ಬೆಳಗಾವಿ : ಬೈಲಹೊಂಗಲ ತಾಲೂಕಿನ ಮುರಕುಂಬಿ ಗ್ರಾಮದ ಇನಾಂದಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಐವರು ಗುರುವಾರ ಮೃತಪಟ್ಟಿದ್ದಾರೆ. ಇದರಿಂದಾಗಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿದೆ.
ಬಾಗಲಕೋಟೆಯ ಅಕ್ಷಯ ಸುಭಾಷ ಚೋಪಡೆ (48), ಬೈಲಹೊಂಗಲದ ದೀಪಕ ನಾಗಪ್ಪ ಮುನ್ನೋಳಿ ( 31), ಖಾನಾಪುರದ ಸುದರ್ಶನ ಮಹಾದೇವ ಬನೋಶಿ (25), ಬೈಲಹೊಂಗಲದ ಮಂಜುನಾಥ ಮಡಿವಾಳ, ಅಥಣಿಯ ಮಂಜುನಾಥ ಗೋಪಾಲ, ಬಾಗಲಕೋಟೆಯ ಗುರುಪಾದಪ್ಪ ತಮ್ಮಣ್ಣವರ (26), ಗೋಕಾಕದ ಭರತೇಶ ಬಸಪ್ಪ ಸರವಾಡೆ (27) ಮೃತಪಟ್ಟ ಕಾರ್ಮಿಕರು.
ಈ ಮಧ್ಯೆ, ಅವಘಡ ಸಂಭವಿಸಿ ದಿನ ಕಳೆದರೂ ಕಾರ್ಖಾನೆಯ ಆಡಳಿತ ಮಂಡಳಿಯವರು ಪರಿಹಾರ ಘೋಷಿಸಿಲ್ಲ, ಆಸ್ಪತ್ರೆಗೆ ಭೇಟಿ ನೀಡಿಲ್ಲ, ಸಂತಾಪ ಕೂಡ ಸೂಚಿಸಿಲ್ಲ ಎಂದು ಮೃತ ಕಾರ್ಮಿಕ ಗುರು ತಮ್ಮಣ್ಣನವರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ, ಶವಾಗಾರದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಇನಾಂದಾರ ಸಕ್ಕರೆ ಕಾರ್ಖಾನೆಯನ್ನು ವಿಕ್ರಮ್ ಇನಾಂದಾರ್, ಪ್ರಭಾಕರ ಕೋರೆ ಹಾಗೂ ವಿಜಯ ಮೆಟಗುಡ್ ಜಂಟಿಯಾಗಿ ನಿರ್ವಹಿಸುತ್ತಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಘಟನೆ ಸಂಬಂಧ ಕಾರ್ಖಾನೆಯ ತಾಂತ್ರಿಕ ತಂಡದ ಮುಖ್ಯಸ್ಥ ರಾವ್, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರವೀಣಕುಮಾರ ಮತ್ತು ಪ್ರೊಸೆಸಿಂಗ್ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿನೋದಕುಮಾರ ವಿರುದ್ಧ ಮುರಗೊಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.ಕಾರ್ಖಾನೆಯ ಬಾಯ್ಲರ್ ಬಳಿಯ ಗೋಡೆಯಲ್ಲಿ ತಾಂತ್ರಿಕ ತೊಂದರೆ ಇತ್ತು. ಅದನ್ನು 8 ಕಾರ್ಮಿಕರು ಸರಿಪಡಿಸುತ್ತಿದ್ದ ವೇಳೆಯೇ ಸ್ಫೋಟಗೊಂಡಿದೆ. ಇದರಿಂದಾಗಿ ಸುಡುತ್ತಿದ್ದ ಮೊಲಾಸಿಸ್ ಕಾರ್ಮಿಕರ ಮೈಮೇಲೆ ಬಿದ್ದಿದೆ. ನಾಲ್ಕು ಮಹಡಿ ಅಂತರದಲ್ಲಿ ಈ ಘಟನೆ ಸಂಭವಿಸಿದೆ ಎಂದು ಅವರು ತಿಳಿಸಿದರು.