ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ೧೨ ನಿರ್ದೇಶಕ ಸ್ಥಾನಗಳಿಗೆ ನ.೨ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಶುಕ್ರವಾರ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿತ್ತು. ಒಟ್ಟು ೨೫ ಅಭ್ಯರ್ಥಿಗಳು ೪೩ ಉಮೇದುವಾರಿಕೆ ಸಲ್ಲಿಸಿದರು.ಮಂಡ್ಯ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಎಸ್.ಸತೀಶ್, ಹಳೇ ಬೂದನೂರು ಸ್ವಾಮಿ, ಮದ್ದೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಪಿ.ಸಂದರ್ಶ, ಮಳವಳ್ಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಪಿ.ಎಂ.ನರೇಂದ್ರಸ್ವಾಮಿ, ರಾವಣಿ ಶಿವಲಿಂಗಯ್ಯ, ಪಾಂಡವಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಎ.ಆರ್.ಅಶೋಕ, ಎಚ್.ಸಿ.ಪುಟ್ಟಸ್ವಾಮಿಗೌಡ, ಶ್ರೀರಂಗಪಟ್ಟಣ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಡಿ.ಇ.ಧನಂಜಯ, ಬಿ.ಗಿರೀಶ್, ಕೆ.ಆರ್.ಪೇಟೆ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಎಸ್.ಎಸ್.ಅಂಬರೀಶ್, ನಾಗಮಂಗಲ ತಾಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸಿ.ಸಚಿನ್ ಚಲುವರಾಯಸ್ವಾಮಿ ಅವರು ಉಮೇದುವಾರಿಕೆ ಸಲ್ಲಿಸಿದರು.
ಜಿಲ್ಲೆಯಲ್ಲಿನ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ವಿ.ದಿನೇಶ್, ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಎಚ್.ಅಶೋಕ, ಎಸ್.ಕೆ.ನಂಜೇಗೌಡ, ಬಿ.ಎನ್.ಹರ್ಷ, ಮಂಡ್ಯ ಉಪವಿಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಸಿ.ಚಲುವರಾಜು, ವಿ.ಎಂ.ವಿಶ್ವನಾಥ್, ಎಸ್.ಶಿವರಾಜ, ಪಾಂಡವಪುರ ಉಪ ವಿಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಎಂ.ಸುರೇಶ್‌ಗೌಡ, ಜಿ.ಈ.ರವಿಕುಮಾರ, ಎ.ವಿಜೇಂದ್ರಮೂರ್ತಿ, ಎನ್.ಎಂ.ದೇವೇಗೌಡ, ಕೆ.ರಾಮಚಂದ್ರ, ಸಹಕಾರ ಸಂಘಗಳು (ಫಾರ್ಮಿಂಗ್ ಸಹಕಾರ ಸಂಘಗಳು ಸೇರಿದಂತೆ) ಕ್ಷೇತ್ರದಿಂದ ಕೆ.ಸಿ.ಜೋಗಿಗೌಡ, ಎನ್.ಮುರಳಿ ನಾಮಪತ್ರ ಸಲ್ಲಿಸಿದರು.ಮಂಡ್ಯ ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಬೆಂಬಲಿತ ಹಲವು ಅಭ್ಯರ್ಥಿಗಳು ನಗರದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಮರ್ಪಿಸಿದರು.
ಹೊಸಬರಿಂದಲೂ ಪೈಪೋಟಿ:ಕಳೆದ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದ ಶಾಸಕ ಪಿ.ನರೇಂದ್ರಸ್ವಾಮಿ ಸೇರಿದಂತೆ ಕೆ.ಸಿ.ಜೋಗಿಗೌಡ, ಪಿ.ಸಂದರ್ಶ, ಕೆ.ವಿ.ದಿನೇಶ್, ಎಚ್.ಅಶೋಕ ಅವರು ಮರು ಆಯ್ಕೆ ಬಯಸಿ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಹೊಸಬರೂ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಕೆಲವರು ರಾಜಕೀಯ ಪಾದಾರ್ಪಣೆಗೆ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಮೊದಲನೇ ಮೆಟ್ಟಿಲಾಗಿಸಿಕೊಂಡಿದ್ದಾರೆ. ಮನ್‌ಮುಲ್ ಚುನಾವಣೆಯಿಂದ ದೂರ ಉಳಿದಿದ್ದ ಶೀಳನೆರೆ ಅಂಬರೀಶ್, ಸೋಲು ಕಂಡಿದ್ದ ಕಾಡೇನಹಳ್ಳಿ ರಾಮಚಂದ್ರ, ವಿ.ಎಂ.ವಿಶ್ವನಾಥ್ ಅವರು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಸಾತನೂರು ಎಸ್.ಸತೀಶ್ ಮತ್ತೊಮ್ಮೆ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಮತ್ತೊಮ್ಮೆ ಬ್ಯಾಂಕ್ ಅಧ್ಯಕ್ಷರಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಶಾಸಕ ಪಿ.