ಬ್ಯಾಂಕಿನಲ್ಲಿ ಜನಸಾಮಾನ್ಯರೊಂದಿಗೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿ : ಪ್ರತೀಕ್ ಬಾಯಲ್

KannadaprabhaNewsNetwork |  
Published : Sep 27, 2024, 01:29 AM ISTUpdated : Sep 27, 2024, 01:30 AM IST
ಲೀಡ್25 | Kannada Prabha

ಸಾರಾಂಶ

ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಬ್ಯಾಂಕುಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನಸಾಮಾನ್ಯರೊಂದಿಗೆ ಸ್ಥಳೀಯ ಭಾಷೆ ಮತ್ತು ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್‌ ಬಾಯಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಬ್ಯಾಂಕುಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನಸಾಮಾನ್ಯರೊಂದಿಗೆ ಸ್ಥಳೀಯ ಭಾಷೆ ಅಥವಾ ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು. ಇದರಿಂದ ಬ್ಯಾಂಕಿನ ವ್ಯವಹಾರಗಳು ಮತ್ತಷ್ಟು ಅಭಿವೃದ್ಧಿಗೊಳ್ಳುತ್ತವೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.

ಅವರು ಬುಧವಾರ ಇಲ್ಲಿನ ರಜತಾದ್ರಿಯ ಜಿಪಂನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರೀಕೃತ ಬ್ಯಾಂಕುಗಳ ಹೆಸರು ಹಾಗೂ ಸ್ಥಳಗಳನ್ನು ಬ್ಯಾಂಕುಗಳ ಬೋರ್ಡುಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಅಳವಡಿಸಬೇಕು. ಗ್ರಾಹಕರೊಂದಿಗೆ ಸಂವಹನ ಮಾಡಲು ಅನುಕೂಲವಾಗುವಂತೆ ಸ್ಥಳೀಯ ವ್ಯಕ್ತಿಗಳನ್ನು ನೇಮಿಸಬೇಕು ಎಂದವರು ಸಲಹೆ ಮಾಡಿದರು.

ಸಾರ್ವಜನಿಕರ ಜೀವನಮಟ್ಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈ ಕುರಿತು ಬ್ಯಾಂಕ್ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜನಸಾಮಾನ್ಯರಿಗೆ ವ್ಯವಹಾರ ಚಟುವಟಿಕೆಗಳ ಕುರಿತು ಅರಿವು ಮೂಡಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಜನರನ್ನು ಯೋಜನೆಯ ಫಲಾನುಭವಿಗಳನ್ನಾಗಿಸಲು ಕ್ರಮ ವಹಿಸಬೇಕು ಎಂದರು.

ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಕಳೆದ ಸಾಲಿನಲ್ಲಿ 52, 676 ಕೋಟಿ ರು. ವ್ಯವಹಾರ ನಡೆದಿದ್ದು, ಪ್ರಸಕ್ತ ಸಾಲಿನಲ್ಲಿ ಇದುವರೆಗೆ 58, 352 ಕೋಟಿ ರು. ವ್ಯವಹಾರ ನಡೆದು, ಶೇ.10.78 ರಷ್ಟು ಬೆಳೆವಣಿಗೆಯಾಗಿದೆ. ಆರ್ಥಿಕತೆಯಲ್ಲಿ ಉಡುಪಿ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಲು ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಆದ್ಯತಾ ವಲಯಗಳಿಗೆ 2703.09 ಕೋಟಿ ರು., ಸಾಲ ವಿತರಣೆ ಮಾಡಿ ಶೇ. 30.74 ಹಾಗೂ ಆದ್ಯತೇತರ ವಲಯಗಳಿಗೆ 1677.82 ಕೋಟಿ ರು. ಸಾಲ ವಿತರಣೆ ಮಾಡಿ, ಶೇ. 43.65 ರಷ್ಟು ಸಾಧನೆ ಮಾಡಲಾಗಿದೆ ಎಂದರು.

ಸಿಡಿ ಅನುಪಾತದಲ್ಲಿ ಹಿನ್ನಡೆ

ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಪ್ರಬಂಧಕಿ ಶೀಬಾ ಸಹಜನ್ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಜಿಲ್ಲೆಯಲ್ಲಿ ಠೇವಣಿ ಮುಂಗಡ (ಸಿಡಿ) ಅನುಪಾತವು ಶೇ.46.94 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.46.92 ರಷ್ಟು ಕಡಿಮೆಯಾಗಿ 0.02 ರಷ್ಟು ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಈ ಅನುಪಾತ ಶೇ. 50 ಕ್ಕಿಂತ ಕಡಿಮೆ ಇರುವುದು ಅತ್ಯಂತ ಕಳವಳಕಾರಿಯಾದ ವಿಷಯವಾಗಿದ್ದು, ಇದನ್ನು ಹೆಚ್ಚಿಸಲು ಎಲ್ಲಾ ಬ್ಯಾಂಕುಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ., ಆರ್.ಬಿ.ಐ.ನ ಪ್ರತಿನಿಧಿ ಇಳಾ ಸಾಹು, ನಬಾರ್ಡ್ ನ ಡಿ.ಡಿ.ಎಂ. ಸಂಗೀತಾ ಕಾರ್ಥಾ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ ಎಜಿಎಂ ರಾಜೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