ಮುಂಡರಗಿ: ನಿತ್ಯದ ವ್ಯಾಪಾರ ವಹಿವಾಟುಗಳಲ್ಲಿ ಅನ್ಯಭಾಷಿಕರೊಂದಿಗೆ ಹೊಂದಿಕೊಂಡು ಅವರ ಭಾಷೆಯಲ್ಲಿಯೇ ಮಾತನಾಡಿ ವ್ಯವಹರಿಸುತ್ತೇವೆ. ಆದರೆ ಅವರು ಮಾತ್ರ ಕನ್ನಡ ಭಾಷೆ ಮಾತನಾಡುವುದೇ ಇಲ್ಲ. ಹೀಗಾಗಿ ಅನ್ಯ ಭಾಷಿಕರೊಂದಿಗೆ ನಾವು ಕನ್ನಡದಲ್ಲಿ ಮಾತನಾಡಿಯೇ ವ್ಯವಹರಿಸಬೇಕು ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.
ಅವರು ಶುಕ್ರವಾರ ಪಟ್ಟಣದ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕಾಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಸಂಯುಕ್ತ ಆಶ್ರಯದಲ್ಲಿ ಜರುಗಿದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣಗೊಂಡು 50 ವರ್ಷಗಳು ಗತಿಸಿವೆ. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಯೊಂದಿಗೆ ನಾಡಿನ ಅಭ್ಯುದಯಕ್ಕೆ ಶ್ರಮಿಸಿದ ಹಾಗೂ ಈಗಲೂ ಶ್ರಮಿಸುತ್ತಿರುವ ಎಲ್ಲ ಮಹನೀಯರನ್ನು ಆದರ ಅಭಿಮಾನದಿಂದ ಅಭಿನಂದಿಸುವೆ. ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆ ರಚಿಸಿ ಕರ್ನಾಟಕ ಏಕೀಕರಣ ಚಳವಳಿಗೆ ಸ್ಪೂರ್ತಿ ತುಂಬಿದ ಹುಯಿಲಗೋಳ ನಾರಾಯಣ ರಾಯರನ್ನು ಹಾಗೂ ಇದಕ್ಕೆ ಕಾರಣೀಕರ್ತರಾದ ಎಲ್ಲ ನಾಯಕರನ್ನು ಅತ್ಯಂತ ಹೆಮ್ಮೆಯಿಂದ ಸ್ಮರಿಸಿಕೊಳ್ಳಬೇಕು ಎಂದರು.
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಕನ್ನಡಿಗರಾದ ನಾವು ಮೊದಲು ಕನ್ನಡದಲ್ಲಿ ಬರೆಯುವ, ಓದುವ, ಮಾತನಾಡಿವ ಹಾಗೂ ಎಲ್ಲ ವ್ಯವಹಾರಗಳನ್ನು ನಮ್ಮ ಮಾತೃಭಾಷೆಯಲ್ಲಿ ಮಾಡುವಂತಾಗಬೇಕು ಎಂದರು.ಕ.ರಾ. ಬೆಲ್ಲದ ಮಹಾವಿದ್ಯಾಲಯದ ಡಾ. ಸಂತೋಷ ಹಿರೇಮಠ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿ, ಮಾಧ್ಯಮ, ಸಂಘಟನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 5 ಜನರಿಗೆ ತಾಲೂಕಾಡಳಿತದಿಂದ ಸನ್ಮಾನಿಸಲಾಯಿತು. ಅಲ್ಲದೇ ಅಚ್ಚ ಕನ್ನಡ ಮಾತನಾಡುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಸದಸ್ಯರಾದ ಲಿಂಗರಾಜಗೌಡ ಪಾಟೀಲ, ಪ್ರಹ್ಲಾದ ಹೊಸಮನಿ, ನಾಗರಾಜ ಹೊಂಬಳಗಟ್ಟಿ, ಶಿವಪ್ಪ ಚಿಕ್ಕಣ್ಣವರ, ಸಿಪಿಐ ಮಂಜುನಾಥ ಕುಸುಗಲ್, ಬಿಇಒ ಎಚ್.ಎಂ. ಪಡ್ನೇಶಿ, ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಪಿಡಬ್ಲೂಡಿ ಎಇಇ ಬಸವರಾಜ ಎಚ್, ಕಪ್ಪತ್ ಹಿಲ್ಸ್ ಅಧಿಕಾರಿ ಮಂಜುನಾಥ ಮೇಗಲಮನಿ, ಸಮಾಜಿಕ ಅರಣ್ಯಾಧಿಕಾರಿ ಸುನಿತಾ ಬಿ.ಎಸ್. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅರುಣಾ ಸೋರಗಾವಿ, ಅಲ್ಪಸಂಖ್ಯಾತ ವಸತಿ ನಿಲಯದ ಅಧಿಕಾರಿ ಸವಿತಾ ಸಾಸ್ವಿಹಳ್ಳಿ, ಅಬಕಾರಿ ಅಧಿಕಾರಿ ಸುವರ್ಣಾ ಕೋಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಮನ್ವಯಾಧಿಕಾರಿ ಜಿ.ಎಸ್. ಅಣ್ಣೀಗೇರಿ ಸ್ವಾಗತಿಸಿ, ಹನಮರಡ್ಡಿ ಇಟಗಿ ನಿರೂಪಿಸಿದರು.