ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಕಲಿ ಅಬ್ದುಲ್ ಕಲಾಂ ಸಂಸ್ಥೆಗೆ ಸರ್ಕಾರದ ಗಮನಕ್ಕೆ ತಾರದೆ ನಿಯಮ ಮೀರಿ ಯೋಗ ಮತ್ತು ಗಣಕಯಂತ್ರ ತರಬೇತಿಗಾಗಿ ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಾರು ಮಂದಿ ನಿರುದ್ಯೋಗಿಗಳಿಗೆ ಲಕ್ಷಾಂತರ ರು.ವಂಚಿತರಾಗುವಂತೆ ಮಾಡಿದ ಪ್ರಕರಣದಿಂದ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಡ್ತಿಯಿಂದ ವಂಚಿತರಾಗುವಂತಾಗಿದೆ.ಬಡ್ತಿಯ ಪಟ್ಟಿಯಲ್ಲಿ ಚಾಮರಾಜನಗರ ಡಿಡಿಪಿಐ ರಾಮಚಂದ್ರರಾಜೇ ಅರಸ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಸರ್ಕಾರ ಪ್ರಕಟಿಸಿದ ಪಟ್ಟಿಯಲ್ಲಿ ಅವರ ಹೆಸರು ಕೈಬಿಟ್ಟು ತುಮಕೂರು ಡಯಟ್ ಪ್ರಾಂಶುಪಾಲ ಮಂಜುನಾಥ್, ಚಿಕ್ಕಬಳ್ಳಾಪುರ ಡಿಡಿಪಿಐ ನಿಂಗರಾಜಪ್ಪ, ಕುಮಟಾ ಡಯಟ್ ಪ್ರಾಂಶುಪಾಲ ಶಿವರಾಂ ಮತ್ತು ಜಮಖಂಡಿಯ ಸರ್ಕಾರಿ ಶಿಕ್ಷಕರ ಮಹಾವಿದ್ಯಾಲಯದ ಪ್ರವಾಚಕ ಬಿ. ಎಸ್. ಜಗದೀಶ್ವರ ಹೆಸರನ್ನು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಆದೇಶಿಸಿದ್ದಾರೆ.
ರಾಮಚಂದ್ರ ರಾಜೇ ಅರಸ್ ಬಡ್ತಿ ದೊರೆತು ಜಂಟಿ ನಿರ್ದೇಶಕರಾಗಬೇಕಿತ್ತು, ಹಿಂದಿನ ಪ್ರಕರಣವೊಂದರಲ್ಲಿ ವಿಚಾರಣೆ ಬಾಕಿ ಇದ್ದ ಹಿನ್ನೆಲೆ ಈ ಹಿಂದೆ ಬಡ್ತಿಯಿಂದ ವಂಚಿತರಾಗಿದ್ದರು. ಬಾಕಿ ಪ್ರಕರಣ ಇತ್ಯರ್ಥವಾಗಿ ಬಡ್ತಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಬೇಕೆನ್ನುವಷ್ಟರಲ್ಲಿ ಕಲಾಂ ಸಂಸ್ಥೆಗೆ ನೀಡಿದ ಅನುಮತಿ ಮುಳುವಾಯಿತು.ಏನಿದು ಪ್ರಕರಣ: 2024ರ ಜುಲೈ 29ರಲ್ಲಿ ನಕಲಿ ಕಲಾಂ ಸಂಸ್ಥೆಯ ಪದಾಧಿಕಾರಿಗಳು ಡಿಡಿಪಿಐಗೆ ಅರ್ಜಿ ಸಲ್ಲಿಸಿ ಸರ್ಕಾರಿ ಶಾಲೆಗಳಿಗೆ ಕಲಾಂ ಸಂಸ್ಥೆಯಿಂದ ಉಚಿತವಾಗಿ ಯೋಗ, ಗಣಕಯಂತ್ರ ತರಬೇತಿಗಾಗಿ ನುರಿತ ಶಿಕ್ಷಕರನ್ನು ನೇಮಿಸಿಕೊಡುತ್ತೇವೆ. ನಾವೆ ಸಂಬಳ ನೀಡುತ್ತೇವೆ. ನೇಮಕಾತಿಗಾಗಿ ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದ ಹಿನ್ನೆಲೆ ಅದೇ ದಿನದಂದು ನೀಡಿದ ಅನುಮತಿಯಿಂದಾಗಿ ನಕಲಿ ಸಂಸ್ಥೆಯ ಪದಾಧಿಕಾರಿಗಳು ಅವರ ಆದೇಶವನ್ನೇ ಬಂಡವಾಳ ಮಾಡಿಕೊಂಡು ಸರ್ಕಾರಿ ಶಾಲೆಗಳಲ್ಲಿ ಯೋಗ, ಗಣಕಯಂತ್ರಕ್ಕೆ ನುರಿತ ಶಿಕ್ಷಕರನ್ನು ನೇಮಿಸುತ್ತೇವೆಂದು ನಿರುದ್ಯೋಗಿಗಳನ್ನು ನಂಬಿಸಿ ₹1.5 ಲಕ್ಷದಿಂದ-₹2 ಲಕ್ಷ ವಸೂಲಿ ಮಾಡಿ ಆದೇಶ ನೀಡಿದ್ದರು.
