರ್ಷದಲ್ಲಿ ಬ್ಯಾಂಕ್ ಒಂದನೇ ಸ್ಥಾನಕ್ಕೆ ತರುತ್ತೇವೆ ಎಂದರು.
ಒಮ್ಮತದಿಂದ ಅವಿರೋಧ ಆಯ್ಕೆ: ಸತೀಶ
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಇರಲಿ ನಮ್ಮ ಜತೆ ಇದ್ದವರನ್ನು ನಾವು ಕೈ ಬಿಡಲ್ಲ. ಅಣ್ಣಾಸಾಹೇಬ ಜೊಲ್ಲೆ ಅವರು ನಿರ್ದೇಶಕರಾಗಿ ಆಯ್ಕೆಯಾಗಲು ಅವರ ಜತೆ ನಿಂತಿದ್ದೇವೆ. ಈಗಲೂ ಅವರು ಅಧ್ಯಕ್ಷರಾಗಿ ಆಯ್ಕೆಯಾಗಲು ನಾವು ಸಹಕಾರ ನೀಡುತ್ತೇವೆ. ನಮ್ಮ ಪರ ಸದಸ್ಯರನ್ನು ಸೆಳೆಯಲು ಬೆಂಗಳೂರು, ಬೆಳಗಾವಿಯಲ್ಲಿ ಇದ್ದುಕೊಂಡು ಮಸಾಜ್ ಮಾಡಿದರು. ಆದರೆ, ನಾವು ಆಯುರ್ವೇದೀಕ್ ಡಾಕ್ಟರ್ ಇದ್ದೇವೆ. ಸರಿಯಾದ ಔಷಧ ಕೊಟ್ಟಿದ್ದೇವೆ. ಹೀಗಾಗಿ ಸರಿಯಾಗಿದೆ. ಜಿಲ್ಲೆಯಿಂದ ಹಾಲುಮತ ಸಮಾಜದವರನ್ನು ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆ ಮಾಡಲಾಗುವುದು ಎಂದರು.
ಬೆಳಗಾವಿ: ಜಾರಕಿಹೊಳಿ ಸಹೋದರರು ನನ್ನ ಮೇಲೆ ವಿಶ್ವಾಸ ಇಟ್ಟಕೊಂಡು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ನಾನು ಉಪಾಧ್ಯಕ್ಷ ರಾಜು ಕಾಗೆ ಸೇರಿಕೊಂಡು ಬರುವ ಐದು ವರ್ಷದಲ್ಲಿ ಡಿಸಿಸಿ ಬ್ಯಾಂಕ್ ನಂಬರ್ ಒನ್ ಸ್ಥಾನಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎಂದು ಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜು ಕಾಗೆ ಮಾತನಾಡಿ, ವಯಸ್ಸಿನಲ್ಲಿ ಡಿಸಿಸಿ ಬ್ಯಾಂಕ್‌ನಲ್ಲಿ ನಾನೇ ಹಿರಿಯ ವಯಸ್ಕರ. ಎಲ್ಲ ನಿರ್ದೇಶಕರಲ್ಲಿ ಸಣ್ಣ ಪುಟ್ಟ ಮನಸ್ತಾಪ ಇದ್ದರೂ ಅದನ್ನು ಬಗೆ ಹರಿಸಿ ಎಲ್ಲರ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸಲಾಗುವುದು. ನಾವು ಸಹಕಾರ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಎಲ್ಲ ಸದಸ್ಯರು ಸೇರಿಕೊಂಡು ಡಿಸಿಸಿ ಬ್ಯಾಂಕ್ ಮಾದರಿಯನ್ನಾಗಿ ಮಾಡುತ್ತೇವೆ ಎಂದರು.