ಡಿಸಿಸಿ ಬ್ಯಾಂಕ್‌ಗೆ ಅಧ್ಯಕ್ಷ ಕೋಗುಂಡಿ ಬಕ್ಕಪ್ಪ, ಉಪಾಧ್ಯಕ್ಷರಾಗಿ ಡಿ.ಕುಮಾರ

KannadaprabhaNewsNetwork | Published : Feb 8, 2024 1:30 AM

ಸಾರಾಂಶ

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಕೋಗುಂಡಿ ಬಕ್ಕೇಶ್, ಉಪಾಧ್ಯಕ್ಷರಾಗಿ ಹನಗವಾಡಿ ಡಿ.ಕುಮಾರ ಆಯ್ಕೆಯಾಗಿದ್ದು, ಕಾಂಗ್ರೆಸ್ ಮುಖಂಡರು, ನೂತನ ನಿರ್ದೇಶಕರು ಅಭಿನಂದಿಸಿದರು.

- ಬಿಜೆಪಿ ಹಿಡಿತದಿಂದ ಮತ್ತೆ ಬ್ಯಾಂಕ್‌ ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆಕನ್ನಡಪ್ರಭ ವಾರ್ತೆ ದಾವಣಗೆರೆ ಬಿಜೆಪಿ ಬೆಂಬಲಿತರ ಹಿಡಿತದಲ್ಲಿದ್ದ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಕೋಗುಂಡಿ ಬಕ್ಕೇಶ್, ಉಪಾಧ್ಯಕ್ಷರಾಗಿ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಡಿ.ಕುಮಾರ ಆಯ್ಕೆಯಾಗಿದ್ದಾರೆ.

ನಗರದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾದ ಕೋಗುಂಡಿ ಬಕ್ಕೇಶ್‌ ಹಾಗೂ ಹನಗವಾಡಿ ಗ್ರಾಮದ ಡಿ.ಕುಮಾರ ಕ್ರಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಡಿಸಿಸಿ ಬ್ಯಾಂಕ್ ಆಡಳಿತವನ್ನು ಕೈವಶ ಮಾಡಿಕೊಂಡಿದ್ದಾರೆ.

ಒಟ್ಟು 13 ಸದಸ್ಯ ಬಲದ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್ ಬೆಂಬಲಿತರಾದ 10 ಜನ ನಿರ್ದೇಶಕರಿದ್ದರೆ, ಮೂವರು ಬಿಜೆಪಿ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ಕಳೆದ ಅವದಿಗೆ ಡಿಸಿಸಿ ಬ್ಯಾಂಕ್‌ನಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕರ ಆಡಳಿತವಿತ್ತು. ಇದೀಗ ಕೋಗುಂಡಿ ಬಕ್ಕಪ್ಪ ಹಾಗೂ ಹನಗವಾಡಿ ಡಿ.ಕುಮಾರ ಆಯ್ಕೆಯೊಂದಿಗೆ ಕಾಂಗ್ರೆಸ್ ಬೆಂಬಲಿತರ ಆಡಳಿತ ಶುರುವಾದಂತಾಗಿದೆ.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನೂತನ ನಿರ್ದೇಶಕರಾದ ಮುದೇಗೌಡ್ರ ಗಿರೀಶ, ಕಾಂಗ್ರೆಸ್ ಮುಖಂಡರಾದ ಹರಿಹರದ ನಂದಿಗಾವಿ ಶ್ರೀನಿವಾಸ, ಮೇಕಾ ಮುರಳೀಕೃಷ್ಣ, ಹಿರಿಯ ಪತ್ರಕರ್ತ ಜಿಗಳಿ ಪ್ರಕಾಶ ಸೇರಿದಂತೆ ಮುಖಂಡರು ಅಭಿನಂದಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಡಿಸಿಸಿ ಬ್ಯಾಂಕ್ ಚುನಾವಣೆ ಕಡೆಗೆ ಗಮನ ಹರಿಸಿದ್ದರಿಂದ ಮತ್ತೆ ಬ್ಯಾಂಕ್ ಕಾಂಗ್ರೆಸ್ ಬೆಂಬಲಿತರ ಹಿಡಿತಕ್ಕೆ ಬಂದಂತಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕ್ಯಾಪ್ಷನ್: 7ಕೆಡಿವಿಜಿ12: ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಕೋಗುಂಡಿ ಬಕ್ಕೇಶ್, ಉಪಾಧ್ಯಕ್ಷರಾಗಿ ಹನಗವಾಡಿ ಡಿ.ಕುಮಾರ ಆಯ್ಕೆಯಾಗಿದ್ದು, ಕಾಂಗ್ರೆಸ್ ಮುಖಂಡರು, ನೂತನ ನಿರ್ದೇಶಕರು ಅಭಿನಂದಿಸಿದರು.

Share this article