ನುಗ್ಗೇಹಳ್ಳಿಯನ್ನು ಧಾರ್ಮಿಕ ಪ್ರವಾಸಿ ಕೇಂದ್ರ ಮಾಡುವಂತೆ ಒತ್ತಾಯ

KannadaprabhaNewsNetwork | Published : Mar 23, 2025 1:34 AM

ಸಾರಾಂಶ

ನುಗ್ಗೇಹಳ್ಳಿ ಗ್ರಾಮವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಗ್ರಾಮದಲ್ಲಿ ಕ್ರಿ. ಶ. 1543 ಮತ್ತು 1249 ಹಾಗೂ 1246ರಲ್ಲಿ ಶ್ರೀ ಚಂದ್ರಮೌಳೇಶ್ವರ, ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಶ್ರೀ ಸದಾಶಿವ ಸ್ವಾಮಿ, ಶ್ರೀ ಜಯಗೊಂಡೇಶ್ವರ ದೇವಾಲಯಗಳನ್ನು ಆಗಿನ ವಿಜಯನಗರ ಸಾಮ್ರಾಜ್ಯದ ದೊರೆಗಳು ನಿರ್ಮಾಣ ಮಾಡಿರುವ ಬಗ್ಗೆ ಪುರಾವೆಗಳು ದೊರೆತಿದ್ದು, ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಪ್ರವಾಸಿ ಧಾರ್ಮಿಕ ಕ್ಷೇತ್ರದಂತೆ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರೆ ಈ ದೇವಾಲಯಗಳು ಇನ್ನೂ ಹೆಚ್ಚು ಪ್ರಸಿದ್ಧಿ ಹೊಂದುವುದರ ಜೊತೆಗೆ ಈ ಭಾಗದ ಇತಿಹಾಸ ಎಲ್ಲರಿಗೂ ತಿಳಿಯುತ್ತದೆ.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಗ್ರಾಮದಲ್ಲಿ ಕ್ರಿ.ಶ. 1543ರಲ್ಲಿ ವಿಜಯನಗರದ ಅರಸರ ಸಾಮಂತ ಪಾಳೆಗಾರ ಗುಂಡಪ್ಪ ನಾಯಕನಿಂದ ಈಗಿನ ಚಂದ್ರಮೌಳೇಶ್ವರ ದೇವಾಲಯವನ್ನು ನಿರ್ಮಾಣ ಮಾಡಲಾಗಿತ್ತು. ಗ್ರಾಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇಲ್ಲಿರುವ ದೇವಾಲಯಗಳು ಹೆಚ್ಚು ವೈಶಿಷ್ಟ್ಯತೆ ಹೊಂದಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರವನ್ನು ಧಾರ್ಮಿಕ ಪ್ರವಾಸಿ ಕೇಂದ್ರವನ್ನಾಗಿ ಮಾಡಿದರೆ ಈ ಕ್ಷೇತ್ರ ಹೆಚ್ಚು ಪ್ರಸಿದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಇತಿಹಾಸಕಾರ ಹಾಗೂ ಹಾಸನ ಸರ್ಕಾರಿ ಕಲಾ ವಾಣಿಜ್ಯ ಕಾಲೇಜು ಪ್ರಾಂಶುಪಾಲ ಡಾ. ಎಂ ಬಿ. ಇರ್ಷಾದ್ ಸರ್ಕಾರವನ್ನು ಒತ್ತಾಯಿಸಿದರು.

ಹೋಬಳಿ ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗ ಹಾಸನ ಸರ್ಕಾರಿ ವಾಣಿಜ್ಯ ಕಾಲೇಜು ಹಾಗೂ ಗ್ರಾಮದ ವಿವಿಧ ಸಂಘಗಳು ಮತ್ತು ಸಹಯೋಗದಲ್ಲಿ ಸ್ಮಾರಕಗಳ ಸಂರಕ್ಷಣಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನುಗ್ಗೇಹಳ್ಳಿ ಗ್ರಾಮವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಗ್ರಾಮದಲ್ಲಿ ಕ್ರಿ. ಶ. 1543 ಮತ್ತು 1249 ಹಾಗೂ 1246ರಲ್ಲಿ ಶ್ರೀ ಚಂದ್ರಮೌಳೇಶ್ವರ, ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಶ್ರೀ ಸದಾಶಿವ ಸ್ವಾಮಿ, ಶ್ರೀ ಜಯಗೊಂಡೇಶ್ವರ ದೇವಾಲಯಗಳನ್ನು ಆಗಿನ ವಿಜಯನಗರ ಸಾಮ್ರಾಜ್ಯದ ದೊರೆಗಳು ನಿರ್ಮಾಣ ಮಾಡಿರುವ ಬಗ್ಗೆ ಪುರಾವೆಗಳು ದೊರೆತಿದ್ದು, ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಪ್ರವಾಸಿ ಧಾರ್ಮಿಕ ಕ್ಷೇತ್ರದಂತೆ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರೆ ಈ ದೇವಾಲಯಗಳು ಇನ್ನೂ ಹೆಚ್ಚು ಪ್ರಸಿದ್ಧಿ ಹೊಂದುವುದರ ಜೊತೆಗೆ ಈ ಭಾಗದ ಇತಿಹಾಸ ಎಲ್ಲರಿಗೂ ತಿಳಿಯುತ್ತದೆ. ಈ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಇಲ್ಲಿರುವ ಪ್ರತಿಯೊಂದು ದೇವಾಲಯಗಳ ಜೊತೆಗೆ ಕಲ್ಯಾಣಿ ಹಾಗೂ ಕೆರೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಗ್ರಾಮದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಮಾಡಿದರೆ ಸಾವಿರಾರು ವರ್ಷಗಳ ಹಿಂದಿನ ಇತಿಹಾಸವನ್ನು ತಿಳಿಯಬಹುದಾಗಿದೆ ಎಂದರು.

