ಹಾವೇರಿ: ಹಾವೇರಿ ನಗರ ಸೇರಿದಂತೆ ಜಿಲ್ಲೆಯ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಡಿಸೆಂಬರ್ ಅಂತ್ಯದೊಳಗೆ ಅನುಷ್ಠಾನಗೊಳಿಸಬೇಕು. ಯಾವುದೇ ಕಾರಣಕ್ಕೂ ಈ ಅವಧಿಯನ್ನು ವಿಸ್ತರಣೆ ಮಾಡುವುದಿಲ್ಲ. ಗುತ್ತಿಗೆದಾರರು ವಿಳಂಬ ಧೋರಣೆ ಅನುಸರಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಎಚ್ಚರಿಕೆ ನೀಡಿದರು. ವಿಕಾಸಸೌಧದಲ್ಲಿ ಗುರುವಾರ ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ಕುಡಿಯುವ ನೀರು ಪೂರೈಕೆ ಯೋಜನಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಹಾವೇರಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದೆ. ಮುಖ್ಯಮಂತ್ರಿಗಳು ಒಂದು ಬಾರಿ ಹಾಗೂ ನಾನು ನಾಲ್ಕು ಬಾರಿ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದರೂ ನಿಗದಿತ ಅವಧಿಯಲ್ಲಿ ಯೋಜನೆಗಳ ಅನುಷ್ಠಾನ ಸಾಧ್ಯವಾಗಿಲ್ಲ. ಡಿಸೆಂಬರ್ ಅಂತ್ಯದೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಗುತ್ತಿದಾರರಿಂದ ಅಂಡರ್ ಟೇಕಿಂಗ್ ಪಡೆಯಿರಿ. ಒಂದು ವೇಳೆ ವಿಫಲರಾದರೆ ಕಾನೂನು ಪ್ರಕಾರ ದಂಡ ವಿಧಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಹುಗ್ರಾಮ ಕುಡಿವ ನೀರು ಪೂರೈಕೆ ಯೋಜನೆಗೆ (ಹಂಸಭಾವಿ ಹಾಗೂ ಇತರ ಗ್ರಾಮಗಳು) ಅರಣ್ಯ ಇಲಾಖೆ ಅನುಮತಿ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದಾಗ, ಇದುವರೆಗೆ ಏಕೆ ಗಮನಕ್ಕೆ ತರಲಿಲ್ಲ ಎಂದು ಸಚಿವರು ಗರಂ ಆದರು. ಸಿಎಂ ಸಭೆ ಮಾಡಿದ ಸಂದರ್ಭದಲ್ಲೂ ಈ ಮಾಹಿತಿ ನೀಡಲಿಲ್ಲ. ಇಂತಹ ಪ್ರಮಾದಗಳೂ ಕೂಡ ಯೋಜನೆ ವಿಳಂಬಕ್ಕೆ ಕಾರಣವಾಗುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳ ಅನುಷ್ಠಾನಕ್ಕೆ ನಿಗದಿಪಡಿಸಿದ್ದ ಕಾಲಮಿತಿಯಲ್ಲಿ ಏಕೆ ಸಾಧ್ಯವಾಗಿಲ್ಲ ಎಂದು ಸಚಿವರು ಪ್ರಶ್ನಿಸಿದರು. ಅಗತ್ಯ ಪ್ರಮಾಣದ ಯಂತ್ರಗಳು ಮತ್ತು ಕಾರ್ಮಿಕರನ್ನು ಬಳಕೆ ಮಾಡದಿರುವುದೇ ಯೋಜನೆಗಳ ವಿಳಂಬಕ್ಕೆ ಪ್ರಮುಖ ಕಾರಣ. ಗುತ್ತಿಗೆದಾರರಿಗೆ ಎಷ್ಟು ಬಾರಿ ಸೂಚನೆ ನೀಡಿದರೂ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಜಿಪಂ ಸಿಇಒ ಅಕ್ಷಯ್ ಶ್ರೀಧರ್ ಹೇಳಿದರು.ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳು, ಸರ್ವಜ್ಞ ಹಾಗೂ ಇತರ 88 ಕೆರೆ ತುಂಬಿಸುವ ಯೋಜನೆ, ಮೆಡ್ಲೇರಿ ಮತ್ತು ಇತರ 19 ತುಂಬಿಸುವ ಯೋಜನೆ, ಬುಳ್ಳಾಪುರ – ಹಾಡೆ ಕೆರೆ ತುಂಬಿಸುವ ಯೋಜನೆ ಹಾಗೂ ಸ್ಥಳೀಯ ಸಂಸ್ಥೆಗಳ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಕೈಗೊಳ್ಳುತ್ತಿರುವ ಅಮೃತ್ 2-0 ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಯಾವುದೇ ಕಾರಣಕ್ಕೂ ವಿಳಂಬ ಸಹಿಸುವುದಿಲ್ಲ. ವಿಳಂಬಕ್ಕೆ ಕಾರಣಗಳನ್ನು ಕೊಡುವ ಬದಲಿಗೆ ಅಗತ್ಯ ಯಂತ್ರೋಪಕರಣ ಹಾಗೂ ಮ್ಯಾನ್ ಪವರ್ ಒದಗಿಸಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.