ಕನ್ನಡಪ್ರಭ ವಾರ್ತೆ ಸೊರಬ
ಪಕ್ಕದ ಶಿರಸಿ ತಾಲೂಕಿನಲ್ಲಿ ಇತ್ತೀಚೆಗೆ ಮಂಗನ ಕಾಯಿಲೆಗೆ ತುತ್ತಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವುದು ವರದಿಯಾಗಿದೆ. ಅದರ ಬೆನ್ನಲ್ಲೇ ಚಂದ್ರಗುತ್ತಿ ಗ್ರಾಮದಲ್ಲಿ ಮಂಗಗಳು ಸತ್ತಿರುವುದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಚಂದ್ರಗುತ್ತಿ ಭಾಗದಲ್ಲಿ ಇತ್ತೀಚೆಗೆ ಅವ್ಯಾಹತವಾಗಿ ಅರಣ್ಯ ನಾಶ ಜೊತೆಗೆ ಬೆಂಕಿ ಹಚ್ಚಿದ ಪರಿಣಾಮ ಪಶು ಪಕ್ಷಿಗಳಿಗೆ ಆಹಾರ ಸಿಗದಂತಾಗಿದೆ. ನೀರು ಆಹಾರ ಅರಿಸಿ ನಾಡಿಗೆ, ಹೊಲ ಗದ್ದೆಗಳ ಸಮೀಪಕ್ಕೆ ಬಂದು ಜನರ ಕ್ರೂರತ್ವಕ್ಕೆ ಬಲಿಯಾಗುತ್ತಿವೆ. ನದಿ, ಕೆರೆಗಳಿಗೆ ಪಂಪ್ ಹಚ್ಚುವ ಮೂಲಕ ನೀರು ಸಂಪೂರ್ಣ ಬರಿದಾಗಿದ್ದು ಮನುಷ್ಯನ ಉಪಯೋಗಕ್ಕೂ ನೀರು ಲಭಿಸದಂತಾಗಿದೆ.ಈಚೆಗೆ ಗಿಳಿ, ಮಂಗಗಳು ನಡೆಸುತ್ತಿರುವ ದಾಳಿಯಿಂದ ಬೆಳೆಗಳ ರಕ್ಷಿಸಿಕೊಳ್ಳಲು ವಾಸನೆ ರಹಿತ ಔಷಧಿಗಳ ಬೆಳೆಗಳಿಗೆ ಸಿಂಪಡಿಸುತ್ತಿದ್ದು, ಅಂತಹ ಔಷಧಿ ಸೇವಿಸಿ ಮಂಗಗಳು ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಮತ್ತು ಸಾರ್ವಜನಿಕರು ಶಂಕಿಸಿದ್ದಾರೆ. ಸ್ಥಳಕ್ಕೆ ಚಂದ್ರಗುತ್ತಿ ಪಶುವೈದ್ಯ ಸಿಬ್ಬಂದಿ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಕಾಡಿನಲ್ಲಿ ಅಂತ್ಯ ಸಂಸ್ಕಾರ ನಡೆಸಿದರು.
ಚಂದ್ರಗುತ್ತಿ ಗ್ರಾಪಂ ಪಿಡಿಒ ನಾರಾಯಣಮೂರ್ತಿ, ಗ್ರಾಪಂ ಸದಸ್ಯ ಎಂ.ಪಿ. ರತ್ನಾಕರ್, ಪಶು ವೈದ್ಯ ಸಿಬ್ಬಂದಿ ಕಣ್ಣಪ್ಪ, ಪ್ರಾಥಮಿಕ ಆರೋಗ್ಯ ಕೇಂದ್ರದ ವೀಣಾ, ಹೇಮಾ, ಮುದಾಸಿರ್, ಆಶಾ ಕಾರ್ಯಕರ್ತೆಯರಾದ ಅಶ್ವಿನಿ, ಶರಾವತಿ, ಅರಣ್ಯ ಸಿಬ್ಬಂದಿ ಪ್ರಶಾಂತ್, ಗ್ರಾಮಸ್ಥರಾದ ಕೃಷ್ಣಪ್ಪ, ಪ್ರಶಾಂತ್ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿದರು.