ಒಳಮೀಸಲಾತಿ ಜಾರಿಗೆ ಸರ್ಕಾರಕ್ಕೆ ಗಡವು

KannadaprabhaNewsNetwork |  
Published : Dec 30, 2024, 01:02 AM IST

ಸಾರಾಂಶ

ಬರುವ ಜನವರಿ 12 ರೊಳಗೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿ ಮಾಡಬೇಕು, ಇಲ್ಲವಾದಲ್ಲಿ ಸಮುದಾಯದ ಎಲ್ಲಾ ಸಂಘಟನೆಗಳ ಜೊತೆ ಸೇರಿ ಉಗ್ರ ಹೋರಾಟ ನಡೆಸುವುದಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಬರುವ ಜನವರಿ 12 ರೊಳಗೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿ ಮಾಡಬೇಕು, ಇಲ್ಲವಾದಲ್ಲಿ ಸಮುದಾಯದ ಎಲ್ಲಾ ಸಂಘಟನೆಗಳ ಜೊತೆ ಸೇರಿ ಉಗ್ರ ಹೋರಾಟ ನಡೆಸುವುದಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣ ಮಾಡಲು ಒತ್ತಾಯಿಸಿ 30 ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಅಂತಿಮವಾಗಿ ಸುಪ್ರೀಂ ಕೋರ್ಟಿನ 7 ಜನ ನ್ಯಾಯಾಧೀಶರ ಸಂವಿಧಾನ ಪೀಠ ಪರಿಶಿಷ್ಟರ ಒಳಮೀಸಲಾತಿ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕಿದೆ ಎಂದು ತೀರ್ಪು ನೀಡಿತ್ತು. ಆದರೆ ಕರ್ನಾಟಕ ರಾಜ್ಯ ಸರ್ಕಾರ ರಾಜಕೀಯ ಒತ್ತಡದ ಸುಳಿಗೆ ಸಿಲುಕಿ ಜಾರಿ ಮಾಡದೆ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.

ಸ್ವಾತಂತ್ರ್ಯ ನಂತರ ಪರಿಶಿಷ್ಟ ಜಾತಿಗೆ ಕೊಡಮಾಡಿದ ಶೇಕಡ 15ರಷ್ಟು ಮೀಸಲಾತಿಯು ಪರಿಶಿಷ್ಟ 101 ಜಾತಿಗಳ ಮಧ್ಯೆ ಸಮನಾಗಿ ಹಂಚಿಕೆಯಾಗಿಲ್ಲ. ಹಾಗಾಗಿ ಉದ್ಯೋಗ, ಶಿಕ್ಷಣ ಸವಲತ್ತಿನಲ್ಲಿ ತುಂಬಾ ವಂಚನೆಗೊಳಗಾದ ಮಾದಿಗ ಹಾಗೂ ಮಾದಿಗ ಸಂಬಂಧಿತ ಜಾತಿಗಳಾದ ಡೋಹರು, ದಕ್ಕಲಿಗ, ಮೋಚಿ, ಭಂಗಿ, ಜಾಡುಮಾಲಿ, ಸಮಗಾರ ಇತರೆ ಜಾತಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದಿವೆ. ಆ ಜಾತಿಯವರು ಬಡತನ, ನಿರುದ್ಯೋಗದಿಂದ ಬಳಲುತ್ತಿದ್ದಾರೆ ಎಂದರು.

ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದಲ್ಲಿ ದತ್ತಾಂಶ ಲಭ್ಯವಿದ್ದರೂ ಸಹ ಸರ್ಕಾರ ದತ್ತಾಂಶ ಸಂಗ್ರಹಕ್ಕಾಗಿ ಮತ್ತೊಂದು ಆಯೋಗ ರಚಿಸಿ ಗೊಂದಲ ಉಂಟುಮಾಡಿದೆ. 2011, 2011ರ ಜನಗಣತಿ ಹಾಗೂ 2015ರಲ್ಲಿ ಕಾಂತರಾಜು ಆಯೋಗ ನೀಡಿದ ವರದಿಯಲ್ಲಿ ಜಾತಿ ಗಣತಿ ದತ್ತಾಂಶ ಲಭ್ಯವಿದ್ದರೂ ಅಂಗೈ ಹುಣ್ಣಿಗೆ ಕನ್ನಡಿ ಹಿಡಿದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಈ ರೀತಿಯ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಮೂರು ತಿಂಗಳೊಳಗೆ ಅನುಷ್ಟಾನಗೊಳಿಸುವುದಾಗಿ ಹಾಗೂ ಒಳಮೀಸಲಾತಿ ಜಾರಿಯಾಗುವ ತನಕ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದ ಹುದ್ದೆಗಳಿಗೆ ನೇರ ನೇಮಕಾತಿ ಹಾಗೂ ಮುಂಬಡ್ತಿ ಮಾಡಲು ಅಧಿಸೂಚನೆ ಹೊರಡಿಸುವುದಿಲ್ಲ ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಒಳಗೊಳಗೆ ನೇಮಕಾತಿ ನಡೆಯುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಎಂದು ಡಾ.ಎನ್.ಮೂರ್ತಿ ಹೇಳಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರ ಸಲಹೆ ಪಡೆದು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಒಳಮೀಸಲಾತಿ ವಿರೋಧವಿದ್ದಾರೆ ಎಂದು ರಾಜ್ಯದ ಮಾದಿಗ ಸಮುದಾಯದ ಭಾವನೆ ಇದೆ ಎಂದರು.

ಈ ಭಾವನೆ ಹೋಗಲಾಡಿಸಲು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಒಳಮೀಸಾತಿ ಬಗ್ಗೆ ಧ್ವನಿ ಮಾಡಬೇಕು. ಸಂವಿಧಾನದ ಆಶಯಗಳನ್ನು ಪಾಲನೆ ಮಾಡುವುದಾಗಿ ಪಾರ್ಲಿಮೆಂಟಿನಲ್ಲಿ ಹೇಳುವ ಈ ನಾಯಕರು ಒಳಮೀಸಲಾತಿ ಬಗ್ಗೆಯೂ ಮಾತನಾಡಬೇಕು ಎಂದು ಒತ್ತಾಯಿಸಿದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಟ್ಟಪ್ಪ, ಸಂಘಟನಾ ಅಧ್ಯಕ್ಷ ಪುಟ್ಟಸ್ವಾಮಿ, ಮುಖಂಡರಾದ ಲಕ್ಷ್ಮಮ್ಮ, ಡಿ.ಎಸ್.ಸುನಿಲ್, ಬೈಲಹೊನ್ನಯ್ಯ, ಕೋದಂಡರಾಮ, ರಾಘುಕುಮಾರ್, ಹನುಮಂತರಾಜು, ಸಾದತ್ ಮೊದಲಾದವರು ಹಾಜರಿದ್ದರು.

ಫೋಟೋ: 00000000000000

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