ಕುಶಾಲನಗರ: ಕಾವೇರಿ ನದಿಯಲ್ಲಿ ಮೀನುಗಳ ದುರ್ಮರಣ

KannadaprabhaNewsNetwork | Published : Apr 24, 2024 2:36 AM

ಸಾರಾಂಶ

ಕಾವೇರಿ ನದಿ ಹರಿವು ಸ್ಥಗಿತಗೊಂಡು ಮೀನು ಸೇರಿದಂತೆ ಜಲಚರಗಳು ನಾಶಗೊಂಡಿದೆ. ರಾಸಾಯನಿಕ ವಸ್ತುಗಳನ್ನು ನದಿಗೆ ಹಾಕಿರುವ ಸಂಶಯ ಕಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿ ಹರಿವು ಸ್ಥಗಿತಗೊಂಡು ಮೀನು ಸೇರಿದಂತೆ ಮತ್ತಿತರ ಜಲಚರಗಳು ನಾಶ ಗೊಂಡಿರುವ ದೃಶ್ಯ ಗೋಚರಿಸಿದೆ.

ಪಟ್ಟಣ ವ್ಯಾಪ್ತಿಯ ಬೈಚನಹಳ್ಳಿ ದಂಡಿನಪೇಟೆ, ಕೊಪ್ಪ ಸೇತುವೆ ಕೆಳಭಾಗ ದಲ್ಲಿ ನೀರು ಸಂಪೂರ್ಣ ಹರಿವು ನಿಂತು ಹೋಗಿದ್ದು ಪಟ್ಟಣಗಳಿಂದ ಹೊರಬರುವ ಸಂಪೂರ್ಣ ಚರಂಡಿ ನೀರು ನದಿ ಒಡಲಿಗೆ ಸೇರುತ್ತಿದೆ.

ಕೆಲವು ಕಡೆಗಳಲ್ಲಿ ರಾಸಾಯನಿಕ ವಸ್ತುಗಳನ್ನು ನದಿಗೆ ಹಾಕಿರುವ ಸಂಶಯ ಕಂಡುಬರುತ್ತಿದ್ದು ಮೀನುಗಳು ಅಲ್ಲಲ್ಲಿ ಸತ್ತು ಹೋಗಿರುವ ದೃಶ್ಯ ಕಂಡು ಬಂದಿದೆ. ಸ್ನಾನ ನಿತ್ಯ ಕರ್ಮಗಳಿಗೆ ನದಿಯನ್ನು ಬಳಸುತ್ತಿದ್ದ ಕುಶಾಲನಗರ ವ್ಯಾಪ್ತಿಯ ಮತ್ತು ಗಡಿ ಭಾಗದ ನಿರಾಶ್ರಿತ ಜನರು ಇದೀಗ ಕಳೆದ ಒಂದು ತಿಂಗಳಿನಿಂದ ಬವಣೆ ಪಡುತ್ತಿದ್ದಾರೆ.

ಈ ವ್ಯಾಪ್ತಿಯ ಹಳ್ಳಕೊಳ್ಳಗಳಲ್ಲಿ ನಿಂತಿರುವ ನೀರಿನಲ್ಲಿ ಇರುವ ವಿಶೇಷ ತಳಿಯ ಮಹಷೀರ್ ಮೀನುಗಳನ್ನು ತಕ್ಷಣ ಸ್ಥಳಾಂತರಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಾರ್ಯಯೋಜನೆ ಸಿದ್ಧಪಡಿಸಬೇಕಾಗಿದೆ ಎಂದು ದಂಡಿನಪೇಟೆ ನಿವಾಸಿ ಅಜೀಜ್ ಅವರು ಮನವಿ ಮಾಡಿದ್ದಾರೆ. ಚರಂಡಿ ಮೂಲಕ ಹರಿಯುತ್ತಿರುವ ಕಲುಷಿತ ತ್ಯಾಜ್ಯ ನದಿಗೆ ನೇರವಾಗಿ ಬಿಡದಂತೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ನದಿಯಲ್ಲಿ ಮೀನುಗಳು ಸತ್ತು ತೇಲುತ್ತಿರುವ ಹಿನ್ನೆಲೆಯಲ್ಲಿ ಇಡೀ ಪ್ರದೇಶ ವಾಸನಾಮಾಯವಾಗಿ ಪರಿವರ್ತನೆಗೊಂಡಿದೆ. ಹದ್ದು, ಕಾಗೆ, ಬಕಪಕ್ಷಿಗಳು ಪರಿಸರಲ್ಲಿ ಹಾರಾಡುತ್ತಿವೆ. ಸ್ಥಳದಲ್ಲಿ ಬೀದಿ ನಾಯಿಗಳು ಬೀಡು ಬಿಟ್ಟಿವೆ.

ಮಾಹಿತಿ ಮೇರೆಗೆ ಕುಶಾಲನಗರ ಪುರಸಭೆಯ ಆರೋಗ್ಯ ಅಧಿಕಾರಿ ಉದಯಕುಮಾರ್ ನೇತೃತ್ವದಲ್ಲಿ ಪೌರಕಾರ್ಮಿಕರು ನದಿ ತಟದಲ್ಲಿ ಯಾವುದೇ ರೀತಿಯ ರೋಗಗಳು ಹಬ್ಬದಂತೆ ಮುನ್ನೆಚ್ಚರಿಕೆಯಾಗಿ ಬ್ಲೀಚಿಂಗ್ ಪೌಡರ್ ಮತ್ತಿತರ ಔಷಧಿಗಳನ್ನು ಹಾಕುವ ಕಾರ್ಯಚರಣೆ ನಡೆಸುತ್ತಿದ್ದಾರೆ. ಸತ್ತುಬಿದ್ದಿರುವ ಮೀನುಗಳನ್ನು ತೆರವುಗೊಳಿಸಿ, ನದಿಯನ್ನು ಸ್ವಚ್ಛಗೊಳಿಸುವುದಾಗಿ ತಿಳಿಸಿದ್ದಾರೆ.

Share this article