ಚನ್ನಪಟ್ಟಣದಲ್ಲಿ ₹60 ಕೋಟಿ ಕಾಮಗಾರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೂಮಿಪೂಜೆ

KannadaprabhaNewsNetwork |  
Published : Oct 05, 2024, 01:31 AM ISTUpdated : Oct 05, 2024, 10:11 AM IST
ಪೊಟೋ೪ಸಿಪಿಟಿ೨: ತಾಲೂಕಿನ ನಾಗವಾರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚನ್ನಪಟ್ಟಣಕ್ಕೆ ನೀಡಿರುವ ₹300 ಕೋಟಿ ವಿಶೇಷ ಅನುದಾನದಲ್ಲಿ ₹60.57 ಕೋಟಿ ಕಾಮಗಾರಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಶುಕ್ರವಾರ ಚಾಲನೆ ನೀಡಿದರು.

ಚನ್ನಪಟ್ಟಣ: ಉಪಚುನಾವಣೆ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚನ್ನಪಟ್ಟಣಕ್ಕೆ ನೀಡಿರುವ ₹300 ಕೋಟಿ ವಿಶೇಷ ಅನುದಾನದಲ್ಲಿ ₹60.57 ಕೋಟಿ ಕಾಮಗಾರಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಶುಕ್ರವಾರ ಚಾಲನೆ ನೀಡಿದರು. 

ತಾಲೂಕಿನ ಬೇವೂರು, ನಾಗವಾರ, ಮುದಗೆರೆ, ಮತ್ತಿಕೆರೆ, ಸಂಕಲಗೆರೆ, ದೊಡ್ಡ ಮಳೂರು, ಮಳೂರು, ಚಕ್ಕಲೂರು, ಸುಳ್ಳೇರಿ ಸೇರಿದಂತೆ 17 ಗ್ರಾಮಗಳ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, 5 ಕಡೆ ಸೇತುವೆ ನಿರ್ಮಾಣ ಹಾಗೂ 4 ಕಡೆ ರಸ್ತೆ ನಿರ್ಮಾಣಕ್ಕೆ ಹಾಗೂ ಒಂದು ಕಡೆ ಅರಸು ಸಮುದಾಯ ಭವನಕ್ಕೆ ಸೇರಿ ಒಟ್ಟು 20ಕ್ಕೂ ಹೆಚ್ಚು ಕಾಮಗಾರಿಗಳಿಗ ಡಿಸಿಎಂ ಡಿ.ಕೆ.ಶಿವಕುಮಾರ್‌ ಭೂಮಿಪೂಜೆ ನೆರವೇರಿಸಿದರು.

ತಾಲೂಕಿನ ಮಾಕಳಿ ಗ್ರಾಪಂ ವ್ಯಾಪ್ತಿಯಲ್ಲಿ ಪಿಆರ್‌ಇ ಮತ್ತು ಇಲಾಖೆಯ ವಿಶೇಷ ಅನುದಾನದಡಿ ಸಿ.ಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆಯ ಅನುದಾನದಲ್ಲಿ ಸಿ.ಸಿ ರಸ್ತೆ, ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಮಾಕಳಿ ಗ್ರಾಮದಲ್ಲಿ ಬೃಹತ್ ಮತ್ತು ಮಾಧ್ಯಮ ನೀರಾವರಿ ಇಲಾಖೆಯ ಅನುದಾನದಡಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ನಾಗವಾರ ಗ್ರಾಮದಲ್ಲಿ ಟೊಯೋಟಾ ಫೈನಾನ್ಸಿಯಲ್ ಸರ್ವಿಸ್ ಆಫ್ ಇಂಡಿಯಾ ಸಂಸ್ಥೆ ಸಿಎಸ್‌ಆರ್ ಅನುದಾನದಡಿ ನಿರ್ಮಾಣ ಮಾಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ, ಕೆಳಗೆರೆ ಗ್ರಾಮದ ಆದಿಶಕ್ತಿ ದೇವಸ್ಥಾನದ ಬಳಿ ₹2.54 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಭೂಮಿಪೂಜೆ. 

