ಡಿಸಿಸಿ ಬ್ಯಾಂಕ್‌ ಚುನಾವಣೆ: 5 ಸ್ಥಾನ, 10 ಮಂದಿ ಸ್ಪರ್ಧೆ

KannadaprabhaNewsNetwork |  
Published : Jan 17, 2026, 02:15 AM IST
ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ | Kannada Prabha

ಸಾರಾಂಶ

ಚಿಕ್ಕಮಗಳೂರುಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ನ ಆಡಳಿತ ಮಂಡಳಿಯ 5 ನಿರ್ದೇಶಕರ ಸ್ಥಾನಗಳಿಗೆ ಶನಿವಾರ ಮತದಾನ ನಡೆಯಲಿದೆ.ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ ಬೆಳಿಗ್ಗೆ 9 ಗಂಟೆಗೆ ಮತದಾನ ಆರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯಗೊಳ್ಳಲಿದೆ. ಬಳಿಕ ಮತ ಎಣಿಕೆ ನಡೆಯಲಿದೆ.

- 4 ಕ್ಷೇತ್ರ , ಇಂದು ಮತದಾನ, ಸಂಜೆ ವೇಳೆಗೆ ಫಲಿತಾಂಶ ಪ್ರಕಟ । ಕಣದಲ್ಲಿ ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ, ಕೆ.ಎಸ್‌. ಆನಂದ್‌, ಎಂ.ಪಿ.ಕುಮಾರಸ್ವಾಮಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ನ ಆಡಳಿತ ಮಂಡಳಿಯ 5 ನಿರ್ದೇಶಕರ ಸ್ಥಾನಗಳಿಗೆ ಶನಿವಾರ ಮತದಾನ ನಡೆಯಲಿದೆ.

ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ ಬೆಳಿಗ್ಗೆ 9 ಗಂಟೆಗೆ ಮತದಾನ ಆರಂಭವಾಗಿ ಸಂಜೆ 4 ಗಂಟೆಗೆ ಮುಕ್ತಾಯಗೊಳ್ಳಲಿದೆ. ಬಳಿಕ ಮತ ಎಣಿಕೆ ನಡೆಯಲಿದೆ.

ಬ್ಯಾಂಕಿನ ಒಟ್ಟು 13 ಸ್ಥಾನಗಳಿಗೆ ಜ. 17 ರಂದು ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿತ್ತು.ಈ ಪೈಕಿ 8 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಇನ್ನುಳಿದ 5 ಸ್ಥಾನಗಳಿಗೆ ಶನಿವಾರ ಮತದಾನ ನಡೆಯಲಿದೆ. ಕಣದಲ್ಲಿ 5 ಸ್ಥಾನ ಗಳಿಗೆ 10 ಮಂದಿ ಸ್ಪರ್ಧೆಯಲ್ಲಿದ್ದಾರೆ. ಈ ಬಾರಿ ಚುನಾವಣೆ ಹಲವು ಕುತೂಹಲಕ್ಕೆ ಕಾರಣವಾಗಿದೆ.

ಅಂದರೆ, ಇದೇ ಮೊದಲ ಬಾರಿಗೆ ಕಡೂರು ಶಾಸಕ ಕೆ.ಎಸ್‌. ಆನಂದ್‌, ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಹಾಗೂ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ವಿಧಾನಪರಿಷತ್ ಸದಸ್ಯ ಎಸ್‌.ಎಲ್‌. ಭೋಜೇಗೌಡ ಪುನರಾಯ್ಕೆ ಬಯಸಿ ಸ್ಪರ್ಧೆ ಮಾಡಿದ್ದಾರೆ.ಕುತೂಹಲ:

ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿನ ಚುನಾವಣೆ ಕುತೂಹಲ ಮೂಡಿಸಿದೆ. ಕೆಲವೆಡೆ ನೇರಾ ನೇರಾ ಸ್ಪರ್ಧೆ ಇದ್ದರೆ, ಒಂದು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಚಿಕ್ಕಮಗಳೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲಿ 32 ಮಂದಿ ಮತದಾರರು ಇದ್ದು, 2 ಸ್ಥಾನಗಳಿಗೆ 3 ಮಂದಿ ಸ್ಪರ್ಧೆ ಮಾಡಿದ್ದಾರೆ. ವಿಧಾನಪರಿಷತ್‌ ಸದಸ್ಯರಾದ ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ, ಬಿಜೆಪಿ ಮುಖಂಡ, ಜಿಪಂ ಮಾಜಿ ಸದಸ್ಯ ಎಂ.ಎಸ್‌. ನಿರಂಜನ್‌ ಕಣದಲ್ಲಿದ್ದಾರೆ. ಇಲ್ಲಿ ಅವಿರೋಧ ಆಯ್ಕೆಯಾಗುವ ನಿರೀಕ್ಷೆ ಇತ್ತು. ಆದರೆ, ನಿರಂಜನ್‌ ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿದ್ದರಿಂದ ಈ ಕ್ಷೇತ್ರದ ಫಲಿತಾಂಶ ಕುತೂಹಲ ಮೂಡಿಸಿದೆ. ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂಬುದಾಗಿ ಘೋಷಣೆ ಮಾಡಿದ್ದರಿಂದ ರಾಜಕೀಯ ವಲಯದಲ್ಲಿ ಹೊಸದೊಂದು ಚರ್ಚೆ ಹುಟ್ಟು ಹಾಕಿದೆ.

