ಹರಾಜು ಜಾಗದಲ್ಲಿ ಮೈನಿಂಗ್‌ ಆರಂಭಿಸಲು ಡೆಡ್‌ಲೈನ್‌?

KannadaprabhaNewsNetwork |  
Published : Jul 02, 2026, 01:45 AM IST
ಕ್ಯಾಪ್ಷನ1ಕೆಡಿವಿಜಿ37 ದಾವಣಗೆರೆಯಲ್ಲಿ ಕರ್ನಾಟಕ ಎಲ್‌ಪಿಜಿ ಗ್ರಾಮೀಣ ವಿತರಕರ ಫೆಡರೇಷನ್ ರಾಜ್ಯಾಧ್ಯಕ್ಷ ವೈ.ಎನ್.ತಿಪ್ಪಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹರಾಜು ಮೂಲಕ ಜಾಗ ಪಡೆದು ವರ್ಷಗಟ್ಟಲೆ ಗಣಿಗಾರಿಕೆ ಆರಂಭಿಸದೇ ಇರುವುದನ್ನು ತಡೆಯಲು ಜಾಗ ಪಡೆದ ನಂತರ ಕನಿಷ್ಠ ಎಷ್ಟು ಅವಧಿಯೊಳಗೆ ಗಣಿಗಾರಿಕೆ ಆರಂಭಿಸಬೇಕು ಎನ್ನುವ ಬಗ್ಗೆ ವೈಜ್ಞಾನಿಕ ನಿಯಮ ರೂಪಿಸಲು ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜವಾಬ್ದಾರಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹರಾಜು ಮೂಲಕ ಜಾಗ ಪಡೆದು ವರ್ಷಗಟ್ಟಲೆ ಗಣಿಗಾರಿಕೆ ಆರಂಭಿಸದೇ ಇರುವುದನ್ನು ತಡೆಯಲು ಜಾಗ ಪಡೆದ ನಂತರ ಕನಿಷ್ಠ ಎಷ್ಟು ಅವಧಿಯೊಳಗೆ ಗಣಿಗಾರಿಕೆ ಆರಂಭಿಸಬೇಕು ಎನ್ನುವ ಬಗ್ಗೆ ವೈಜ್ಞಾನಿಕ ನಿಯಮ ರೂಪಿಸಲು ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜವಾಬ್ದಾರಿ ನೀಡಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ವರ್ಷಗಟ್ಟಲೆ ಗಣಿಗಾರಿಕೆ ಆರಂಭಿಸದವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಇಲಾಖಾ ಅಧಿಕಾರಿಗಳನ್ನು ಪ್ರಶ್ನಿಸಿದರು. ಅಧಿಕಾರಿಗಳ ಉತ್ತರಕ್ಕೆ ಸಮಾಧಾನಗೊಳ್ಳದ ಮುಖ್ಯಮಂತ್ರಿ ಅವರು, ರಾಜ್ಯದಲ್ಲಿ ಗಣಿಗಾರಿಕೆಗೆ ಭೂಮಿ ಪಡೆದವರ ಸಂಖ್ಯೆ ಎಷ್ಟು? ಭೂಮಿ ಲೀಸ್‌ಗೆ ಪಡೆದ ಪ್ರಕರಣಗಳ ಸ್ಥಿತಿ ಗತಿ ಏನಿದೆ? ಗಣಿಗಾರಿಕೆ ಆರಂಭಿಸದಿರುವವರು ಎಷ್ಟು ಮಂದಿ ಇದ್ದಾರೆ, ಅದಕ್ಕೆ ಕಾರಣಗಳೇನು, ಅರಣ್ಯ ಅನುಮತಿ ಬಾಕಿ ಇರುವ ಪ್ರಕರಣಗಳೆಷ್ಟು, ಬಾಕಿ ಉಳಿಯಲು ಕಾರಣಗಳೇನು ಎನ್ನುವುದೂ ಸೇರಿ ಸಮಗ್ರ ವರದಿ ಸಲ್ಲಿಸುವಂತೆ ಗಣಿ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂದೂರಿ ಅವರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಜೊತೆಗೆ ರಾಜ್ಯದ ಗಣಿ ನೀತಿ ಮತ್ತು ಇತರೆ ರಾಜ್ಯಗಳಲ್ಲಿ ಇರುವ ಗಣಿ ನೀತಿ, ನಿಯಮ ಮತ್ತು ಕಾನೂನುಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ, ಹರಾಜು ನಡೆದು ಎಷ್ಟು ಕನಿಷ್ಠ ಅವಧಿಯೊಳಗೆ ಗಣಿಗಾರಿಕೆ ಆರಂಭಿಸಬೇಕು ಎನ್ನುವ ಬಗ್ಗೆ ವೈಜ್ಞಾನಿಕ ನಿಯಮ ರೂಪಿಸಲು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್‌.ಕೆ.ಅತೀಕ್‌ ಮತ್ತು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಅವರಿಗೆ ಜವಾಬ್ದಾರಿ ವಹಿಸಲಾಯಿತು.