ಅವ್ವೆರಹಳ್ಳಿ, ಹೊನ್ನನಾಯಕನಹಳ್ಳಿ, ಅರಳಾಪುರ, ಮತ್ತು ಹೊಸೂರುದೊಡ್ಡಿ ಗ್ರಾಮ ವ್ಯಾಪ್ತಿಯಲ್ಲಿ ಕೈಗೊಂಡಿರುವ ₹99.95 ಲಕ್ಷದ ಸಿ.ಸಿ ರಸ್ತೆ, ಕದರಮಂಗಲದಿಂದ ಕುಂಬಾರಕಟ್ಟೆ ಮಾರ್ಗವಾಗಿ ಬೊಮ್ಮನಾಯಕನಹಳ್ಳಿಗೆ ಸೇರುವ 3.20 ಕಿ.ಮೀ. ಉದ್ದದ ರಸ್ತೆ ನಿರ್ಮಾಣ, ಮುದಗೆರೆ ಗ್ರಾಪಂ ವ್ಯಾಪ್ತಿಯ ಮಾರಿಗುಡಿ ದೇವಸ್ಥಾನದ ಬಳಿ ₹1.40 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಹೊಟ್ಟೆಗನ ಹೊಸಹಳ್ಳಿ, ಕೂಡ್ಲೂರು, ಕಾಡಂಕನಹಳ್ಳಿಯ ನುಣ್ಣೂರು ರಸ್ತೆ ಹತ್ತಿರ ಹಾಗೂ ನೆಲಮಾಕನಹಳ್ಳಿ ಬಳಿ ಹಾಗೂ ದೊಡ್ಡ ಮಳೂರಿನ ಬಳಿ ಕಣ್ವ ನದಿಗೆ ಅಡ್ಡಲಾಗಿ ನೀರಾವರಿ ಇಲಾಖೆಯ ಅನುದಾನದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದರು. 

ಅರ್ಧಕ್ಕೆ ನಿಂತು ಹೋಗಿದ್ದ ಕೂಡ್ಲೂರಿನ ಅರಸು ಸಮುದಾಯ ಭವನಕ್ಕೆ ಮರು ಚಾಲನೆ ಹಾಗೂ ಹುಣಸನಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ನಗರದ ಸ್ಪನ್‌ಸಿಲ್ಕ್ ಮಿಲ್ ಬಳಿ ಸ್ಥಳಾಂತರಗೊಂಡಿರುವ ನೂತನ ಉಪನೋಂದಾಣಿಧಿಕಾರಿ ಕಚೇರಿಗೆ ದಿಢೀರ್ ಭೇಟಿ ನೀಡಿದ ಡಿಸಿಎಂ ಪರಿಶೀಲನೆ ನಡೆಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೂ ಆಯಾ ಗ್ರಾಮದ ಹಿರಿಯ ನಾಗರಿಕರು, ಮಹಿಳೆಯರಿಂದಲೇ ಉದ್ಘಾಟನೆ ಹಾಗೂ ಭೂಮಿಪೂಜೆ ನೆರವೇರಿಸಿದ್ದು ವಿಶೇಷವೆನಿಸಿತು. 

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ರಂಗನಾಥ್, ಬಿಎಂಐಸಿಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಎಸ್‌ಪಿ ಕಾರ್ತಿಕ್ ರೆಡ್ಡಿ, ಸಿಇಒ ದಿಗ್ವಿಜಯ್ ಬೋಡ್ಕೆ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್ ಉಪಸ್ಥಿತರಿದ್ದರು.ನಾನು ಕಳೆದ ಮೂರು ತಿಂಗಳ ಅವಧಿಯಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಸುಮಾರು 20ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದೇನೆ. ಆದರೆ ಹಿಂದಿನ ಶಾಸಕರು ಎಷ್ಟು ಬಾರಿ ಭೇಟಿ ನೀಡಿದ್ದರು. ನಮ್ಮ ಕೆಲಸವನ್ನು ನೀವು ಮರೆಯಬಾರದು. ಚನ್ನಪಟ್ಟಣ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ನಮ್ಮ ಗುರಿಯಾಗಿದೆ. 

ನಾನೇ ಅಭ್ಯರ್ಥಿ ಎಂದು ತಿಳಿದು ಮತ ನೀಡಿ: ಡಿ.ಕೆ.ಶಿವಕುಮಾರ್‌ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಚನ್ನಪಟ್ಟಣ ಉಪಚುನಾವಣೆಯ ಅಭ್ಯರ್ಥಿ ಬಗ್ಗೆ ಯೋಚನೆ ಮಾಡುತ್ತಿಲ್ಲ. ನಾನೇ ಅಭ್ಯರ್ಥಿ ಎಂದು ತಿಳಿದು ಮತ ನೀಡಿ. ವ್ಯಕ್ತಿ ಮತ್ತು ಸರ್ಕಾರ ಎರಡೂ ನಾನೇ ಇದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.ನಗರದ ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಚನ್ನಪಟ್ಟಣದಲ್ಲಿ ₹300 ಕೋಟಿಗೂ ಹೆಚ್ಚಿನ ಅನುದಾನದ ಅಭಿವೃದ್ಧಿ ಯೋಜನೆಗಳನ್ನು ಕಾಂಗ್ರೆಸ್‌ ಸರ್ಕಾರ ಕೈಗೆತ್ತಿಕೊಂಡಿದೆ. 

