ಕನ್ನಡಪ್ರಭ ವಾರ್ತೆ ಕೋಲಾರಎಂಪಿಸಿಎಸ್, ಸೊಸೈಟಿಗಳ ಲೆಕ್ಕ ಪರಿಶೋಧನೆ ಕಡ್ಡಾಯವಾಗಿ ನಡೆಯಬೇಕು, ಆ ಸಂದರ್ಭದಲ್ಲಿ ಲೋಪ ಕಂಡು ಬಂದ ಕೂಡಲೇ ಅಧಿಕಾರಿಗಳ ಗಮನಕ್ಕೆ ತಂದು ಲೋಪಕ್ಕೆ ಕಾರಣ ಕೇಳಿ, ದೂರು ದಾಖಲಿಸಬೇಕು. ಆನಂತರ ನಷ್ಟವನ್ನು ಅದೇ ಸೊಸೈಟಿಯಿಂದ ಭರ್ತಿ ಮಾಡಿಸಿಕೊಳ್ಳುವ ಕೆಲಸ ಆಗಬೇಕು. ಯಾವ ಸಂಘ ಲೆಕ್ಕ ಪರಿಶೋಧನೆ ಮಾಡಲ್ಲವೋ, ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಚಿವ ರಾಜಣ್ಣ ಸೂಚಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಸಹಕಾರ ಇಲಾಖೆ, ಕೋಮುಲ್, ಡಿಸಿಸಿ ಬ್ಯಾಂಕ್, ಟಿಎಪಿಸಿಎಂಎಸ್ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಡಿಸಿಸಿ ಬ್ಯಾಂಕ್ ಅರ್ಹತೆ ಕಳೆದುಕೊಳ್ಳಲಿದೆ
ಇಲಾಖೆಯ ಪ್ರಗತಿಯೂ ಹೇಳಿಕೊಳ್ಳುವಷ್ಟಾಗಿಲ್ಲ, ೨೦೧೭-೧೮ರಲ್ಲಿ ವಿತರಣೆ ಮಾಡಿರುವ ಮಹಿಳಾ ಸಂಘಗಳ ಸಾಲ ಮರುಪಾವತಿಯಾಗಿಲ್ಲ, ಆಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರೆ ಬ್ಯಾಂಕ್ ಗೌರವ ಉಳಿದಿರೋದು. ಪ್ರಸಕ್ತ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ಎನ್‌ಪಿಎ ಶೇ.೨೫ಕ್ಕೆ ಹೋಗಲಿದ್ದು, ಆರ್‌ಬಿಐ ಪ್ರಕಾರ ಶೇ.೯ಕ್ಕಿಂತ ಕಡಿಮೆಯಿರಬೇಕು. ಈ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಸೆಕ್ಷನ್ ೧೧ ಅರ್ಹತೆ ಕಳೆದುಕೊಳ್ಳುತ್ತದೆ ಎಂದು ತಿಳಿಸಿದರು.ಮಹಿಳಾ ಸಂಗಳಿಗೆ ಮರು ಸಾಲ ನೀಡಲಾಗಿದ್ದು, ಅದು ಸಮರ್ಪಕವಾಗಿ ಮರುಪಾವತಿಯಾಗಿಲ್ಲ. ಈ ಬಗ್ಗೆ ಮಾಹಿತಿ ಕೇಳಿದರೆ ಬೇರೇನೊ ಹೇಳ್ತಿದ್ದೀರಾ. ಪ್ರತಿ ತಿಂಗಳ ಸಾಲ ವಸೂಲಿಯ ಬಗ್ಗೆ ಮಾಹಿತಿ ನೀಡೊದಿಲ್ವ. ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿದಾಗ ಎಲ್ಲ ದಾರಿಗೆ ಬರುತ್ತಾರೆ ಎಂದು ಗರಂ ಆದರು.ಅಧಿಕಾರಿಗಳು ಭೇಟಿ ನೀಡಲಿ
ರಾಜ್ಯ ಮಟ್ಟದ ಸಹಕಾರ ಇಲಾಖೆ ಅಧಿಕಾರಿಗಳು ಸೊಸೈಟಿಗೆ ಭೇಟಿ ಮಾಡಿ ಪರಿಶೀಲನೆ ಮಾಡಿ, ಆಗ ಲೋಪ ಕಂಡು ಬಂದರೆ, ಕೂಡಲೇ ತಪ್ಪಿತಸ್ಥರಿ ವಿರುದ್ಧ ಕ್ರಮಕೈಗೊಳ್ಳಬೇಕು. ನಬಾರ್ಡ್ ಸಾಲದ ಮೊತ್ತ ಕಡಿಮೆಯಾಗಿದೆ. ದುಡಿಯುವ ಜಾಗದಲ್ಲೆ ಬ್ಯಾಂಕ್ ಹಾಳಾದರೆ ಏನರ್ಥ ಎಂದು ಸಚಿವ ರಾಜಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಮೈತ್ರಿ ಇದ್ದರು.