ಸ್ಮಾರಕಗಳ ಸಂರಕ್ಷಣಾ ಜಾಗೃತಿ ಅಭಿಯಾನಕ್ಕೆ ಗ್ರಾಮದ ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ಸ್ಮಾರಕಗಳ ಸಂರಕ್ಷಣೆಯ ಜಾಗೃತಿಯ ಕುರಿತು ಹಾಸನ ಕಲಾ ವಾಣಿಜ್ಯ ಕಾಲೇಜು ಹಾಗೂ ಇಲ್ಲಿನ ಸಂಘಸಂಸ್ಥೆಗಳ ನೆರವಿನೊಂದಿಗೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಗ್ರಾಮದ ಪ್ರತಿಯೊಬ್ಬರು ಗ್ರಾಮದ ಇತಿಹಾಸ ಪರಂಪರೆಯ ಬಗ್ಗೆ ಹೆಚ್ಚು ತಿಳಿದುಕೊಂಡರೆ ಅವರಿಗೆ ಗ್ರಾಮದ ಮೇಲೆ ಇನ್ನೂ ಹೆಚ್ಚು ಅಭಿಮಾನ ಗೌರವ ಬರುತ್ತದೆ. ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ದೇವಾಲಯಗಳ ಸಂರಕ್ಷಣೆಗೆ ಗ್ರಾಮಸ್ಥರು ಮುಂದಾಗಬೇಕು. ಗ್ರಾಮದ ಇತಿಹಾಸದ ಬಗ್ಗೆ ಇತಿಹಾಸಕಾರರಾದ ಡಾ. ಎಂ ಬಿ ಇರ್ಷಾದ್ ಅವರು ಹೆಚ್ಚು ಸಂಶೋಧನೆ ನಡೆಸಿ ಗ್ರಾಮದ ಇತಿಹಾಸವನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ದೇವಾಲಯಗಳ ಬಗ್ಗೆ ಹೆಚ್ಚು ಮಾಹಿತಿ ಹಾಗೂ ಇತಿಹಾಸವನ್ನು ತಿಳಿದಂತಾಗಿದೆ. ಸರ್ಕಾರ ಈ ಬಗ್ಗೆ ಹೆಚ್ಚು ಗಮನ ಹರಿಸಿ ಧಾರ್ಮಿಕ ಪ್ರಸಿದ್ಧ ಪ್ರವಾಸಿ ಕ್ಷೇತ್ರವನ್ನಾಗಿ ಘೋಷಣೆ ಮಾಡುವ ಮೂಲಕ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಜೆ ಸೋಮನಾಥ್ ಮಾತನಾಡಿ, ಗ್ರಾಮದ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಯ ಬಗ್ಗೆ ಹೆಚ್ಚು ಚಿಂತನೆ ನಡೆಸಲಾಗುತ್ತಿದೆ. ಗ್ರಾಮದಲ್ಲಿರುವ ಪುಣ್ಯಕ್ಷೇತ್ರಗಳ ಇತಿಹಾಸವನ್ನು ಪ್ರತಿಯೊಬ್ಬರಿಗೂ ತಿಳಿಯುವಂತೆ ಮಾಡಬೇಕು. ಆ ಕೆಲಸವನ್ನು ಹಳೆ ವಿದ್ಯಾರ್ಥಿಗಳ ಸಂಘ ಮುಂಬರುವ ದಿನಗಳಲ್ಲಿ ಮಾಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷೆ ಛಾಯಾ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಹದೇವಮ್ಮ ಶಂಕರ್, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಲಕ್ಷ್ಮಣ್, ಅರ್ಚಕ ರಾಜು, ಹಾಸನ ಸರ್ಕಾರಿ ಕಲಾ ವಾಣಿಜ್ಯ ಕಾಲೇಜು ಪ್ರಾಧ್ಯಾಪಕರಾದ ಗೋಪಾಲ್, ಬಸವಗೌಡ, ಲಿಂಗಮೂರ್ತಿ, ಪ್ರಮುಖರಾದ ಹೂವಿನಹಳ್ಳಿ ರಮೇಶ್, ಶ್ರೀಧರ್ ಬಾಬು, ಪ್ರಬಣ್ಣ, ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

-----------------------------------------------------

Share this article