ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶಿವಸಂಚಾರ ಕಲಾವಿದರ ಬೀಳ್ಕೊಡುಗೆ ಸಮಾರಂಭ ಹಾಗೂ ಔತಣಕೂಟದಲ್ಲಿ ಭಾಗವಹಿಸಿದ್ದ ಕಲಾವಿದರ ತಂಡದೊಂದಿಗೆ ಶ್ರೀಗಳು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ಸಾವಿಲ್ಲದ ಕಲೆಗೆ, ಕಲಾವಿದರಿಗೆ ಸದಾ ಪ್ರೋತ್ಸಾಹದ ಅಗತ್ಯವಿದೆ ಶಿವಸಂಚಾರದಿಂದ ಹೊರಬಂದ ಕಲಾವಿದರು ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಲಿ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಸ್ವಾಮೀಜಿ ಹಾರೈಸಿದರು.
ತಾಲೂಕಿನ ಸಾಣೇಹಳ್ಳೀಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶಿವಸಂಚಾರ ಕಲಾವಿದರ ಬೀಳ್ಕೊಡುಗೆ ಸಮಾರಂಭ ಹಾಗೂ ಔತಣಕೂಟದಲ್ಲಿ ಭಾಗವಹಿಸಿ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ರಂಗಭೂಮಿಯ ಪಾತ್ರ ಅನನ್ಯವಾದುದು. ಸತತವಾಗಿ 29 ವರ್ಷಗಳ ಕಾಲ ಸಾಂಸ್ಕೃತಿಕ ಸೇವೆಯಲ್ಲಿ ಸಾಣೇಹಳ್ಳಿಯ ಶಿವಸಂಚಾರ ತೊಡಗಿಕೊಂಡಿದೆ. ನಾಟಕ ತಂಡದ ಈ ವರ್ಷದ ಕಲಾವಿದರ ಸಂಘಟಿತ ಕಾರ್ಯ ಮತ್ತು ಕಲಾ ಸೇವೆ ಶ್ಲಾಘನೀಯ ಎಂದರು.
ಶಿವಸಂಚಾರ ನಾಟಕಗಳ ಮೂಲಕ ಸಮಾಜದ ಮೇಲಿನ ಪ್ರಭಾವವೇ ನಮಗೆ ದೊರೆತ ದೊಡ್ಡ ಲಾಭ. ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶಿವಸಂಚಾರ ಮತ್ತು ರಂಗಶಾಲೆಯ ನಾಟಕ ಮತ್ತು ಕಲೆಯ ಮೂಲಕ ಸಮಾಜದ ಮೇಲೆ ಬೀರುವ ಸಕಾರಾತ್ಮಕ ಪರಿಣಾಮವೇ ನಮಗೆ ದೊರೆತ ಅತಿದೊಡ್ಡ ಯಶಸ್ಸು ಎಂದರು.
ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘದ ಅಂಗಸಂಸ್ಥೆಯಾದ ಶಿವಸಂಚಾರವು ತನ್ನ ಸಾಂಸ್ಕೃತಿಕ ಪಯಣದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. 1997ರಲ್ಲಿ ಸಿ.ಜಿ.ಕೃಷ್ಣಸ್ವಾಮಿ (ಸಿಜಿಕೆ) ಅವರ ನೇತೃತ್ವದಲ್ಲಿ ಆರಂಭವಾದ ಈ ರಂಗ ತಂಡವು, ಕೇವಲ ನಟನೆಯಷ್ಟೇ ಅಲ್ಲದೆ ಸಾಮಾಜಿಕ ಬದಲಾವಣೆಯ ಆಶಯದೊಂದಿಗೆ ನಾಡಿನಾದ್ಯಂತ ನಿರಂತರವಾಗಿ ಸಂಚರಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಆರ್ಥಿಕ ಸಂಕಷ್ಟ ಹಾಗೂ ವಿವಿಧ ಕಾರಣಗಳಿಂದ ಶಿವಸಂಚಾರವನ್ನು ಸ್ಥಗಿತಗೊಳಿಸುವ ಆಲೋಚನೆ ಇತ್ತಾದರೂ, ರಾಘು ಮತ್ತು ಅವರ ಪತ್ನಿಯವರ ಧೈರ್ಯದ ನಿರ್ಧಾರದಿಂದ ರಂಗಶಾಲೆ ಮುಂದುವರೆದಿದೆ ಎಂದರು.
ರಂಗ ನಿರ್ದೇಶಕ ವೈ.ಡಿ.ಬದಾಮಿ ಮಾತನಾಡಿ, ಕಳೆದ 29 ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶಿವಸಂಚಾರದ ಈ ವರ್ಷದ ಶಿವಸಂಚಾರ ರಂಗ ತಿರುಗಾಟ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕಳೆದ ವರ್ಷ ತಾಂತ್ರಿಕ ಮತ್ತು ಇತರ ಕಾರಣಗಳಿಂದಾಗಿ ಕೆಲವು ಪ್ರದರ್ಶನಗಳು ಅರ್ಧಕ್ಕೆ ನಿಂತುಹೋಗಿದ್ದವು. ಆದರೆ ಈ ವರ್ಷ ಆ ಎಲ್ಲಾ ಸವಾಲುಗಳನ್ನು ಮೀರಿ ತಂಡವು ಅತ್ಯಂತ ಉತ್ಸಾಹದಿಂದ ನಾಟಕಗಳನ್ನು ಪ್ರದರ್ಶಿಸಿದೆ. ತಂಡದ ಕಲಾವಿದರು ಮತ್ತು ತಾಂತ್ರಿಕ ವರ್ಗದವರು ತೋರಿದ ಶಿಸ್ತು ಮತ್ತು ಪರಿಶ್ರಮವು ರಂಗದ ತಿರುಗಾಟ ಯಶಸ್ಸಿಗೆ ಕಾರಣವಾಗಿದೆ ಎಂದರು. ರಂಗಶಾಲೆಯ ಪ್ರಾಂಶುಪಾಲ ರಘು ಪರಪ್ಪಮನೆ, ರಂಗ ನಿರ್ದೇಶನ ಕೃಷ್ಣಮೂರ್ತಿ ತಾಳಿಕಟ್ಟೆ ಮಾತನಾಡಿದರು. ಒಂದು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ ನೂರಾರು ಪ್ರದರ್ಶನಗಳನ್ನು ನೀಡಿ, ನಾಟಕ ಕಲೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಕಲಾವಿದರನ್ನು ಬೀಳ್ಕೊಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.