ಕನ್ನಡಪ್ರಭ ವಾರ್ತೆ ಹನೂರು
ಕಿಡಿಗೇಡಿಗಳ ಕೃತ್ಯಕ್ಕೆ ಜಾನುವಾರುಗಳು ಸಿಡಿಮದ್ದನ್ನು ತಿಂದು ಸಾವನ್ನಪ್ಪಿರುವುದು ಆತಂಕಕಾರಿ ಬೆಳವಣಿಗೆ, ಹೀಗಾಗಿ ಅಂತಹ ಘಟನೆಗಳು ಮತ್ತು ಅಂತಹ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಸಂಬಂಧಪಟ್ಟ ಇಲಾಖೆಗೆ ತಿಳಿಸುವಂತೆ ತಾಲೂಕು ದಂಡಾಧಿಕಾರಿ ಗುರುಪ್ರಸಾದ್ ತಿಳಿಸಿದರು.ತಾಲೂಕಿನ ಕೌದಳ್ಳಿ ಗ್ರಾಮದ ಅರಣ್ಯ ಇಲಾಖೆ ಆವರಣದಲ್ಲಿ ಜಾನುವಾರುಗಳಿಗೆ ಸಿಡಿಮದ್ದನ್ನು ಇಟ್ಟು ಕೃತ್ಯ ಎಸಗುತ್ತಿರುವ ಬಗ್ಗೆ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಆರು ತಿಂಗಳಿನಿಂದ ಕೌದಳ್ಳಿ ಹಾಗೂ ಶೆಟ್ಟಳ್ಳಿ ವಿವಿಧ ಭಾಗಗಳಲ್ಲಿ ಕಿಡಿಗೇಡಿಗಳು ಜಾನುವಾರುಗಳಿಗೆ ಸಿಡಿಮದ್ದನ್ನು ಇಟ್ಟು ಅದನ್ನು ತಿಂದ ಜಾನುವಾರುಗಳು ಗಾಯಗೊಂಡು, ಮುಖ ಛಿದ್ರಗೊಂಡಿದೆ. ಮೂಕ ಪ್ರಾಣಿಗಳನ್ನು ಹತ್ಯೆ ಮಾಡಲು ಬಳಸುತ್ತಿರುವ ಸಿಡಿಮದ್ದನ್ನು ಇಡುತ್ತಿರುವ ವ್ಯಕ್ತಿಗಳ ಬಗ್ಗೆ, ಹಾಗೂ ಅಂತಹ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿ, ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಜೊತೆಗೆ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.ಇನ್ಸ್‌ಪೆಕ್ಟರ್ ಚಿಕನ್ ಶೆಟ್ಟಿ ಮಾತನಾಡಿ, ಜಾನುವಾರುಗಳ ಹತ್ಯೆಗೆ ಕೆಲವರು ಸಿಡಿಮದ್ದು ಇಟ್ಟು ಬೇಟೆಯಾಡಲು ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ, ಆದರೆ ಇದಕ್ಕೆ ಮೂಕ ಪ್ರಾಣಿಗಳಾದ ಜಾನುವಾರುಗಳು ಬಲಿಯಾಗುತ್ತಿವೆ. ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಇಂತಹ ವ್ಯಕ್ತಿಗಳ ಬಗ್ಗೆ ನಿಗ ವಹಿಸಿರುವುದರಿಂದ ಅಂತಹ ಪ್ರಕರಣದಲ್ಲಿ ಭಾಗಿಯಾಗುವ ಕಿಡಿಗೇಡಿಗಳ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ಹಿರಿಯ ವೈದ್ಯಾಧಿಕಾರಿ ಸಿದ್ದರಾಜು ಮಾತನಾಡಿ, ಇಂತಹ ಪ್ರಕರಣದಲ್ಲಿ ಮೂಕ ಪ್ರಾಣಿಗಳನ್ನು ಕೊಲ್ಲುತ್ತಿರುವವರ ಬಗ್ಗೆ ಎಚ್ಚರಿಕೆಯಿಂದ ರೈತರು ಇರಬೇಕು. ಜೊತೆಗೆ ಸಿಡಿಮದ್ದಿನಿಂದ ಬಾಯಿ ಮತ್ತು ಮುಖ ಛಿದ್ರಗೊಂಡು ಜಾನುವಾರುಗಳನ್ನು ಕಳೆದುಕೊಳ್ಳುತ್ತಿರುವ ರೈತರಿಗೆ ಪರಿಹಾರ ನೀಡಲು ಅವಕಾಶ ಇದೆ ಬಳಸಿಕೊಳ್ಳುವಂತೆ ತಿಳಿಸಿದರು.ಇದೇ ಸಂದರ್ಭದಲ್ಲಿ ಕೌದಳ್ಳಿ ವಲಯ ಅರಣ್ಯ ಅಧಿಕಾರಿ ರಾಜಶೇಖರ್ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷ ಕರಿಯಪ್ಪ, ಕಾರ್ಯದರ್ಶಿ ಶಾಂತಕುಮಾರ್ ಕೌದಲ್ಲಿ ಹಾಗೂ ಶೆಟ್ಟಳ್ಳಿ ಗ್ರಾಮದ ಮುಖಂಡರುಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.