ಈ ಬಗ್ಗೆ ಪ್ರಕರಣ ಬಗ್ಗೆ ಕನ್ನಡಪ್ರಭ ಸುದೀರ್ಘ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. ಅಲ್ಲದೆ ನರಸಮಂಗಲದ ನಿರಂಜನ್ ಮೂರ್ತಿ ಲಿಖಿತ ದೂರು ಸಲ್ಲಿಸಿ ಪ್ರಕರಣ ತನಿಖೆಗೆ ಆಗ್ರಹಿಸಿದ್ದರು.ಆಡಳಿತ ವಿಭಾಗದ ಜಂಟಿ ನಿರ್ದೇಶಕ ರವಿಕುಮಾರ್ ಸರ್ಕಾರಕ್ಕೆ ಡಿಡಿಪಿಐ ವಿರುದ್ದ ಸರ್ಕಾರಿ ನಿಯಮ ಉಲ್ಲಂಘನೆ ಆರೋಪ ಸಾಬೀತಾಗಿದ್ದು ಶಿಸ್ತು ಕ್ರಮಕ್ಕೆ ಮೈಸೂರಿನ ಜಂಟಿ ನಿರ್ದೇಶಕ ಪಾಂಡುರವರ ತನಿಖಾ ವರದಿ ಉಲ್ಲೇಖಿಸಿ ಸರ್ಕಾರದ ಅಧೀನ ಕಾರ್ಯದರ್ಶಿಗಳಿಗೆ ಶಿಸ್ತು ಕ್ರಮಕ್ಕಾಗಿ ಜೂನ್ 13ರಂದು ಶಿಫಾರಸ್ಸು ಮಾಡಲಾಗಿತ್ತು.
ತಪ್ಪು ಮಾಡಿದ್ದೇನೆ, ಬಡ್ತಿ ಇದೆ ರಕ್ಷಿಸಿ ಎಂದು ಶಾಸಕರಲ್ಲಿ ಅಂಗಲಾಚಿದ್ದ ಡಿಡಿಪಿಐ: ಕೊಳ್ಳೇಗಾಲ ಶಾಸಕ ಎ. ಆರ್. ಕೖಷ್ಣಮೂರ್ತಿ, ಡಿಡಿಪಿಐ ನಿಯಮ ಮೀರಿದ ಆದೇಶದಿಂದಾಗಿ ನೂರಾರು ಮಂದಿ ನಿರುದ್ಯೋಗಿಗಳು ಲಕ್ಷಾಂತರ ಹಣ ಕಳೆದುಕೊಂಡ ಬಗ್ಗೆ ಹಾಗೂ ನಕಲಿ ಸಂಸ್ಥೆಗೆ ಸರ್ಕಾರಿ ಅಧಿಕಾರಿಯಾಗಿ ಪರಿಶೀಲಿಸದೆ ಅನುಮತಿ ನೀಡಿದ ಕುರಿತು ವಿಧಾನಸಭೆ ಅಧೀವೇಶನವದಲ್ಲಿ ಚರ್ಚಿಸಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಹಾಗೂ ನಕಲಿ ಕಲಾಂ ಸಂಸ್ಥೆ ವಿರುದ್ದ ಕ್ರಿಮಿನಲ್ ಮೊಕದ್ದಮೆಗೆ ಆಗ್ರಹಿಸಿದ್ದರು.ಇದಕ್ಕೂ ಮುನ್ನ ಡಿಡಿಪಿಐ ಶಾಸಕರನ್ನ ದೂರವಾಣಿ ಮೂಲಕ ಕರೆಮಾಡಿ ಸದನದಲ್ಲಿ ಈ ವಿಚಾರ ಚರ್ಚೆ ಬೇಡ, ಕೈಬಿಡಿ, ನನಗೆ ಬಡ್ತಿಯಿದೆ. ತಪ್ಪು ಮಾಡಿ ಬಿಟ್ಟಿದ್ದೇನೆ. ನೀವು ಈ ವಿಚಾರ ಚರ್ಚಿಸಿದರೆ ಬಡ್ತಿ ಸಿಗಲ್ಲ. ನನ್ನನ್ನು ರಕ್ಷಿಸಿ ಎಂದು ಕೇಳಿಕೊಂಡಿದ್ದರು. ಆದರೆ ಶಾಸಕರು ನಿಮ್ಮಿಂದ ನೂರಾರು ಮಂದಿ ಮೋಸ ಹೋಗಿದ್ದಾರೆ. ಹಾಗಾಗಿ ನಾನು ನಿಮ್ಮನ್ನ ರಕ್ಷಿಸಲ್ಲ ಎಂದು ಡಿಡಿಪಿಐಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಡಿಡಿಪಿಐ ಆದೇಶದಿಂದಾಗಿ ನೂರಾರು ಮಂದಿ ಮೋಸ ಹೋಗಿರುವ ಕುರಿತು ಸದನದಲ್ಲಿ ಚರ್ಚಿಸಿದ್ದ ವೇಳೆ ಸಚಿವ ಮಧು ಬಂಗಾರಪ್ಪ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.