ಕನ್ನಡಪ್ರಭ ವಾರ್ತೆ ಬೆಂಗಳೂರು
ತೀವ್ರ ಜ್ವರದಿಂದ ಬಳಲುತ್ತಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದರೂ, ಕೈಗೆ ಡ್ರಿಪ್ಸ್ ಸಲೈನ್ ಸೂಜಿ ಹಾಕಿಕೊಂಡೇ ಶಿವಾಜಿನಗರದ ಆರ್‌ಬಿಎಎನ್ ಎಂಎಸ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮಕ್ಕೆ ಆಗಮಿಸಿ ಶಿವಾಜಿನಗರ, ಹೆಬ್ಬಾಳ ಹಾಗೂ ಪುಲಕೇಶಿನಗರ ವಿಧಾನಸಭಾ ಕ್ಷೇತ್ರಗಳ ಜನರ ಅಹವಾಲು ಸ್ವೀಕರಿದರು.
ಟ್ಯಾನರಿ ರಸ್ತೆಯಲ್ಲಿ ಜ್ಯೋತಿ ಸೇವಾ ಅಂಧ ಮಕ್ಕಳ ಶಾಲೆ ನಡೆಸುತ್ತಿರುವ ಶ್ವೇತಾ ಅವರು ಅಂಧ ಮಕ್ಕಳ ಶಾಲೆಗೆ ಬಿಬಿಎಂಪಿ ಅಧಿಕಾರಿಗಳು ವಾಣಿಜ್ಯ ತೆರಿಗೆ ವಿಧಿಸಿದ್ದಾರೆ. ರಿಯಾಯಿತಿ ನೀಡುವಂತೆ ಮನವಿ ಮಾಡಿದರು. ಸ್ಪಂದಿಸಿದ ಡಿಸಿಎಂ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ನಿರ್ದೇಶಿಸಿದರು.ಶಿವಾಜಿನಗರದ ಅಲೋಷಿಯಸ್ ಶಾಲೆಯಲ್ಲಿ ಮಗ ಓದುತ್ತಿದ್ದು, ಶಾಲಾ ಫೀಜ್ ಕಟ್ಟುವ ಶಕ್ತಿ ಇಲ್ಲ ಎಂದು ಭವ್ಯಾ ಅವರು ಮನವಿ ಮಾಡಿದರು. ಕೂಡಲೇ ಸಮಸ್ಯೆ ಪರಿಹಾರ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ಮಗನನ್ನು ಚೆನ್ನಾಗಿ ಓದಿಸುವಂತೆ ಭವ್ಯಾ ಅವರಿಗೆ ತಿಳಿಸಿದರು.
ಬಿಬಿಎಂಪಿಯಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದೆ. ಕೋವಿಡ್ ಬಂದ ಕಾರಣ ಕೆಲಸಕ್ಕೆ ರಜೆ ಹಾಕಬೇಕಾಯಿತು. ಕೋವಿಡ್ ವಾಸಿಯಾದ ಮೇಲೆ ನನ್ನನ್ನು ಕೆಲಸಕ್ಕೆ ತೆಗೆದುಕೊಂಡಿಲ್ಲ ಎಂದು ಪುಲಕೇಶಿನಗರದ ರಾಜೇಶ್ ದೂರು ನೀಡಿದರು.
ಸ್ಥಳೀಯ ಶಾಸಕರಾದ ಭೈರತಿ ಸುರೇಶ್, ರಿಜ್ವಾನ್ ಹರ್ಷದ್, ಎ.ಸಿ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಂ.ನಾಗರಾಜು, ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.ಎಲ್ಲರ ಸಮಸ್ಯೆ ಪರಿಹಾರ: ಡಿಸಿಎಂ ಭರವಸೆ
ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ಕಾರ್ಯಕ್ರಮದಲ್ಲಿ ಸುಮಾರು 7 ಸಾವಿರ ಜನ ನನ್ನನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಎಲ್ಲೂ ನ್ಯಾಯ ಸಿಗದಿದ್ದಾಗ ಮಾತ್ರ ಜನರು ರಾಜಕಾರಣಿಗಳನ್ನು ಹುಡುಕಿಕೊಂಡು ಬರುತ್ತಾರೆ. ಈ ಹಿಂದೆ ಕ್ಷೇತ್ರದ ಹಳ್ಳಿಗಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಜನರ ಸಮಸ್ಯೆ ಆಲಿಸುತ್ತಿದ್ದೆ ಎಂದರು.
ಹಸಿರು ರಕ್ಷಕ, ಉದ್ಯಾನ ಮಿತ್ರ ಮತ್ತು ಕೆರೆ ಮಿತ್ರ ಆ್ಯಪ್‌ಗಳನ್ನು ಡಿ.ಕೆ.ಶಿವಕುಮಾರ್ ಅನಾವರಣ ಮಾಡಿದರು.
ಉದ್ಯಾನ ಮಿತ್ರ ಯೋಜನೆ ಮೂಲಕ ನಗರದ ಉದ್ಯಾನವನಗಳ ನಿರ್ವಹಣೆಯನ್ನು ಸ್ಥಳೀಯ ಜನರಿಗೆ ನೀಡುವ ನಿರ್ಧಾರ ಮಾಡಲಾಗಿದೆ. ನಗರದಲ್ಲಿ 1200 ಉದ್ಯಾನವನಗಳಿದ್ದು, ಇವುಗಳನ್ನು ಜನರೇ ನಿರ್ವಹಣೆ ಮಾಡುವಂತೆ ಪ್ರೇರೇಪಿಸಲಾಗುತ್ತದೆ.