ಕನ್ನಡಪ್ರಭ ವಾರ್ತೆ ಶಹಾಪುರ
ಮನವಿ ಪತ್ರ ಸಲ್ಲಿಸಿದ ನಂತರ ಸಮಿತಿಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿಯವರು ಮಾತನಾಡಿ, ಪೋಷಕರು ತಾವು ಕಲಿಯದಿದ್ದರೂ ತಮ್ಮ ಮಕ್ಕಳಿಗೆ ಮಾತ್ರ ಒಳ್ಳೆ ಶಿಕ್ಷಣ ಕೊಡಿಸಬೇಕು ಎನ್ನುವ ಉದ್ದೇಶದಿಂದ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದಾರೆ.
ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ನಿಯಂತ್ರಣಕ್ಕೆ ಸರಕಾರ ಎಷ್ಟೇ ಬಿಗಿ ಕಾನೂನು, ನಿಯಮ ರೂಪಿಸಿದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ವರ್ಷದಿಂದ ವರ್ಷಕ್ಕೆ ನಿಗಧಿತ ಶುಲ್ಕಕ್ಕಿಂತ ದುಪ್ಪಟ್ಟು ಹಣವನ್ನು ಪೋಷಕರಿಂದ ಸುಲಿಗೆ ಮಾಡುತ್ತಲೆ ಇವೆ. ಒಂದು ಮಗುವಿಗೆ 40 ರಿಂದ 50 ಸಾವಿರ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಸರ್ಕಾರ ನಿಗದಿಪಡಿಸಿದ ಆಯಾ ಶೈಕ್ಷಣಿಕ ವರ್ಷದ ಬೋಧನಾ ಶುಲ್ಕದ ವಿವರಗಳನ್ನು ಖಾಸಗಿ ಶಾಲೆಗಳು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಪೋಷಕರಿಂದ ಪಡೆದ ಹಣಕ್ಕೆ ರಶೀದಿ ನೀಡಬೇಕು ಹಾಗೂ ನಿಯಮ ಪಾಲಿಸದ ಶಾಲೆಯ ಮಾನ್ಯತೆ ರದ್ದುಪಡಿಸುವ ನಿಯಮವಿದೆ. ಅಲ್ಲದೆ, ಕಾನೂನು ಬಾಹಿರವಾಗಿ 3-4 ತಿಂಗಳು ಮುಂಚಿತವಾಗಿಯೇ ಮುಂದಿನ ಶೈಕ್ಷ ಣಿಕ ವರ್ಷದ ಬೋಧನಾ ಶುಲ್ಕವನ್ನು ಈ ವರ್ಷದ ಫಲಿತಾಂಶ ಪ್ರಕಟಿಸುವ ಮುನ್ನವೇ ವಸೂಲಿ ಮಾಡಲಾಗುತ್ತಿದೆ. ಇಷ್ಟೆಲ್ಲಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದರೂ, ಇವೆಲ್ಲದಕ್ಕೂ ಮೂಗುದಾರ ಹಾಕಬೇಕಿದ್ದ ಶಿಕ್ಷಣ ಇಲಾಖೆ ಮೌನವಾಗಿದೆ ಎಂದು ದೂರಿದರು.
ತಾಲೂಕಿನಲ್ಲಿ ನಡೆಯುತ್ತಿರುವ ಈ ಅಕ್ರಮ ದಂಧೆಯಲ್ಲಿ ಅಧಿಕಾರಿಗಳು ಶಾಮಿಲಾಗಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ. ತಕ್ಷಣ ತಾಲೂಕಿನಲ್ಲಿ ಅನುಮತಿ ಪಡೆಯದೆ ವಸತಿ ಶಾಲೆಗಳನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಕ್ಷಣ ವಸತಿ ಶಾಲೆಗಳನ್ನು ರದ್ದು ಪಡಿಸದಿದ್ದರೆ, ನ್ಯಾಯಾಲಯದಲ್ಲಿ ಅಧಿಕಾರಿಗಳ ಮತ್ತು ಶಿಕ್ಷಣ ಸಂಸ್ಥೆ ವಿರುದ್ಧ ದೂರು ದಾಖಲಿಸಬೇಕಾಗುತ್ತದೆ ಎಂದು ಅವರು ಒತ್ತಾಯಿಸಿದರು.ಸಂಘರ್ಷ ಸಮಿತಿಯ ತಾಲೂಕ ಸಂಚಾಲಕ ಮರಿಯಪ್ಪ ಕ್ರಾಂತ ಮಾತನಾಡಿ, ಕೇವಲ ಹಣದಾಸೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ವಸತಿ ಶಾಲೆಗಳನ್ನು ನಡೆಸುತ್ತಿವೆ. ಅಲ್ಲಿ ಮಕ್ಕಳಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ. ಅಲ್ಲದೆ ಮಕ್ಕಳಿಗೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು?. ಸುಮಾರು ವರ್ಷಗಳಿಂದ ವಸತಿ ಶಾಲೆಗಳು ನಡೆಸುತ್ತಿದ್ದರು ಮೌನವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಸರಕಾರಕ್ಕೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಿವಲಿಂಗ ಹಸನಾಪುರ, ಚಂದಪ್ಪ ಮುನಿಯಪ್ಪನವರ್, ಮಲ್ಲಪ್ಪ ಪೂಜಾರಿ, ಮಲ್ಲಿಕಾರ್ಜುನ ಹೊಸಮನಿ, ಬಲಭೀಮಾ ಬೇವಿನಹಳ್ಳಿ, ಶ್ರೀಮಂತ ಸಿಂಗನಹಳ್ಳಿ, ಶಿವಪುತ್ರ ಡಾಂಗೆ, ಚನ್ನಬಸ್ಸು ಗುರುಶಣಗಿ, ತಿಪ್ಪಣ್ಣ ಶೆಳ್ಳಿಗಿ, ಬಸಲಿಂಗಪ್ಪ ಹಳ್ಳಿ ಹೊನ್ನಪ್ಪ ಪೂಜಾರಿ ಸೇರಿದಂತೆ ಅನೇಕರು ಇದ್ದರು.