ಜಿಲ್ಲೆಯಲ್ಲಿ ಸಂಭವಿಸುವ ಪ್ರತಿಯೊಂದು ಜನನ ಮತ್ತು ಮರಣದ ವಿವರಗಳನ್ನು ಯಾವುದೇ ತಪ್ಪುಗಳಿಗೆ ಆಸ್ಪದ ನೀಡದಂತೆ ನಿಖರವಾಗಿ ಮಾಹಿತಿ ದಾಖಲು ಮಾಡುವಂತೆ ನೋಂದಣಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.
ಉಡುಪಿ: ಜಿಲ್ಲೆಯಲ್ಲಿ ಸಂಭವಿಸುವ ಪ್ರತಿಯೊಂದು ಜನನ ಮತ್ತು ಮರಣದ ವಿವರಗಳನ್ನು ಯಾವುದೇ ತಪ್ಪುಗಳಿಗೆ ಆಸ್ಪದ ನೀಡದಂತೆ ನಿಖರವಾಗಿ ಮಾಹಿತಿ ದಾಖಲು ಮಾಡುವಂತೆ ನೋಂದಣಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.ಅವರು ಮಂಗಳವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನನ ಮತ್ತು ಮರಣ ನೋಂದಣಿಯು ಭವಿಷ್ಯದ ಕೆಲಸ ಕಾರ್ಯಗಳಿಗೆ ಇವುಗಳ ಪ್ರಮಾಣಪತ್ರವು ಅವಶ್ಯವಿದ್ದು, ಜನನ ಮತ್ತು ಮರಣದ ವಿವರಗಳನ್ನು ದಾಖಲು ಮಾಡುವಾಗ ನೋಂದಣಾಧಿಕಾರಿಗಳು ಎಚ್ಚರಿಕೆ ಮತ್ತು ಜವಾಬ್ದಾರಿಯುತವಾಗಿ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು. ಮೂಲ ದಾಖಲೆಗಳನ್ನು ಪರಿಶೀಲಿಸದೇ ಘಟನೆಗಳ ಹೆಸರು, ದಿನಾಂಕ ಮತ್ತು ವಿಳಾಸವನ್ನು ತಪ್ಪಾಗಿ ನಮೂದಿಸುವುದು ಸೇರಿದಂತೆ ಮತ್ತಿತರ ಸಾಮಾನ್ಯ ತಪ್ಪುಗಳು ನೋಂದಣಿ ಕಾರ್ಯದಲ್ಲಿ ಆಗುತ್ತಿವೆ ಎಂದರು.
ಮಗುವಿನ ಹೆಸರು ಮತ್ತು ಜೈವಿಕ ತಂದೆ-ತಾಯಿಯ ಹೆಸರನ್ನು ಸೇರ್ಪಡೆ ಹಾಗೂ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಜೈವಿಕ ತಂದೆ / ತಾಯಿಯ ಜಂಟಿ ಸಹಿ ಮತ್ತು ಅಗತ್ಯ ದಾಖಲೆಗಳನ್ನು ಖಾತರಿಪಡಿಸಿಕೊಂಡು ನಿಯಮಾನುಸಾರ ಮಾಹಿತಿಯನ್ನು ದಾಖಲಿಸಬೇಕು ಜನನ ಮರಣ ನೋಂದಣಿ ಸಮಯದಲ್ಲಿ ಕರಡು ಪ್ರತಿಯನ್ನು ಸಂಬಂಧಪಟ್ಟವರಿಗೆ ತೋರಿಸಿ, ಅನುಮೋದನೆ ಪಡೆಯುವುದು ಸೂಕ್ತ ಎಂದರು.ಒಂದೊಮ್ಮೆ ಅರ್ಜಿದಾರರು ನೀಡಿರುವ ದಾಖಲೆಗಳು ನಕಲಿ ಎಂದು ಕಂಡುಬಂದಲ್ಲಿ ಸ್ಥಳೀಯ ಪೊಲೀಸರ ಪರಿಶೀಲನೆಯ ನಂತರವಷ್ಟೇ ಪ್ರಮಾಣ ಪತ್ರ ನೀಡಬೇಕು ಎಂದರು.ನ್ಯಾಯಾಲಯದ ಜನನ – ಮರಣ ತಿದ್ದುಪಡಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮನ್ಸ್ ಜಾರಿಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಲಭ್ಯವಿರುವ ದಾಖಲೆಗಳೊಂದಿಗೆ ಹಾಜರಾಗಿ ನಿಲುವನ್ನು ಸಲ್ಲಿಸಬೇಕು. ಅಧಿಕಾರಿಗಳು ಹಾಜರಾಗಲು ಸಾಧ್ಯವಿಲ್ಲದಿದ್ದಲ್ಲಿ ಅವರ ಪರವಾಗಿ ಪ್ರತಿನಿಧಿಯನ್ನು ನಿಯೋಜಿಸುವುದರೊಂದಿಗೆ ಗೈರು ಹಾಜರಾತಿಯನ್ನು ತಪ್ಪಿಸಬೇಕು ಎಂದರು.ಜಿಲ್ಲೆಯಲ್ಲಿ ಒಟ್ಟು 574 ಜನನ-ಮರಣ ನೋಂದಣಿ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, 2026 ರ ಜನವರಿಯಿಂದ ಈವರೆಗೆ ಗ್ರಾಮಾಂತರ ಪ್ರದೇಶದಲ್ಲಿ 1256, ನಗರ ವ್ಯಾಪ್ತಿಯಲ್ಲಿ 7095 ಸೇರಿದಂತೆ ಒಟ್ಟು 8351 ಜನನ ನೋಂದಾವಣೆಯಾದರೆ, ಗ್ರಾಮೀಣ ಪ್ರದೇಶದಲ್ಲಿ 5399, ನಗರ ಪ್ರದೇಶದಲ್ಲಿ 3583 ಸೇರಿದಂತೆ ಒಟ್ಟು 8982 ಮರಣ ಘಟನೆಗಳು ನೋಂದಾವಣೆಯಾಗಿವೆ. 39 ನಿರ್ಜೀವ ಜನನಗಳು ನೋಂದಣಿಯಾಗಿವೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಮ್.ವ್ಹಿ ದೊಡಮನಿ ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಡಿಹೆಚ್‌ಓ ಡಾ. ಬಸವರಾಜ್ ಹುಬ್ಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.ನಿರ್ಜೀವ ಜನನಕ್ಕೆ ಕಾರಣ ದಾಖಲಿಸಬೇಕು
ಜನನ ಸಮಯದಲ್ಲಿ ಮಗು ಮರಣ ಹೊಂದಿದ ಸಂದರ್ಭದಲ್ಲಿ ನೋಂದಣಿ ಮಾಡುವಾಗ ಮರಣದ ಕಾರಣ ಕುರಿತು ನಮೂದಿಸಲು ಪೋರ್ಟಲ್‌ನಲ್ಲಿ ಯಾವುದೇ ಆಯ್ಕೆಗೆ ನಮೂದು ಇಲ್ಲದೇ ಇರುವುದು ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪೋರ್ಟಲ್‌ನಲ್ಲಿ ತಿದ್ದುಪಡಿಗೆ ಸರ್ಕಾರದ ಗಮನಕ್ಕೆ ತರಲು ಪತ್ರ ಬರೆಯುವಂತೆ ಡಿಸಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.