ಯೋಜನೆಗಳ ಅನುಷ್ಠಾನಕ್ಕೆ ಮೇ 26ಕ್ಕೆ ಡೆಡ್‌ ಲೈನ್‌ವಿಫಲರಾದರೆ, ತಲೆದಂಡ ಖಚಿತ

KannadaprabhaNewsNetwork |  
Published : Apr 18, 2026, 01:15 AM IST
ರರ | Kannada Prabha

ಸಾರಾಂಶ

ಚಿಕ್ಕಮಗಳೂರುಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಜನರಿಗೆ ತಲುಪಿಸಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮೇ 26ರ ಡೆಡ್‌ ಲೈನ್‌ ನೀಡಿರುವ ಶಾಸಕ ಎಚ್‌.ಡಿ.ತಮ್ಮಯ್ಯ, ವಿಫಲಗೊಂಡ ಇಲಾಖೆ ಮುಖ್ಯಸ್ಥರ ತಲೆದಂಡ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ, ವರ್ಗಾವಣೆ ಆಗಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಜನರಿಗೆ ತಲುಪಿಸಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮೇ 26ರ ಡೆಡ್‌ ಲೈನ್‌ ನೀಡಿರುವ ಶಾಸಕ ಎಚ್‌.ಡಿ.ತಮ್ಮಯ್ಯ, ವಿಫಲಗೊಂಡ ಇಲಾಖೆ ಮುಖ್ಯಸ್ಥರ ತಲೆದಂಡ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ಮೂರು ವರ್ಷ ಪೂರ್ಣಗೊಳ್ಳಲಿದೆ. ಜನಪರ, ಮಹಿಳೆ ಮತ್ತು ಬಡವರ ಪರ ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಅದಕ್ಕೆ ಸಾಕಷ್ಟು ಅನುದಾನ ಸಹ ಮೀಸಲಿಟ್ಟಿದೆ. ಅನುಷ್ಠಾನಗೊಳಿಸಬೇಕಿರುವುದು ಅಧಿಕಾರಗಳ ಜವಾಬ್ದಾರಿ. ಈ ಕಾರ್ಯದಲ್ಲಿ ವಿಫಲವಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜನಸ್ನೇಹಿ ಆಡಳಿತ ನೀಡಬೇಕೆಂಬುದು ಸರ್ಕಾರದ ಉದ್ದೇಶ. ಅಧಿಕಾರಿಗಳು ಜನ ಸ್ನೇಹಿ ಆಡಳಿತ ನೀಡದಿದ್ದರೆ ಅವರಿಗೇಕೆ ಸಹಕಾರ ನೀಡಬೇಕು. ಮೇ 26ರ ನಂತರ ಅಧಿಕಾರಿಗಳು ಯಾವುದೇ ಸಬೂಬು ಹೇಳುವಂತಿಲ್ಲ. ಕೆಲವು ಇಲಾಖೆ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಕೆಲವರು ಮಾಡುತ್ತಿಲ್ಲ. ಎಲ್ಲವನ್ನೂ ಗಮನಿಸಲಾಗುತ್ತಿದೆ. ಮೇ 26ರ ನಂತರ ಇಲಾಖೆವಾರು ಪ್ರಗತಿ ಪರಿಶೀಲನೆ ನಡೆಸಲಾಗುವುದು. ರಾಜ್ಯ ಸರ್ಕಾರ ಮೇ ಕೊನೆ ವರೆಗೆ ಸಾಮೂಹಿಕ ವರ್ಗಾವಣೆಗೆ ಅವಕಾಶ ನೀಡಿದೆ. ಕೆಲಸ ಮಾಡುವುದಕ್ಕೆ ಇಷ್ಟ ಇಲ್ಲದವರು ಹೋಗಬಹುದು ಎಂದು ಖಡಕ್‌ ಸೂಚನೆ ನೀಡಿದರು.