ಅಕ್ರಮ ಗಣಿಗಾರಿಕೆ ವಿರುದ್ಧ 268 ಎಫ್ಐಆರ್‌:

ಸಭೆಗೆ ಮಾಹಿತಿ ಒಪ್ಪಿಸಿದ ಅಧಿಕಾರಿಗಳು, 2025-26ನೇ ಸಾಲಿನಲ್ಲಿ 8,845.39 ಕೋಟಿ ರು. ಆದಾಯ ಸಂಗ್ರಹವಾಗಿದ್ದು, ನಿಗದಿತ ಗುರಿಯ ಶೇ.98 ಸಾಧಿಸಲಾಗಿದೆ. 2026-27ನೇ ಸಾಲಿನಲ್ಲಿ ಈವರೆಗೆ 1,164.11 ಕೋಟಿ ರು. ಆದಾಯ ಸಂಗ್ರಹಿಸಲಾಗಿದೆ. ಕಳೆದ ಸಾಲಲ್ಲಿ ಅಕ್ರಮ ಮತ್ತು ನಿಯಮಬಾಹಿರ ಗಣಿಗಾರಿಕೆ ನಡೆಸಿದ 6,301 ಪ್ರಕರಣಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ. 31.26 ಕೋಟಿ ರು. ದಂಡ ಸಂಗ್ರಹಿಸಿ, 268 ಎಫ್‌ಐಆರ್‌ ದಾಖಲಿಸಲಾಗಿದೆ. ಇದರಲ್ಲಿ 3,648 ಮರಳು ಗಣಿಗಾರಿಕೆ ಪ್ರಕರಣಗಳೂ ಸೇರಿವೆ ಎಂದು ತಿಳಿಸಿದರು.

ಇದೇ ವೇಳೆ, ಹಿಂದಿನ ಅವಧಿಗೆ ಅಥವಾ ಪೂರ್ವಾನ್ವಯವಾಗುವ ತೆರಿಗೆಯಿಂದ ಸರ್ಕಾರಕ್ಕೆ ಬರಬೇಕಾದ ಆದಾಯಗಳ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಗಣಿ ನಿಯಮಗಳು ಮತ್ತು ಸುಪ್ರೀಂಕೋರ್ಟ್‌ನ ನಿರ್ದೇಶನಗಳನ್ನು ಮೀರದಂತೆ ಕ್ರಮ ವಹಿಸುವಂತೆ ಸೂಚಿಸಿದರು. ಜೊತೆಗೆ ಪೂರ್ವಾನ್ವಯದೊಂದಿಗೆ ತೆರಿಗೆ ಜಾರಿಯಾದರೆ ಸರ್ಕಾರದ ಆದಾಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮೌಲ್ಯಮಾಪನ ಮಾಡಲು ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2ನೇ ದಿನ ಎಸ್‌ಐಆರ್‌ ನಮೂನೆ ವಿತರಣೆ ಚುರುಕು
7,8ಕ್ಕೆ ಬೆಂಗ್ಳೂರಲ್ಲಿ ಶರಣ ಸಾಹಿತ್ಯ ಸಮ್ಮೇಳನ