ಚನ್ನರಾಯಪಟ್ಟಣದಲ್ಲಿ ಹೆಲ್ಮೆಟ್‌ ಕಡ್ಡಾಯಕ್ಕೆ ಗಡುವು

KannadaprabhaNewsNetwork |  
Published : Oct 10, 2026, 01:45 AM IST
9ಎಚ್ಎಸ್ಎನ್6 :  | Kannada Prabha

ಸಾರಾಂಶ

ದ್ವಿಚಕ್ರ ವಾಹನ ಸವಾರರು ಗುಣಮಟ್ಟದ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಪಟ್ಟಣದಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರ ಜನಪ್ರತಿನಿಧಿಗಳ ಸಹಕಾರ ಮುಖ್ಯ ಎಂದು ಡಿವೈಎಸ್‌ಪಿ ಜಿ. ಆರ್‌. ಶಿವಕುಮಾರ್‌ ತಿಳಿಸಿದರು. ಮಾಹಿತಿದಾರರಿಂದ ಲಭಿಸುವ ಮಾಹಿತಿಯ ಆಧಾರದಲ್ಲಿ ಹಲವು ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಲು ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿದೆ. ಸಾರ್ವಜನಿಕರೂ ಯಾವುದೇ ಅಪರಾಧ ಅಥವಾ ಅಕ್ರಮ ಚಟುವಟಿಕೆಗಳ ಬಗ್ಗೆ ಭಯವಿಲ್ಲದೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ದ್ವಿಚಕ್ರ ವಾಹನ ಸವಾರರು ಗುಣಮಟ್ಟದ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಪಟ್ಟಣದಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರ ಜನಪ್ರತಿನಿಧಿಗಳ ಸಹಕಾರ ಮುಖ್ಯ ಎಂದು ಡಿವೈಎಸ್‌ಪಿ ಜಿ. ಆರ್‌. ಶಿವಕುಮಾರ್‌ ತಿಳಿಸಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪೊಲೀಸ್ ಇಲಾಖೆಯೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ ಅಪಘಾತದಿಂದ ಸಾವು ಸಂಭವಿಸುತ್ತಿರುವುದರಿಂದ ವಾಹನ ಸವಾರರು ತಮ್ಮ ಜೀವದ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು.ಮುಂದಿನ ದಿನಗಳಲ್ಲಿ ವಾಹನ ಕಲಿಕಾ ಪರವಾನಗಿ ಹಾಗೂ ಲೈಸೆನ್ಸ್ ಕೊಡಿಸಲು ಸಾರಿಗೆ ಇಲಾಖೆಯ ಸಹಕಾರದಿಂದ ಚಾಲನಾ ಪರವಾನಗಿ ಶಿಬಿರ ಆಯೋಜಿಸಲು ಉದ್ದೇಶಿಸಲಾಗಿದೆ. ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಒಂದು ವಾರದ ಕಾಲಾವಕಾಶ ನೀಡಿ, ಬಳಿಕ ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ವಿಶ್ವಾಸ ಗಳಿಸಿ ಕೆಲಸ ನಿರ್ವಹಿಸುತ್ತೇವೆ. ತಮ್ಮ ಬ್ಯಾಂಕ್ ಖಾತೆಯಲ್ಲಿ ಮೋಸವಾದರೆ ಕೂಡಲೇ ಸೈಬರ್‌ ಕ್ರೈಂ ೧೯೩೦ಕ್ಕೆ ಕರೆ ಮಾಡಿ ಹಣ ಬೇರೆಯವರಿಗೆ ವರ್ಗಾವಣೆ ಆಗದಂತೆ ನಿಲ್ಲಿಸಬೇಕು ಎಂದರು. ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮಾಹಿತಿದಾರರ ಗುರುತು ಹಾಗೂ ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿಡುವುದು ಇಲಾಖೆಯ ಕರ್ತವ್ಯವಾಗಿದೆ.ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಗೌಪ್ಯತೆ ಕಾಪಾಡುವುದು ಅತ್ಯಂತ ಮುಖ್ಯ. ಮಾಹಿತಿದಾರರಿಂದ ಲಭಿಸುವ ಮಾಹಿತಿಯ ಆಧಾರದಲ್ಲಿ ಹಲವು ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಲು ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿದೆ. ಸಾರ್ವಜನಿಕರೂ ಯಾವುದೇ ಅಪರಾಧ ಅಥವಾ ಅಕ್ರಮ ಚಟುವಟಿಕೆಗಳ ಬಗ್ಗೆ ಭಯವಿಲ್ಲದೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.ಅಪಘಾತ ತಡೆಗೆ ಕ್ರಮ:

ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಫುಟ್ಪಾತ್‌ಗಳನ್ನು ತೆರವುಗೊಳಿಸಲು ಪುರಸಭೆ ಹಾಗೂ ಜನಪ್ರತಿನಿಧಿಗಳ ಸಹಕಾರ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.ಖಾಲಿ ಮನೆಗಳ ಮೇಲೆ ನಿಗಾ