ಪಿಎಚ್‌ಸಿಗೆ ಭೇಟಿ: ಔಷಧಿ ಕೊರತೆ ಇದ್ದರೆ ಕ್ರಮ

ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಸ್ಪತ್ರೆ ಸೇರಿದಂತೆ ಪ್ರಮುಖ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧಿ, ಮಾತ್ರೆ ಇಲ್ಲ ಎಂಬ ವರದಿ ಹರಿದಾಡುತ್ತಿವೆ ಎಂಬ ಪ್ರಶ್ನೆಗೆ ಆಸ್ಪತ್ರೆಗಳಲ್ಲಿ ಅಗತ್ಯವಿರುವ ಔಷಧಿ ಲಭ್ಯವಿದೆ. ಕೊರತೆ ಇರುವ ಔಷಧಿ ಮಾತ್ರ ಖರೀದಿ ಮಾಡಿ ವಿತರಣೆ ಮಾಡಲು ಎಬಿಆರ್‌ಕೆ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಮಾಹಿತಿ ನೀಡಿದರು. ಶಾಸಕ ತಮ್ಮಯ್ಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು, ಔಷಧಿ ಕೊರತೆ ಕಂಡು ಬಂದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಅರ್ಹರಿಗೆ ಬಿಪಿಎಲ್‌ ಕೊಡಿ

ಬಡವರು ಮನೆ ಕಟ್ಟಲು ಬ್ಯಾಂಕ್‌ ಸಾಲದ ಉದ್ದೇಶದಿಂದ ಆದಾಯ ತೆರಿಗೆ ಪಾವತಿಸಿರುತ್ತಾರೆ ಅಂತವರ ಪಡಿತರ ಚೀಟಿ ಎಪಿಎಲ್ ಗೆ ಪರಿವರ್ತಿಸಲಾಗಿದೆ. ಇದರಿಂದ ಬಹಳಷ್ಟು ಕುಟುಂಬಗಳಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಆ ಕುಟುಂಬಗಳ ಅರ್ಜಿ ಪರಿಶೀಲಿಸಿ ಆದ ಅನಾನುಕೂಲ ಸರಿಪಡಿಸಬೇಕು ಎಂದು ಶಾಸಕರು ಸೂಚಿಸಿದರು.

ಜಿಲ್ಲೆಯಲ್ಲಿ ಕೆಲವು ರಸ ಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸುತ್ತಿರುವ ಬಗ್ಗೆ ಕ್ರಮವಹಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ನೇಮಕಾತಿ ಪಾರದರ್ಶಕವಾಗಿ ನಡೆಸಬೇಕು ಎಂದರು. ಶಿರವಾಸೆ, ಕೊಂಡದಖಾನ್ ಹಾಗೂ ಬೀಕನಹಳ್ಳಿಯ ನಿವೇಶನ ರಹಿತರಿಗೆ ನಿವೇಶನ ನೀಡಲು ಜಾಗ ಗುರುತು ಮಾಡಲಾಗಿದೆ. ಬೀಕನಹಳ್ಳಿಯಲ್ಲಿ ನಿವೇಶನಕ್ಕೆ 6 ಎಕರೆ ಗುರುತು ಮಾಡಲಾಗಿದೆ. ಮೂರು ತಿಂಗಳೊಳಗೆ ಹಕ್ಕುಪತ್ರ ನೀಡಬೇಕು. ಪ್ರವಾಸೋದ್ಯಮ ಇಲಾಖೆಯಡಿ ತೆಗೆದುಕೊಂಡ ಕಾಮಗಾರಿಗಳನ್ನು ಮೇ 26ರ ಒಳಗೆ ಪೂರ್ಣಗೊಳಿಸಲು ಗಡುವು ನೀಡಿದರು.

ಸಭೆಯಲ್ಲಿ ಚಿಕ್ಕಮಗಳೂರು ತಾಪಂ ಆಡಳಿತ ಅಧಿಕಾರಿ ಸುಜಾತಾ, ಕಾರ್ಯ ನಿರ್ವಾಹಕ ಅಧಿಕಾರಿ ವಿಜಯಕುಮಾರ್ ಹಾಗೂ ಕಡೂರು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪ್ರವೀಣ್ ಇದ್ದರು.

