ಮದಗದ ಕೆರೆ ಬಳಿ ಘಟನೆ । ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಆದೇಶ
- ಕೆರೆಯಲ್ಲಿ ಪತ್ತೆಯಾದ ಚಿರತೆ ಬೇರೆ ಜಿಲ್ಲೆಯಲ್ಲಿ ಸೆರೆ ಸಿಕ್ಕ ಚಿರತೆ ಒಂದೇ ಎಂಬ ಬಗ್ಗೆ ತನಿಖೆ ನಡೆಸಬೇಕು- ಜು.31ರ ಬೆಳಗಿನ ಜಾವ 5.30ಕ್ಕೆ ಒಂದು ಜೀಪ್ ಮತ್ತು ಕ್ಯಾಂಟರ್ ನಲ್ಲಿ ಚಿರತೆ ತಂದು ಸದರಿ ಮದಗದ ಕೆರೆ ಸಮೀಪದಲ್ಲಿ ಬಿಟ್ಟಿರುವ ವರದಿಯಾಗಿದೆ.
- ಈ ಚಿರತೆ ಕರೆತಂದ ವಾಹನಗಳ ಪೋಟೋಗಳು, ಮೊಬೈಲ್, ವಾಟ್ಸಾಪ್ ವಿಡಿಯೋ ಗಳು ಹರಿದಾಡುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆಕನ್ನಡಪ್ರಭ ವಾರ್ತೆ, ಕಡೂರು
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಹೋಬಳಿ ಗ್ರಾಮದ ಸರ್ವೆ ನಂ. 77ರಲ್ಲಿನ ಎಮ್ಮೇದೊಡ್ಡಿ ಹುಲಿ ಸಂರಕ್ಷಿತ ಪ್ರದೇಶದ ಮದಗದ ಕೆರೆಯಲ್ಲಿ ಒಂದು ಗಂಡು ಚಿರತೆ ಮೃತಪಟ್ಟಿರುವ ಕುರಿತು ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಆದೇಶ ಹೊರಡಿಸಿದ್ದಾರೆ.ಘಟನೆಗೆ ಸಂಭಂದಿಸಿದಂತೆ ಚಿಕ್ಕಮಗಳೂರು ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಜುಲೈ 31 ರಂದು ಬೆಳಿಗ್ಗೆ ಎಮ್ಮೆದೊಡ್ಡಿ ಪ್ರದೇಶದಲ್ಲಿ ಸರ್ವೇ ನಂ. 77ರ ಹುಲಿ ಸಂರಕ್ಷಿತ ಪ್ರದೇಶವಾದ ಕಡೂರಿನಿಂದ ಸಿದ್ದರಹಳ್ಳಿಗೆ ಹೋಗುವ ರಸ್ತೆ ಯಲ್ಲಿ ಚಿರತೆ ಇಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಆಡಳಿತಾತ್ಮಕ ಅರಣ್ಯ ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ಗಂಭೀರ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ಆದರೆ ಹುಲಿ ಸಂರಕ್ಷಿತ ಮದಗದ ಕೆರೆಯಲ್ಲಿ ಗಂಡು ಚಿರತೆ ಮೃತದೇಹ ಪತ್ತೆಯಾಗಿದೆ. ಇದರ ಬಗ್ಗೆ ಜುಲೈ 31ರಲ್ಲಿ ಕಡೂರು ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ ಎಂದಿದ್ದಾರೆ. ಆದರೆ ಚಿಕ್ಕಮಗಳೂರು ಅರಣ್ಯ ಸಂರಕ್ಷಣಾಧಿಕಾರಿ ಸಾರ್ವಜನಿಕರಿಗೆ ತಿಳಿಸಿದಂತೆ ಜು. 31ರಂದು ಮದಗದ ಕೆರೆಯಲ್ಲಿ ಪತ್ತೆಯಾದ ಚಿರತೆ ಬೇರೆ ಜಿಲ್ಲೆಯಲ್ಲಿ ಸೆರೆ ಸಿಕ್ಕ ಚಿರತೆ ಒಂದೇ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದಿದ್ದಾರೆ.ಜು.31ರ ಬೆಳಗಿನ ಜಾವ 5.30ಕ್ಕೆ ಒಂದು ಜೀಪ್ ಮತ್ತು ಕ್ಯಾಂಟರ್ ನಲ್ಲಿ ತಂದು ಸದರಿ ಮದಗದ ಕೆರೆ ಸಮೀಪದಲ್ಲಿ ಬಿಟ್ಟಿರುವ ವರದಿಯಾಗಿದೆ. ಅಲ್ಲದೆ ಈ ಚಿರತೆಯನ್ನು ಕರೆತಂದ ವಾಹನಗಳ ಪೋಟೋಗಳು, ಮೊಬೈಲ್ ಮತ್ತು ವಾಟ್ಸಾಪ್ ವಿಡಿಯೋ ಗಳು ಹರಿದಾಡುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲು ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ 7 ದಿನಗಳ ಒಳಗಾಗಿ ವರದಿ ಸಲ್ಲಿಸಲು ತಿಳಿಸಿದ್ದಾರೆ.
ಇಬ್ಬರ ಮೇಲೆ ದಾಳಿ ಮಾಡಿದ ಚಿರತೆ ಮತ್ತು ಎಮ್ಮೆದೊಡ್ಡಿ ಗ್ರಾಮದ ಮದಗದ ಕೆರೆಯಲ್ಲಿ ಪತ್ತೆಯಾದ ಚಿರತೆ ಒಂದೇ ಎಂಬುದನ್ನು ಖಚಿತಪಡಿಸುವುದು ಹಾಗೂ ಪತ್ತೆಯಾದ ಚಿರತೆ ಸಾವಿನ ಬಗ್ಗೆ ತನಿಖೆ ನಡೆಸಿ ಕಾರಣ ನಿರ್ಧರಿಸಬೇಕು. ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ವರದಿಯನ್ನು ಕಚೇರಿಗೆ ಸಲ್ಲಿಸುವಂತೆ ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಆದೇಶಿಸಿದ್ದಾರೆ.