ಕನ್ನಡಪ್ರಭ ವಾರ್ತೆ ಬೆಂಗಳೂರು

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಪ್ರಕ್ರಿಯೆಯ ಭಾಗವಾಗಿ ಬುಧವಾರ ಸಂಜೆ ವೇಳೆಗೆ ರಾಜ್ಯದಾದ್ಯಂತ ಈವರೆಗೆ 54.68 ಲಕ್ಷ ಮತದಾರರ ಗಣತಿ ನಮೂನೆಯನ್ನು ವಿತರಿಸಲಾಗಿದ್ದು, ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ ಈವರೆಗೆ ಶೇ 9.87ರಷ್ಟು ಪ್ರಗತಿ ಸಾಧಿಸಲಾಗಿದೆ.

ಈವರೆಗೆ ವಿತರಿಸಲಾದ ಗಣತಿ ನಮೂನೆಗಳ ಪೈಕಿ, 2.38 ಲಕ್ಷ ಮತದಾರರ ನಮೂನೆಗಳನ್ನು ಡಿಜಿಟಲೀಕರಿಸಲು ಸಾಧ್ಯವಾಗಿದೆ. 26,213 ಮತದಾರರು ಈವರೆಗೆ ಆನ್‌ಲೈನ್‌ ಮೂಲಕ ಗಣತಿ ನಮೂನೆಗಳನ್ನು ಭರ್ತಿ ಮಾಡಿದ್ದಾರೆ. ಸ್ಥಳದಲ್ಲಿಲ್ಲದ, ಬೇರೆ ವಿಳಾಸಕ್ಕೆ ಸ್ಥಳಾಂತರವಾದ, ಮೃತಪಟ್ಟ ಮತ್ತು ಎರಡು ಕಡೆ ನೋಂದಣಿಯಾದ ಒಟ್ಟು 2,565 ಮತದಾರರ ವಿವರ ಲಭ್ಯವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಮಂಗಳವಾರ 12.48 ಲಕ್ಷ ಗಣತಿ ನಮೂನೆ ವಿತರಣೆ:

ಮಂಗಳವಾರ ಮತಗಟ್ಟೆ ಅಧಿಕಾರಿಗಳ ಮನೆ-ಮನೆ ಭೇಟಿ ಕಾರ್ಯ ಆರಂಭವಾಯಿತು. ಮಂಗಳವಾರ ಸಂಜೆ 6 ಗಂಟೆಗೆ ಹೊತ್ತಿಗೆ 12.48 ಲಕ್ಷ ಗಣತಿ ನಮೂನೆಗಳನ್ನು ವಿತರಿಸಲು ಸಾಧ್ಯವಾಯಿತು. ಆ ಪೈಕಿ 47,817 ನಮೂನೆಗಳನ್ನು ಡಿಜಿಟಲೀಕರಿಸಲಾಗಿತ್ತು. ಮೊದಲ ದಿನಕ್ಕೆ ಹೋಲಿಸಿದರೆ, ಎರಡನೇ ದಿನ ಗಣನೀಯ ಪ್ರಗತಿ ದಾಖಲಾಗಿದೆ. ಆದರೆ ಗಣತಿ ನಮೂನೆಗಳ ವಿತರಣೆಯ ಮಟ್ಟದಲ್ಲಿಯೇ, ಅವುಗಳ ಡಿಜಿಟಲೀಕರಣ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.