-- ಬಾಕ್ಸ್‌ --ಗೈರಾದ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು 3 ಅಥವಾ 6 ತಿಂಗಳಿಗೆ ಒಂದು ಬಾರಿ ಕೈಗೊಳ್ಳ ಲಾಗುವುದು. ಇದಕ್ಕೂ ಯಾವುದೇ ಸೂಚನೆ ನೀಡದೇ ಅಧಿಕಾರಿಗಳು ಗೈರಾಗುತ್ತಾರೆ ಎಂದರೆ ಅಂತಹ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒಗೆ ಸೂಚನೆ ನೀಡುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಶಾಸಕ ತಮ್ಮಯ್ಯ ನಿರ್ದೇಶಿಸಿದರು.

---ಬಾಕ್ಸ್‌---

ಜಿಲ್ಲಾ ಸರ್ಜನ್ ಚಂದ್ರಶೇಖರ್‌ ಸೇವೆಯಿಂದ ಬಿಡುಗಡೆಗೊಳಿಸಿ

ಕಳೆದ 3 ದಿನಗಳ ಹಿಂದೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕೊರತೆ ಕಂಡು ಬಂದಿತು. ಈ ಪರಿಸ್ಥಿತಿ ಆಗಾಗ ಕಂಡು ಬರುತ್ತಿದೆ. ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಸರ್ಜನ್ ಡಾ. ಚಂದ್ರಶೇಖರ್‌ ಆಡಳಿತದಲ್ಲಿ ನ್ಯೂನತೆ ಕಂಡು ಬಂದಿದ್ದು ಅವರನ್ನು ಕೂಡಲೇ ಸೇವೆಯಿಂದ ಬಿಡುಗಡೆ ಮಾಡಲು ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಡೀನ್ ಡಾ. ಹರೀಶ್ ಗೆ ಸಭೆಯಲ್ಲೇ ಮೊಬೈಲ್ ನಲ್ಲಿ ಮಾತನಾಡಿ ಸೂಚಿಸಿದರು.-- ಬಾಕ್ಸ್‌---

ಈ ವರ್ಷ 35 ಶಾಲೆಯಲ್ಲಿ ಎಲ್‌ಕೆಜಿ ಆರಂಭ

ಚಿಕ್ಕಮಗಳೂರು ತಾಲೂಕಿನ 40 ಶಾಲೆಗಳಲ್ಲಿ ಎಲ್.ಕೆ.ಜಿ. ಪ್ರಾರಂಭಿಸಲು ಮಂಜೂರಾತಿ ನೀಡಿದರೂ ಈವರೆಗೆ 5 ಕಡೆ ಗಳಲ್ಲಿ ಮಾತ್ರ ಪ್ರಾರಂಭವಾಗಿವೆ. ಉಳಿದ 35 ಶಾಲೆಗಳಲ್ಲಿ ಜೂನ್ ನಿಂದ ತರಗತಿ ಆರಂಭಿಸಲಾಗುವುದು ಎಂದು ಬಿಇಒ ಮಾಹಿತಿ ನೀಡಿದರು.

---ಬಾಕ್ಸ್‌--

ಗೃಹಲಕ್ಷ್ಮಿ ಹಣ ಸಾಲಕ್ಕೆ ಕಟ್‌ ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಗೃಹ ಲಕ್ಷ್ಮಿಸೇರಿದಂತೆ ವಿಧವಾ ವೇತನ, ಕಿಸಾನ್‌ ಸಮ್ಮಾನ್‌, ವಿವಿಧ ಯೋಜನೆ ಹಣವನ್ನು ಬ್ಯಾಂಕ್‌ಗಳು ಸಾಲದ ಕಂತಿಗೆ ಜಮೆ ಮಾಡುತ್ತಿರುವುದನ್ನು ಕೆಡಿಪಿ ಸದಸ್ಯರು ಗಮನಕ್ಕೆ ತಂದಾಗಸರ್ಕಾರದ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಲೀಡ್‌ ಬ್ಯಾಂಕ್‌ ಅಧಿಕಾರಿಗೆ ಸೂಚನೆ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಳ್ಳಕೆರೆಯಲ್ಲಿ 18ರಿಂದ ಬಸವೇಶ್ವರ ಜಯಂತಿ
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