ಪ್ರತಿ ಪಂಚಾಯ್ತಿಯಲ್ಲಿ ₹2 ರಿಂದ ₹5-6 ಕೋಟಿವರೆಗೂ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಈ ತಾಲೂಕಿನ ಜನರಿಗೆ 5 ಸಾವಿರ ಮನೆಗಳನ್ನು ಮಂಜೂರು ಮಾಡಿ, ಫಲಾನುಭವಿಗಳಿಗೆ ಹಂಚಲಾಗುತ್ತಿದೆ. ಪ್ರತಿ ಪಂಚಾಯಿತಿಯಲ್ಲಿ 100, 150 ಮನೆಗಳನ್ನು ನೀಡಲಾಗುತ್ತಿದೆ. ಇನ್ನು ನೀರಾವರಿ ಕಾಲುವೆ ಅಭಿವೃದ್ಧಿ, ಕೆರೆ ನೀರು ತುಂಬಿಸುವ ಕೆಲಸ ನಡೆಯಲಿದೆ ಎಂದು ತಿಳಿಸಿದರು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಇಡೀ ದಿನ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ನಾನು ಹಾಗೂ ರಾಮಲಿಂಗಾ ರೆಡ್ಡಿ ಸೇರಿ ಪಂಚಾಯಿತಿ ಮಟ್ಟದ ಕಾಮಗಾರಿಗಳ ಉದ್ಘಾಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಎಚ್‌ಡಿಕೆಯ ₹50 ಕೋಟಿ ಬೆದರಿಕೆ, ಎಫ್‌ಐಆರ್‌ ಬಗ್ಗೆ ಗೊತ್ತಿಲ್ಲ:

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮೇಲೆ ₹50 ಕೋಟಿ ಬೆದರಿಕೆ ಎಫ್‌ಐಆರ್ ವಿಚಾರಕ್ಕೆ ಉತ್ತರಿಸಿದ ಅವರು, ಆ ವಿಚಾರ ನನಗೆ ಗೊತ್ತಿಲ್ಲ. ನಿನ್ನೆ ನಾನು ದಸರಾ ಕಾರ್ಯಕ್ರಮದ ಪೂಜೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದೆ. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಇತ್ತು. ಅದರಲ್ಲಿ ಭಾಗವಹಿಸಿದ್ದೆ ಚನ್ನಪಟ್ಟಣ ಪ್ರವಾಸ ಮಾಡುತ್ತಿದ್ದೇನೆ. ಹೀಗಾಗಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಇಡೀ ಮೈಸೂರು ತುಂಬಾ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಅದರ ಸೌಂದರ್ಯವನ್ನು ರಾಜ್ಯದ ಜನತೆ ಕಣ್ಣು ತುಂಬಿಕೊಳ್ಳಬೇಕು. ದಸರಾ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ರಾಜ್ಯದ ಎಲ್ಲಾ ಭಾಗಗಳಿಂದ ಜನ ಆಗಮಿಸಿ ಈ ಭವ್ಯ ಆಚರಣೆಯ ಭಾಗವಾಗಬೇಕು ಎಂದರು. ಎಲ್ಲ ಸಮುದಾಯಕ್ಕೂ ನ್ಯಾಯ ಒದಗಿಸಲಾಗುವುದು: ಜಾತಿ ಗಣತಿ ವಿಚಾರವಾಗಿ ಡಿ.ಕೆ. ಸುರೇಶ್ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷದ ನೀತಿಯಂತೆ ನಾವು ಈ ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ. ಎಲ್ಲಾ ಸಮುದಾಯಗಳಿಗೂ ನಾವು ನ್ಯಾಯ ಒದಗಿಸಿಕೊಡುತ್ತೇವೆ. ಈ ವರದಿಯಲ್ಲಿ ಏನಾದರೂ ನ್ಯೂನ್ಯತೆ ಇದ್ದರೆ ಸಿದ್ದರಾಮಯ್ಯ, ನಾನು ಹಾಗೂ ಪಕ್ಷದ ನಾಯಕರು ಕೂತು ಸರಿಪಡಿಸುತ್ತೇವೆ. ಈ ವಿಚಾರವಾಗಿ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