ಬಾಗೇಶಪುರದಲ್ಲಿ ‘ಗುರು ತೋರಿದ ದಾರಿ- ಚಂದಮಾಮನ ತೇರು’ ಸಂಭ್ರಮ

KannadaprabhaNewsNetwork |  
Published : May 04, 2026, 02:00 AM IST
ಬಾಗೇಶಪುರದಲ್ಲಿ ‘ಚಂದಮಾಮನ ತೇರು’  | Kannada Prabha

ಸಾರಾಂಶ

ಆಧುನಿಕ ಜೀವನದ ಓಟದಲ್ಲಿರುವ ಮಾನವನು ಮನಶಾಂತಿಗಾಗಿ ಆಧ್ಯಾತ್ಮಿಕತೆಯತ್ತ ಮುಖ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಶಂಭುನಾಥ ಸ್ವಾಮೀಜಿಗಳು ಭಕ್ತರಲ್ಲಿ ಧಾರ್ಮಿಕತೆ ಹಾಗೂ ಸನ್ಮಾರ್ಗದ ಚಿಂತನೆ ಬೆಳೆಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಬಾಗೇಶಪುರ ಗ್ರಾಮದಲ್ಲಿ ನಡೆದ ‘ಗುರು ತೋರಿದ ದಾರಿ- ಚಂದಮಾಮನ ತೇರು 140ರ ಸಂಭ್ರಮ’ ಕಾರ್ಯಕ್ರಮವು ಭಕ್ತಿಭಾವ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಸಮನ್ವಯದೊಂದಿಗೆ ಅದ್ಧೂರಿಯಾಗಿ ಜರುಗಿತು. ಬೆಳದಿಂಗಳ ಮೃದುವಾದ ಬೆಳಕಿನ ನಡುವೆ ವೇದಘೋಷಗಳು ಮೊಳಗುತ್ತಿದ್ದಂತೆ, ಚಂದಮಾಮನ ತೇರು ಸಂಚಾರ ಭಕ್ತರನ್ನು ಆಧ್ಯಾತ್ಮಿಕ ಲೋಕಕ್ಕೆ ಕರೆದೊಯ್ದ ಅಪೂರ್ವ ಕ್ಷಣಕ್ಕೆ ಗ್ರಾಮಸ್ಥರು ಸಾಕ್ಷಿಯಾದರು.

ಗ್ರಾಮದ ಅದಿದೇವತೆ ಮೈಸೂರಮ್ಮ ದೇವಿಯ ನೂತನ ದೇವಾಲಯದ ಸವಿನೆನಪಿನೊಂದಿಗೆ ಈ ಉತ್ಸವ ನಡೆಯಿತು. ತಳಿರು ತೋರಣಗಳಿಂದ ಅಲಂಕರಿಸಿದ ಗ್ರಾಮದ ