ಕನ್ನಡಪ್ರಭ ವಾರ್ತೆ ತಾಳಗುಪ್ಪ
ತಾಳಗುಪ್ಪ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಮಂಗಗಳ ಸರಣಿ ಸಾವು ಸಂಭವಿಸುತ್ತಿದೆ. ಸೊನಗಾರ ಕೇರಿಯ ನೀಲಾಕ್ಷಿ ಅವರ ಮನೆಯ ಹಿಂಭಾಗದಲ್ಲಿ ಹಾಗೂ ಜಗದೀಶರವರ ಮನೆಯ ಸಮೀಪದಲ್ಲಿ ಕಳೆದ 20 ದಿನದಲ್ಲಿ 3 ಮಂಗಗಳು ಹಾಗೂ ಇಡುವಾಣಿಯಲ್ಲಿ 1 ಮಂಗ ಸಾವು ಕಂಡಿದೆ. ಮಂಜಿನಕಾನು ಹಾಗೂ ಹಿರೇಮನೆ ತಲವಾಟದ ಕಡೆಯೂ ಮಂಗ ಸತ್ತಿದೆ ಎಂದು ಜನರು ಮಾತಾಡುತ್ತಿದ್ದರೂ, ಅರಣ್ಯ ಇಲಾಖೆಯ ಮಾಹಿತಿಯಂತೆ 3 ಮಂಗಗಳ ಸಾವು ಸಂಭವಿಸಿದ್ದು, ಅವುಗಳ ಮರಣೋತ್ತರ ಪರೀಕ್ಷೆ ನಡೆಸಿ, ಸುಟ್ಟು ಹಾಕಲಾಗಿದೆ.
ಮಂಗ ಸತ್ತಾಗ ಪಶು ವೈದ್ಯಾಧಿಕಾರಿ, ಗ್ರಾಮ ಪಂಚಾಯಿತಿ ಪಿಡಿಒ, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರು, ಫಾರೆಸ್ಟರ್ ಹಾಜರಿದ್ದು, ಕೆಎಫ್‍ಡಿ ನಿಯಂತ್ರಣ ಸೂಚನೆಯನ್ನು ಪಾಲಿಸಿ ಮಂಗಗಳನ್ನು ಸುಡಬೇಕೆಂಬ ನಿಯಮವಿದೆ. ಆದರೆ ಅವರ ನಿರೀಕ್ಷೆಯಲ್ಲಿ ಕಾದು ಪಶು ವೈದ್ಯಕೀಯ ಸಿಬ್ಬಂದಿ, ಅರಣ್ಯ ಇಲಾಖೆಯ ವಾಚರ್ ಸತ್ತ ಮಂಗದ ಹೊಟ್ಟೆ ಕೊಯ್ದು( ಮಂಕಿ ಅಟಾಪ್ಸಿ) ಕಿಡ್ನಿ, ಹಾರ್ಟ್, ಲಿವರ್, ಬ್ರೈನ್, ಸ್ಪೈನ್‍ಗಳನ್ನು ಪ್ರತ್ಯೇಕ ಬಾಟಲ್‍ಗಳಲ್ಲಿ ತುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿ ಕರ್ತವ್ಯ ಪೂರೈಸುತ್ತಾರೆ. ತಾಳಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರೀಕ್ಷಕರು, ಸಿಬ್ಬಂದಿಗಳ ಕರೆಗೆ ಸ್ಪಂದಿಸುವುದಿಲ್ಲ ಎನ್ನಲಾಗಿದೆ. ಅಲ್ಲಿಂದ ಐಸ್ ಕ್ಯಾರಿಯರ್‌ನಲ್ಲಿ ಶಿವಮೊಗ್ಗದ ವೈರಲ್ ಡಯಾಗ್ನೋಸಿಸ್ ಲ್ಯಾಬ್‍ಗೆ (ಪರಮಾಣು ಕ್ರಿಮಿ ಪರಿಶೋಧನಾ ಪ್ರಯೋಗ ಶಾಲೆ ) ಕಳಿಸಲಾಗುತ್ತದೆ.ಕೇರಿ ತುಂಬಾ ಮಂಗಗಳದ್ದೇ ಹಾವಳಿ: ಗ್ರಾಮದ ಲಿಂಗಾಯತರ ಕೇರಿ, ಯಾದವಕೇರಿ, ಮಡಿವಾಳರಕೇರಿ, ಸೊನಗಾರರ ಕೇರಿಗಳಲ್ಲಿ ನೂರಾರು ಬೇರೆ ಬೇರೆ ವಯೋಮಾನದ ಮಂಗಗಳು ಗುಂಪು ಗುಂಪಾಗಿ ಬೀಡು ಬಿಟ್ಟಿದ್ದು ಅವುಗಳ ಕಾಟಕ್ಕೆ ಜನರು ಪರಿಪಾಟಲು ಪಡುತ್ತಿದ್ದಾರೆ. ಮನೆಯ ಹೆಂಚು ಕಿತ್ತು ಒಳ ನುಸುಳುವ ಅವು ಪಕ್ಕ ನುರಿತ ಕಳ್ಳರಂತೆ ಫ್ರಿಜ್ ಬಾಗಿಲು ತೆಗೆದು, ಹಣ್ಣು ತರಕಾರಿಯನ್ನು ಕೊಂಡೊಯ್ಯುತ್ತಿದೆ. ಕಾಳುಕಡ್ಡಿ ಡಬ್ಬದ ಮುಚ್ಚಳ ತೆಗೆದು ಬೀರಾಡುತ್ತದೆ. ಅಂಗಡಿಯಲ್ಲಿ ವ್ಯಾಪಾರಕ್ಕಿಟ್ಟ ಚಾಕಲೇಟ್, ಕುರುಕುರೆ, ಲೇಸ್, ಮೊಟ್ಟೆಗಳನ್ನು ಅನಾಮತ್ತಾಗಿ ಹೊತ್ತೊಯ್ದು ಮನೆ ಚಾವಣಿಯ ಮೇಲೆ ಕೂತು ತಿಂದು ಅಣಕಿಸುತ್ತದೆ. ಮಂಗನ ಕಾಟಕ್ಕೆ ಹೆದರಿ ಕೆಲ ಅಂಗಡಿಯವರು ಬಾಳೆ ಹಣ್ಣಿನ ವ್ಯಾಪಾರ ನಿಲ್ಲಿಸಿದ್ದಾರೆ.