ರವಿಕುಮಾರ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಸ್ಟಾರ್ ಚಂದ್ರು ಸೇರಿ ಇತರರು ಸಾಥ್ ನೀಡಿದರೆ, ಸಚಿನ್ ಚಲುವರಾಯಸ್ವಾಮಿ ಅವರಿಗೆ ಶಾಸಕ ಕೆ.ಎಂ.ಉದಯ್, ಮಾಜಿ ಶಾಸಕ ಎಚ್.ಬಿ.ರಾಮು, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ ಅವರು ಹಾಜರಿದ್ದರು.ಜೆಡಿಎಸ್-ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಕೊರತೆ:
ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿತ್ತು. ಮೈತ್ರಿ ಪಕ್ಷದಿಂದ ಅಭ್ಯರ್ಥಿಗಳಾಗುವುದಕ್ಕೆ ಈ ಬಾರಿ ಹೆಚ್ಚಿನ ಮಂದಿ ಒಲವು ತೋರಿಲ್ಲ. ಜೊತೆಗೆ ಹಲವಾರು ಕ್ಷೇತ್ರಗಳಿಂದ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವಂತೆ ಕಂಡುಬರುತ್ತಿದೆ. ಉಭಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಕೊರತೆ ಇರುವುದು ಕಾಂಗ್ರೆಸ್ಸಿಗರಿಗೆ ಹೆಚ್ಚಿನ ಅನುಕೂಲವಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.ಜೆಡಿಎಸ್ -ಬಿಜೆಪಿ ನಾಯಕರು ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರಲಿಲ್ಲ. ಚುನಾವಣೆಗೆ ಮುನ್ನ ಅಭ್ಯರ್ಥಿಗಳ ಆಯ್ಕೆ ಕುರಿತು ಪೂರ್ವಭಾವಿ ಸಭೆ ನಡೆಸಲಿಲ್ಲ. ಆಕಾಂಕ್ಷಿಗಳಿಗೆ ಉತ್ಸಾಹ ತುಂಬುವ ಕೆಲಸ ಮಾಡಲಿಲ್ಲ. ಇದರಿಂದ ಆಕಾಂಕ್ಷಿಗಳಾಗಿದ್ದವರು ಹಿಂದೆ ಸರಿದರು, ನಾಯಕರ ಬೆಂಬಲವಿಲ್ಲದ ಕಾರಣ ಹಲವು ಪ್ರಭಾವಿಗಳು ಹಿಂದೇಟು ಹಾಕಿದರು. ಕೊನೆಗೆ ಪಕ್ಷದಿಂದ ಯಾರನ್ನಾದರೂ ಕಣಕ್ಕಿಳಿಸಿ ಅಸ್ತಿತ್ವ ಕಾಪಾಡಿಕೊಳ್ಳಲು ಕೆಲವರನ್ನು ಕಣಕ್ಕಿಳಿಸಿದ್ದಾರೆ. ಕೊನೆಯ ಹಂತದಲ್ಲಾದರೂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಕ್ಕೂ ನಾಯಕರು ಒಲವು ತೋರಲೇ ಇಲ್ಲ. ಇದು ಮೈತ್ರಿ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಕ್ಷೀಕರಿಸುವಂತಿದೆ.
ಚಲುವರಾಯಸ್ವಾಮಿ ಪುತ್ರ ಸಚಿನ್ ಸ್ಪರ್ಧೆ:ನಾಗಮಂಗಲ ತಾಲೂಕು ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ ಸಚಿವ ಎನ್.ಚಲುವರಾಯಸ್ವಾಮಿ ಪುತ್ರ ಸಚಿನ್ ಚಲುವರಾಯಸ್ವಾಮಿ ಅವರು ನಂತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಇದೀಗ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸುವುದರೊಂದಿಗೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವಂತೆ ಕಂಡುಬರುತ್ತಿದ್ದಾರೆ. ಮತ್ತೊಂದೆಡೆ ಮದ್ದೂರು ಶಾಸಕ ಕೆ.ಎಂ.ಉದಯ್ ಕೂಡ ತಮ್ಮ ಆಪ್ತ ಸಿ.ಚಲುವರಾಜು ಅವರನ್ನು ನಿರ್ದೇಶಕ ಸ್ಥಾನಕ್ಕೆ ಕಣಕ್ಕಿಳಿಸಿದ್ದಾರೆ.
ಆಟೋರಿಕ್ಷಾ, ಗ್ಯಾಸ್ ಸಿಲಿಂಡರ್ ಚಿಹ್ನೆಗೆ ಬೇಡಿಕೆ:ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿರುವವರ ಪೈಕಿ ಬಹುತೇಕರು ಆಟೋರಿಕ್ಷಾ, ಗ್ಯಾಸ್ ಸಿಲಿಂಡರ್‌ಗೆ ಹೆಚ್ಚು ಬೇಡಿಕೆ ಇಟ್ಟಿದ್ದಾರೆ. ೨೦ಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ಆಟೋರಿಕ್ಷಾ, ಗ್ಯಾಸ್ ಸಿಲಿಂಡರ್ ಚಿಹ್ನೆಯನ್ನು ತಮ್ಮದಾಗಿಸಿಕೊಳ್ಳಲು ಬಯಸಿದ್ದಾರೆ. ಕೆಲವರು ಸೀಲಿಂಗ್ ಫ್ಯಾನ್, ಉಂಗುರ, ಪ್ರೆಷರ್ ಕುಕ್ಕರ್, ಜೋಡಿ ತೆಂಗಿನ ಕಾಯಿ, ಟೇಬಲ್ ಸೇರಿದಂತೆ ಇನ್ನಿತರ ಚಿಹ್ನೆಗಳಿಗೆ ಕೋರಿಕೆಯನ್ನಿಟ್ಟಿದ್ದಾರೆ.