ಭಕ್ತರ ಹೃದಯ ಮಂದಿರದಲ್ಲಿ ಹಾರಕೂಡ ಶ್ರೀ ನೆಲೆಸಿದ್ದಾರೆ

KannadaprabhaNewsNetwork | Published : Mar 22, 2024 1:06 AM

ಸಾರಾಂಶ

ಸಮಾಜದ ಏಳಿಗೆಗಾಗಿ ಶಿಕ್ಷಣ, ಆರೋಗ್ಯ, ಸಾಹಿತ್ಯ, ಕಲೆ, ಸಂಗೀತ, ಕ್ರೀಡೆ ಸಮಾಜ ಮುಖಿಯಾಗಿ ಸಮಾಜ ಏಳಿಗೆಗಾಗಿ ಹಾರಕೂಡ ಮಠವು ಭಕ್ತರ ಬೆನ್ನುಲುಬಾಗಿ ನಿಂತು ಆಶೀರ್ವಾದ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಬದುಕಿನಲ್ಲಿ ಸಂತರ, ಶರಣರ ಮಹಾತ್ಮರ ವಾಣಿಯನ್ನು ಕೇಳಿದರೆ ಕರ್ಮದ ಕತ್ತಲೆ ನಿವಾರಣೆ ಆಗುತ್ತದೆ. ಮಹಾತ್ಮರಲ್ಲಿರುವ ದಿವ್ಯಶಕ್ತಿಯಿಂದ ನಮ್ಮ ಬದುಕು ಪಾವನವಾಗುತ್ತದೆ. ಹಾರಕೂಡ ಚೆನ್ನಬಸವ ಶಿವಯೋಗಿಗಳವರು ಭಕ್ತರ ಹೃದಯಮಂದಿರದಲ್ಲಿ ನೆಲಸಿದ್ದಾರೆ ಎಂದು ಹಾರಕೂಡ ಪೀಠಾಧಿಪತಿ ಡಾ. ಚೆನ್ನವೀರ ಶಿವಾಚಾರ್ಯರು ಆರ್ಶೀವಚನ ನೀಡಿದರು.

ಪಟ್ಟಣದ ಮುಲ್ಲಾಮಾರಿ ನದಿ ದಂಡೆ ಪಂಚಲಿಂಗೇಶ್ವರ ಬುಗ್ಗಿ ತೇರಮೈದಾನದಲ್ಲಿ ನಡೆದ ಲಿಂ. ಚೆನ್ನಬಸವ ಶಿವಯೋಗಿಗಳವರ ೭೩ನೇ ಜಾತ್ರೆಯ ರಥೋತ್ಸವ ನಿಮಿತ್ತ ಏರ್ಪಡಿಸಿದ್ದ ಧಾರ್ಮಿಕ ಶಿವಾನುಭವ ಚಿಂತನಾಗೋಷ್ಟಿ ಸಾನ್ನಿಧ್ಯ ವಹಿಸಿ ಭಕ್ತರಿಗೆ ಆರ್ಶೀವಚನ ನೀಡಿದರು.

ಕೇಂದ್ರ ಸಚಿವ ಭಗವಂತ ಖುಬಾ ಮಾತನಾಡಿ, ಹಾರಕೂಡ ಮಠವು ಲಕ್ಷಾಂತರ ಭಕ್ತರನ್ನು ಹೊಂದಿದೆ. ಸಮಾಜದ ಏಳಿಗೆಗಾಗಿ ಶಿಕ್ಷಣ, ಆರೋಗ್ಯ, ಸಾಹಿತ್ಯ, ಕಲೆ, ಸಂಗೀತ, ಕ್ರೀಡೆ ಸಮಾಜ ಮುಖಿಯಾಗಿ ಸಮಾಜ ಏಳಿಗೆಗಾಗಿ ಹಾರಕೂಡ ಮಠವು ಭಕ್ತರ ಬೆನ್ನುಲುಬಾಗಿ ನಿಂತು ಆಶೀರ್ವಾದ ಮಾಡುತ್ತಿದೆ. ಭಾರತ ದೇಶವು ಸಾಧು ಸಂತರ ಯೋಗಿಗಳ ದೇಶವಾಗಿದೆ ಎಂದರು.

ಶಾಸಕ ಡಾ. ಅವಿನಾಶ ಜಾಧವ್ ಮಾತನಾಡಿ, ಹಾರಕೂಡ ಚೆನ್ನಬಸವ ಶಿವಯೋಗಿಗಳವರ ಜಾತ್ರೆ ಹಬ್ಬದ ವಾತಾವರಣದಿಂದ ಕೂಡಿರುತ್ತದೆ. ಎಲ್ಲ ಸಮುದಾಯ ಒಗ್ಗಟ್ಟಾಗಿ ಆಚರಿಸುತ್ತಿರುವುದರಿಂದ ಸಂತೋಷ ವಾಗುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಜೀವನದಲ್ಲಿ ಯಾವುದೇ ತೊಂದರೆಗಳು ಬರುವುದಿಲ್ಲ ಮನಸ್ಸಿಗೆ ನೆಮ್ಮದಿ ಸಿಗಬೇಕಾದರೆ ಪೂಜ್ಯರ ಆಶೀರ್ವಾದ ಮುಖ್ಯವಾಗಿದೆ ಎಂದರು.

ಕಾಂಗ್ರೆಸ ಮುಖಂಡ ಸುಭಾಷ ರಾಠೋಡ ಮಾತನಾಡಿ, ಹಾರಕೂಡ ಮಠವು ಜಾತಿ ಆಧಾರಿತವಾಗಿರದೇ ನೀತಿ ಆಧಾರಿತ ಮಾನವೀಯತೆ ಆಧಾರಿತವಾಗಿದೆ ಎಂದು ಹೇಳಿದರು.

ತೆಲಂಗಾಣ ರಾಜ್ಯದ ಮಲ್ಲಯ್ಯನಗಿರಿ ಜಹಿರಾಬಾದ ಡಾ. ಬಸವಲಿಂಗ ಅವಧೂತರು ಭಕ್ತರಿಗೆ ಆಶೀರ್ವಾದ ಮಾಡಿದರು. ಸಾಹಿತಿ ಎಚ್. ಕಾಶಿನಾಥ ಬರೆದ ಚನ್ನವೀರ ಚಂದನ ಗ್ರಂಥವನ್ನು ಡಾ. ಚೆನ್ನವೀರ ಶಿವಾಚಾರ್ಯರು ಬಿಡುಗಡೆಮಾಡಿದರು. ಉದಯ ಶಾಸ್ತ್ರಿ, ಮಲ್ಲಿಕಾರ್ಜುನ ಸ್ವಾಮಿ ಬೀದರ, ಶಿವಕುಮಾರ ಸ್ವಾಮಿ ಉಡುಮನಳ್ಳಿ, ಶಂಕರ ಕೋಡ್ಲಾ ಇವರಿಗೆ ಚನ್ನಶ್ರೀ ಪ್ರಶಸ್ತಿ ನೀಡಿ ಪುರಸ್ಕಾರಮಾಡಲಾಯಿತು.

Share this article