ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಈಗಾಗಲೇ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಮೊದಲ ಹಂತದ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ 4386 ವಿದ್ಯಾರ್ಥಿಗಳು ಹಾಜರಾಗಿದ್ದು, 3856 ತೇರ್ಗಡೆ ಹೊಂದಿದ್ದಾರೆ. ಈ ಬಾರಿ ಉತ್ತಮ ಫಲಿತಾಂಶಕ್ಕೆ ಶ್ರಮಿಸಲಾಗವುದು
ಹರಪನಹಳ್ಳಿ: ಸರಿಯಾಗಿ ಶಾಲೆಗೆ ಹೋಗದೇ ಸಂಘಟನೆಯಲ್ಲಿ ಗುರುತಿಸಿಕೊಂಡು ರಾಜಕೀಯ ಮಾಡುವ ಶಿಕ್ಷಕರು ತಮ್ಮ ವೃತ್ತಿಗೆ ರಾಜೀನಾಮೆ ಕೊಟ್ಟು ಬನ್ನಿ. ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗವುದು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಪಂ ರಾಜೀವ್ ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವ ಶಿಕ್ಷಕರು ಎಲ್ಲೆಲ್ಲಿ ಕೂಡುತ್ತಾರೆ, ಏನು ಮಾಡುತ್ತಾರೆ ಎಂಬುದರ ಬಗ್ಗೆ ನನಗೆ ಮಾಹಿತಿ ಇದೆ. ಅವರ ಹೆಸರು ಸಹ ನಾನು ಹೇಳಬಲ್ಲೆ. ಇಂತಹ ಶಿಕ್ಷಕರ ಬಗ್ಗೆ ಏನು ಕ್ರಮ ಕೈಗೊಂಡಿದೀರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಅವರನ್ನು ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಎಚ್.ಲೇಪಾಕ್ಷಪ್ಪ, ಈಗಾಗಲೇ ಅಂತಹ ಶಿಕ್ಷಕರ ಬಗ್ಗೆ ಮಾಹಿತಿ ಪಡೆದು ಅವರಿಗೆ ತಿಳಿವಳಿಕೆ ಹೇಳಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡಿ ಎಂದು ಎಚ್ಚರಿಕೆ ಕೊಟ್ಟಿದ್ದೇವೆ. ಇಷ್ಟೆಲ್ಲ ಮಾಡಿದರೂ ಕೆಲವರು ಬಿಇಒ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಆಪಾದನೆ ಮಾಡುತ್ತಿದ್ದಾರೆ ಎಂದು ಶಾಸಕರ ಗಮನಕ್ಕೆ ತಂದರು. ಆಗ ಶಾಸಕರು ನೀವು ಅಂತಹ ಶಿಕ್ಷರಿಗೆ ನೋಟಿಸ್ ಕೊಡಿ, ಮುಂದಿನ ಕ್ರಮ ನಾನು ಕೈಗೊಳ್ಳುತ್ತೇನೆ ಎಂದರು.
ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ಈಗಾಗಲೇ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಮೊದಲ ಹಂತದ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ 4386 ವಿದ್ಯಾರ್ಥಿಗಳು ಹಾಜರಾಗಿದ್ದು, 3856 ತೇರ್ಗಡೆ ಹೊಂದಿದ್ದಾರೆ. ಈ ಬಾರಿ ಉತ್ತಮ ಫಲಿತಾಂಶಕ್ಕೆ ಶ್ರಮಿಸಲಾಗವುದು ಎಂದು ಬಿಇಒ ತಿಳಿಸಿದರು.ಶಾಸಕರ ಅವಿರತ ಶ್ರಮದಿಂದ ತಾಲೂಕಿಗೆ ಹೊಸದಾಗಿ ದುಗ್ಗಾವತಿ, ಗೋವೆರಹಳ್ಳಿ ಶಿವಪುರ ಗ್ರಾಮಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರಾಗಿವೆ ಎಂದು ಬಿಇಒ ಎಚ್.ಲೇಪಾಕ್ಷಪ್ಪ ಸಭೆಯ ಗಮನಕ್ಕೆ ತಂದರು.
ತಾಲೂಕಿನಲ್ಲಿ ಬೇಸಿಗೆ ಸಮೀಸುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಿ. 41ಕಡೆ ಜೆಜೆಎಂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಶಾಸಕಿ ಎಂ.ಪಿ.ಲತಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಮಂಜ್ಯಾನಾಯ್ಕ್ ಗಮನಕ್ಕೆ ತಂದರು. ಕಾಮಗಾರಿಗಳು ಪ್ರಗತಿಯಲ್ಲಿವೆ. ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಉತ್ತರಿಸಿದರು.ಕಾಮಗಾರಿ ಬಾಕಿ:
ವಟ್ಲಹಳ್ಳಿ-ಚಿಗಟೇರಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬವಾಗಿದೆ. ಕೂಡಲೇ ಪೂರ್ಣಗೊಳಿಸಿ ಎಂದು ಶಾಸಕರು ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ಹಲುವಾಗಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರಿಯಾಗಿ ವೈದ್ಯರು ಇರುವುದಿಲ್ಲ ಎಂಬ ದೂರುಗಳಿವೆ. ಹರಪನಹಳ್ಳಿ ಬಿಟ್ಟರೆ ಹಲುವಾಗಲು ದೊಡ್ಡ ಊರು 22 ಹಳ್ಳಿಗಳ ಜನರು ಬರುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಆರೋಗ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಬಸವರಾಜ ಇ-ಸ್ವತ್ತು ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸಭೆಯ ಗಮನಕ್ಕೆ ತಂದಾಗ, ತಾಪಂ ಇಒ ಚಂದ್ರಶೇಖರ ಇ-ಸ್ವತ್ತು 2.0 ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ ಇದೆ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ಉತ್ತರಿಸಿದರು.ಕೃಷಿ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಮೀನುಗಾರಿಕೆ, ರೇಷ್ಮೆ, ಆರಣ್ಯ ಲೋಕಪಯೋಗಿ ನಗರಸಭೆ, ಸಾರಿಗೆ, ಪಿಆರ್‌ಇಡಿ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂದಿಸಿದಂತೆ ವರದಿ ಮಂಡಿಸಿದರು.
ತಹಶೀಲ್ದಾರ ಬಿ.ವಿ.ಗಿರೀಶ ಬಾಬು, ತಾ.ಪಂ ಇಒ ವೈಎಚ್.ಚಂದ್ರಶೇಖರಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.