ಅರಣ್ಯಪ್ರದೇಶದಲ್ಲಿ ಪೈಪ್ ಲೈನ್ ಹಾಕುವ ವೇಳೆ ಸಾಧ್ಯವಾದಷ್ಟು ಕಡಿಮೆ ಸಂಖ್ಯೆಯಲ್ಲಿ ಮರಗಳನ್ನು ಕಡಿಯುವಂತೆ ಯೋಜನೆ ರೂಪಿಸಿ, ಹೆಚ್ಚು ಮರಗಳನ್ನು ನಾಶಮಾಡಬೇಡಿ ಎಂದು ಸರ್ಕಾರದ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೂಚನೆ ನೀಡಿದರು.ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಪ್ರಕಾಶ್ ಕೋಳಿವಾಡ, ಸರ್ಕಾರದ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಪಂ ಸಿಇಒ ಅಕ್ಷಯ್ ಶ್ರೀಧರ್ ಹಾಗೂ ನೀರಾವರಿ ನಿಗಮದ ಅಧಿಕಾರಿಗಳು ಭಾಗವಹಿಸಿದ್ದರು. ಪೌರಾಯುಕ್ತರ ಅಮಾನತಿಗೆ ನಿರ್ದೇಶನ: ಕರ್ತವ್ಯಲೋಪ ಆರೋಪದ ಮೇಲೆ ಹಾವೇರಿ ನಗರಸಭೆ ಆಯುಕ್ತರನ್ನು ಅಮಾನತು ಮಾಡಿ ಎಂದು ಸಚಿವ ಶಿವಾನಂದ ಪಾಟೀಲ ನಿರ್ದೇಶನ ನೀಡಿದರು.ಹಾವೇರಿ ನಗರದಲ್ಲಿ ಬೇಸಿಗೆ ದಿನಗಳಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ. ಮುಲ್ಲಾನ ಕೆರೆಗೆ ಕೊಳಚೆ ನೀರು ಹರಿಯುತ್ತಿದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ. ಕಳೆದ ಬಾರಿ ಹಾವೇರಿಯಲ್ಲಿ ನಡೆದ ಸಭೆಯಲ್ಲಿ ಬೇರೆಯವರಿಗೆ ಚಾರ್ಜ್ ಕೊಡಿ ಎಂದು ಸೂಚನೆ ನೀಡಿದ್ದರೂ ಅವರು ಪಾಲನೆ ಮಾಡಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.ಹಾವೇರಿ ನಗರದಲ್ಲಿ 20 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಜನರಿಗೆ ಏನು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದ ಅವರು, 30 ಕೋಟಿ ರು. ವೆಚ್ಚ ಮಾಡಿ ವಿತರಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರೂ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.ಮುಖ್ಯಮಂತ್ರಿಗಳಿಂದ ಉದ್ಘಾಟನೆ: ಹಾನಗಲ್ ತಾಲೂಕಿನಲ್ಲಿ ಸುಮಾರು 500 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಕ್ಕೆ ತಂದಿರುವ ಕೆರೆಗೆ ನೀರು ತುಂಬಿಸುವ ಎರಡು ಯೋಜನೆಗಳನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ಕೆರೆ ತುಂಬಿಸುವ ಯೋಜನೆ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ ಶಾಸಕ ಶ್ರೀನಿವಾಸ ಮಾನೆ ಅವರು, ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳಿರುವ ತಾಲೂಕು ಹಾನಗಲ್. ಆದರೂ ನೀರಿನ ಸಮಸ್ಯೆ ಕಾಡುತ್ತಿದೆ. ಬಾಳಂಬೀಡು ಸೇರಿ ಎರಡು ಯೋಜನೆಗಳಿಂದ ಸುಮಾರು 260 ಕೆರೆಗಳಿಗೆ ನೀರು ಹರಿಯಲಿದೆ ಎಂದು ಹೇಳಿದರು. ಯಾವುದಾದರೂ ಗ್ರಾಮಗಳ ಕೆರೆಗಳನ್ನು ಇನ್ನೂ ಈ ಯೋಜನೆಗೆ ಸೇರ್ಪಡೆ ಮಾಡಲು ಅವಕಾಶ ಇದ್ದರೆ ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.