ಗರ್ಭಿಣಿ ಆಕಳು ಸಾವು, ರೈತರಿಂದ ಪ್ರತಿಭಟನೆ

KannadaprabhaNewsNetwork |  
Published : Mar 18, 2024, 01:52 AM IST
ಪೋಟೊ-೧೬ ಎಸ್.ಎಚ್.ಟಿ. ೧ಕೆ- ಪಟ್ಟಣದ ಆನಂದ ಡಂಬಳ ಎಂಬುವವರಿಗೆ ಸೇರಿದ ಮೂರು ತಿಂಗಳ ಗರ್ಭಿಣಿ ಆಕಳು ಪಶು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷದಿಂದ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು, ರೈತರು ಸೂಕ್ತ ಪರಿಹಾರಕ್ಕೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ತನಗೆ ತಿಳಿದ ಮಾತ್ರೆ ನೀಡಿದ್ದರಿಂದ ಸುಮಾರು ₹೭೦,೮೦ ಸಾವಿರ ಬೆಲೆಬಾಳುವ ಚೊಚ್ಚಲು ಗರ್ಭಿಣಿ ಆಕಳು ಸಾವು

ಶಿರಹಟ್ಟಿ: ಮೂರು ತಿಂಗಳ ಗರ್ಭಿಣಿ ಆಕಳು ಪಶು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದು, ಆಕಳು ಕಳೆದುಕೊಂಡ ರೈತರು ಪಶು ಆಸ್ಪತ್ರೆ ಎದುರು ಸತ್ತ ಆಕಳನ್ನು ಇಟ್ಟು ಪ್ರತಿಭಟನೆ ನಡೆಸಿ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಆನಂದ ಡಂಬಳ ಎಂಬ ರೈತನಿಗೆ ಸೇರಿದ ಆಕಳು ಕಳೆದ ಎರಡು ಮೂರು ದಿನಗಳಿಂದ ಅಸ್ವಸ್ಥಗೊಂಡಿದ್ದು, ಆಕಳಿಗೆ ತೀವ್ರತರದ ಕಾಯಿಲೆ ಏನು ಇಲ್ಲ ಎಂದು ಹೇಳಿ ಸೂಕ್ತ ಚಿಕಿತ್ಸೆ ನೀಡದೇ ಬರೀ ಚುಚ್ಚು ಮದ್ದು ನೀಡಿ ಆಸ್ಪತ್ರೆ ಸಿಬ್ಬಂದಿ ಸಾಗ ಹಾಕಿದ್ದಾರೆ.

ಆಕಳು ಏನು ತಿನ್ನುತ್ತಿಲ್ಲ. ಸಲಾಯಿನ್ ಹಚ್ಚಿ. ಇಲ್ಲವಾದರೆ ನಿಮ್ಮ ಮೇಲಧಿಕಾರಿಗಳಿಗೆ ತಿಳಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ರೈತರು ಅಂಗಲಾಚಿದ್ದಾರೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ತನಗೆ ತಿಳಿದ ಮಾತ್ರೆ ನೀಡಿದ್ದರಿಂದ ಸುಮಾರು ₹೭೦,೮೦ ಸಾವಿರ ಬೆಲೆಬಾಳುವ ಚೊಚ್ಚಲು ಗರ್ಭಿಣಿ ಆಕಳು ಸಾವನ್ನಪ್ಪುವಂತಾಯಿತು ಎಂದು ರೈತರು ಆರೋಪಿಸಿದರು.

ಆಕಳಿಗಿರುವ ತೀವ್ರತರದ ಕಾಯಿಲೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರದೇ ಈ ಆವಾಂತರವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ಆಕಳು ಖರೀದಿಗೆ ಒಂದು ಲಕ್ಷ ಸಾಲ ಪಡೆದಿದ್ದು, ಈ ಸಾಲ ತೀರಿಸುವುದಾದರೂ ಹೇಗೆ ಎಂದು ಪ್ರಭಾರಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ನಿಂಗಪ್ಪ ಓಲೇಕಾರ ಅವರನ್ನು ಪ್ರಶ್ನಿಸಿದರು.

ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದ ಡಾ. ನಿಂಗಪ್ಪ ಓಲೇಕಾರ ಮಾತನಾಡಿ, ಆಕಳು ಸಾವನ್ನಪ್ಪಿದ ಬಗ್ಗೆ ಸರ್ಕಾರ ನೀಡುವ ₹ ೧೦ ಸಾವಿರ ಪರಿಹಾರದ ಹಣ ನೀಡುವ ಜತೆಗೆ ರೈತರಿಗೆ ಸಿಗುವ ಆಸ್ಪತ್ರೆಯ ಸೌಲಭ್ಯಗಳಲ್ಲಿ ಅವಕಾಶ ಕಲ್ಪಿಸಿ ಕೊಡುವ ಭರವಸೆ ನೀಡಿದರು.

ಭರವಸೆಗೆ ಕಿವಿಗೊಡದ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾ ಪಶು ಆಸ್ಪತ್ರೆ ವೈದ್ಯಾಧಿಕಾರಿಗಳು ಬಂದು ಆಕಳ ಸಾವಿಗೆ ಏನು ಕಾರಣ ಎಂದು ಪರಿಶೀಲನೆ ನಡೆಸಿ ಯೋಗ್ಯ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು. ಈ ಅವ್ಯವಸ್ಥೆ ತಾಲೂಕು ಪಶು ಆಸ್ಪತೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಇದು ಕಣ್ಣಿಗೆ ಕಂಡ ಒಂದು ಉದಾಹರಣೆ ಮಾತ್ರ ಎಂದ ರೈತರು ಇದಕ್ಕೆ ಶಾಶ್ವತ ಪರಿಹಾರ ಸಿಗಬೇಕಾದರೆ ಪೂರ್ಣ ಪ್ರಮಾಣದ ಸಿಬ್ಬಂದಿ ತಾಲೂಕು ಪಶು ಆಸ್ಪತ್ರೆಗೆ ನೇಮಕವಾಗಬೇಕು. ದಿನಗೂಲಿ ಕೆಲಸದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಮೇಲೆ ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.

ಆಸ್ಪತ್ರೆಯ ಓರ್ವ ಸಿಬ್ಬಂದಿ ಆಕಳು ವಿಷಪೂರಿತ ಆಹಾರ ಸೇವನೆ ಮಾಡಿದ್ದರಿಂದ ಸಾವನ್ನಪ್ಪಿದೆ ಎಂದು ಹೇಳುತ್ತಿದಂತೆ ಸಿಟ್ಟಿಗೆದ್ದ ರೈತರು ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಏಕೆ ನಿರ್ಲಕ್ಷ ತೋರಿದ್ದೀರಿ ಎಂದು ಆಕ್ರೋಶ ಹೊರ ಹಾಕಿದರು. ಮೊದಲೇ ಬರಗಾಲದಿಂದ ತತ್ತರಿಸಿ ಹೋಗಿದ್ದು, ರೈತರ ಜೀವದ ಜತೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ ಎಂದರು.

ಕೊನೆಗೆ ಡಾ. ನಿಂಗಪ್ಪ ಓಲೇಕಾರ ಅವರು ನಮ್ಮ ಆಸ್ಪತ್ರೆಯ ದಿನಗೂಲಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ. ನಮ್ಮ ಗಮನಕ್ಕೂ ತರದೇ ತಾನೇ ಚಿಕಿತ್ಸೆಗೆ ಮುಂದಾಗಿದ್ದರಿಂದ ಸೂಕ್ತ ಚಿಕಿತ್ಸೆ ದೊರೆಯದೇ ಆಕಳು ಸಾವನ್ನಪ್ಪಿದೆ. ಇನ್ನು ಮುಂದೆ ಈ ತರಹದ ಯಾವುದೇ ಅವಘಡಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ರೈತರೊಂದಿಗೆ ಸಂಧಾನ ನಡೆಸಿ ಸರ್ಕಾರದಿಂದ ದೊರೆಯುವ ಪರಿಹಾರ ಕೊಡಿಸುವ ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆ ಕೈಬಿಟ್ಟರು.

ಜಿಲ್ಲಾ ರೈತ ಸಂಘಟನೆ ಅಧ್ಯಕ್ಷ ಪ್ರಕಾಶ ಕಲ್ಯಾಣಿ ಈ ಸಂದರ್ಭದಲ್ಲಿ ಹಾಜರಿದ್ದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