ಕೊಪ್ಪ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಒಟ್ಟು 12 ಮಂದಿ ಮತದಾರರು ಇದ್ದು, ಒಂದು ಸ್ಥಾನಕ್ಕೆ 3 ಮಂದಿ ಸ್ಪರ್ಧೆ ಮಾಡಿದ್ದಾರೆ. ಕಣದಲ್ಲಿ ಪ್ರಜ್ವಲ್‌, ಕೆ.ಎಸ್‌. ರವೀಂದ್ರ, ಬಿ.ಎಸ್‌. ಸತೀಶ್‌ ಇದ್ದಾರೆ.

ಜಿಲ್ಲೆಯ ಎಲ್ಲಾ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಒಟ್ಟು 7 ಮಂದಿ ಮತದಾರರು ಇದ್ದು, ಇಲ್ಲಿನ ಒಂದು ಸ್ಥಾನಕ್ಕೆ ಕಡೂರು ಶಾಸಕ ಕೆ.ಎಸ್‌. ಆನಂದ್‌, ಎಚ್‌.ಕೆ. ದಿನೇಶ್‌ ಹೊಸೂರು ಸ್ಪರ್ಧೆ ಮಾಡಿದ್ದಾರೆ. ಹಾಗಾಗಿ ಈ ಕ್ಷೇತ್ರದ ಫಲಿತಾಂಶ ಕುತೂಹಲ ಮೂಡಿಸಿದೆ.

ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕ್‌ ಹಾಗೂ ಇನ್ನುಳಿದ ಎಲ್ಲಾ ಸಹಕಾರ ಸಂಘಗಳ ಕ್ಷೇತ್ರದಲ್ಲಿ 94 ಮತದಾರರು ಇದ್ದು, ಈ ಕ್ಷೇತ್ರದಲ್ಲಿ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಹಾಗೂ ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಟಿ.ಎಲ್. ರಮೇಶ್‌ ಇದ್ದಾರೆ. ಹಾಗಾಗಿ ಈ ಕ್ಷೇತ್ರದ ಫಲಿತಾಂಶ ಕುತೂಹಲದಿಂದ ಜನರು ಎದುರು ನೋಡುತ್ತಿದ್ದಾರೆ.

-- ಬಾಕ್ಸ್‌--ಪ್ರತಿಭಟನೆಜಿಲ್ಲೆಯ ಎಲ್ಲಾ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಕಡೂರು ಕ್ಷೇತ್ರದ ಶಾಸಕ ಕೆ.ಎಸ್‌. ಆನಂದ್‌ ಹಾಗೂ ಎಚ್‌.ಕೆ. ದಿನೇಶ್‌ ಹೊಸೂರು ಸ್ಪರ್ಧೆ ಮಾಡಿದ್ದಾರೆ. ಯಾವುದೋ ನೆಪ ಹೇಳಿ ದಿನೇಶ್‌ ಹೊಸೂರು ಅವರನ್ನು ಅನರ್ಹಗೊಳಿಸುವ ತಂತ್ರಗಾರಿಕೆ ನಡೆಯುತ್ತಿದೆ ಎಂಬ ಸುದ್ದಿ ದಟ್ಟವಾಗಿ ಹರಡುತ್ತಿದ್ದಂತೆ ಬಿಜೆಪಿ ಮುಖಂಡರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮುಂಭಾಗದಲ್ಲಿ ಜಮಾಯಿಸಿ ಪಾರದರ್ಶಕವಾಗಿ ಚುನಾವಣೆ ನಡೆಯಲಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಯಾವುದೇ ಅಡಚಣೆ ಇಲ್ಲದೆ ಶನಿವಾರ ಡಿಸಿಸಿ ಬ್ಯಾಂಕಿನ ಚುನಾವಣೆ ನಡೆಯಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ ಬ‍ಳಿಕ ಬಿಜೆಪಿ ಕಾರ್ಯಕರ್ತರು ಸ್ಥಳದಿಂದ ತೆರಳಿದರು.

-- ಬಾಕ್ಸ್‌--ನಿಷೇಧಾಜ್ಞೆ ಜಾರಿಡಿಸಿಸಿ ಬ್ಯಾಂಕಿನ ಚುನಾವಣೆ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರದ ಫುಡ್‌ ಪ್ಯಾಲೇಸ್‌ನಿಂದ ರಾಮೇಶ್ವರ ದೇವಾಲಯ ರಸ್ತೆಯವರೆಗೆ 100 ಮೀ. ಸುತ್ತಮುತ್ತ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಸುದರ್ಶನ್‌ ಆದೇಶ ಹೊರಡಿಸಿದ್ದಾರೆ.

-- 16 ಕೆಸಿಕೆಎಂ 4ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂದಾರ ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ
ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಗೆ 11 ವರ್ಷ ಕ್ರೀಡಾಭಿಮಾನಿಗಳ ಹರ್ಷ