ದಸರಾ ರಜೆಯಲ್ಲಿ ಮನೆಗಳನ್ನು ಖಾಲಿ ಮಾಡಿ ಊರಿಗೆ ತೆರಳುವವರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ನಗರ ಠಾಣಾ ಪೊಲೀಸ್ ನಿರೀಕ್ಷಕ ಎಸ್.ಎಂ ರಘುಪತಿ ಮನವಿ ಮಾಡಿದರು. ಮನೆ ಖಾಲಿಯಾಗಿರುವ ಅವಧಿಯ ಮಾಹಿತಿಯನ್ನು ಪೊಲೀಸರಿಗೆ ನೀಡಿ ’ಲಾಕ್‌ಡ್ ಹೌಸ್ ಬೀಟ್ ಸಿಸ್ಟಂ’ ಸೇವೆ ಬಳಸಿಕೊಳ್ಳಬಹುದು. ಇದರಿಂದ ಬೀಟ್ ಪೊಲೀಸರು ಖಾಲಿ ಮನೆಗಳ ಮೇಲೆ ನಿಯಮಿತ ನಿಗಾ ವಹಿಸಲು ಸಾಧ್ಯವಾಗುತ್ತದೆ ಎಂದರು.ಮನೆಯಿಂದ ತೆರಳುವ ಮುನ್ನ ಬಾಗಿಲು, ಕಿಟಕಿಗಳನ್ನು ಭದ್ರಪಡಿಸುವುದು, ಸಿಸಿಟಿವಿ ಪರಿಶೀಲಿಸುವುದು ಹಾಗೂ ಅಗತ್ಯ ಬೆಳಕಿನ ವ್ಯವಸ್ಥೆ ಮಾಡಬೇಕು. ಚಿನ್ನ, ಬೆಳ್ಳಿ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿ ಇರಿಸದೆ ಬ್ಯಾಂಕ್ ಲಾಕರ್‌ನಲ್ಲಿ ಇಡುವುದು ಉತ್ತಮ. ಪ್ರವಾಸದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮುಂಚಿತವಾಗಿ ಹಂಚಿಕೊಳ್ಳದಂತೆ ಸಲಹೆ ನೀಡಿದರು.೧೧೨ ಸೇವೆ ದುರ್ಬಳಕೆ ಬೇಡ

ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ನೆರವಾಗುವ ೧೧೨ ಸೇವೆ ಬಳಕೆಯಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಅಪಘಾತ, ಅಪರಾಧ ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ತುರ್ತು ಸಂದರ್ಭಗಳಲ್ಲಿ ಮಾತ್ರ ೧೧೨ಕ್ಕೆ ಕರೆ ಮಾಡುವಂತೆ ಮನವಿ ಮಾಡಿದರು. ಅನಗತ್ಯ ಹಾಗೂ ಸುಳ್ಳು ಕರೆಗಳಿಂದ ನಿಜವಾದ ತುರ್ತು ಸಂದರ್ಭದಲ್ಲಿರುವವರಿಗೆ ನೆರವು ತಲುಪಲು ವಿಳಂಬವಾಗಬಹುದು ಎಂದು ಎಚ್ಚರಿಸಿದರು.ವಿದ್ಯಾರ್ಥಿಗಳಿಗೆ ಜಾಗೃತಿ:

ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್, ಪೋಕ್ಸೋ ಕಾಯ್ದೆ ಹಾಗೂ ಸೈಬರ್ ಅಪರಾಧಗಳ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪಷ್ಪರಿಣಾಮ, ಮಕ್ಕಳ ಸುರಕ್ಷತೆ, ಆನ್‌ಲೈನ್ ವಂಚನೆ, ಸೈಬರ್ ಕಿರುಕುಳ ಹಾಗೂ ವೈಯಕ್ತಿಕ ಮಾಹಿತಿಯ ರಕ್ಷಣೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.ಪಂಪ್‌ಸೆಟ್ ವೈರ್ ಕಳವು ತಡೆಗೆ ಗಸ್ತು

ಗ್ರಾಮಾಂತರ ಪ್ರದೇಶಗಳಲ್ಲಿ ಮೋಟರ್ ಪಂಪ್‌ಸೆಟ್‌ಗಳ ವಿದ್ಯುತ್ ವೈರ್ ಕಳವು ತಡೆಗೆ ರಾತ್ರಿ ಗಸ್ತು ಹೆಚ್ಚಿಸಲಾಗಿದೆ ಎಂದು ಗ್ರಾಮಾಂತರ ಠಾಣಾ ಪೋಲಿಸ್ ನಿರೀಕ್ಷಕ ಕೆ.ಇ.ನಿರಂಜನ್ ಕುಮಾರ್ ತಿಳಿಸಿದರು. ಜಮೀನುಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ರೈತರಲ್ಲಿ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ನಗರ ಠಾಣಾ ಆರಕ್ಷಕ ನಿರೀಕ್ಷಕ ಎಸ್.ಎಂ.ರಘುಪತಿ, ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಕೆ.ಇ. ನಿರಂಜನ್ ಕುಮಾರ್‌, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ್ ಶೆಟ್ಟಿಹಳ್ಳಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಉಳ್ಳವಳ್ಳಿ, ಖಜಾಂಚಿ ಎ. ಎಲ್. ನಾಗೇಶ್, ಉಪಾಧ್ಯಕ್ಷರಾದ ನಂದನ್‌ ಪುಟ್ಟಣ್ಣ, ಕೆ.ಪಿ.ಪುಟ್ಟರಾಜು ಸೇರಿದಂತೆ ಪದಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.===ಫೊಟೋ:

ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪೊಲೀಸ್ ಇಲಾಖೆಯೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಜಿ. ಆರ್‌. ಶಿವಕುಮಾರ್‌ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಘಾಟನೆಗೆ ಮುನ್ನವೇ ಕಟ್ಟಡ ಬಿರುಕು
ಬಸರವಳ್ಳಿ ಪಂಚಾಯಿತಿ ಹಸಲರ ವಾರ್ಡಿಗೆ ಬೇಕಿದೆ ಸಂಪರ್ಕ ಸೇತುವೆ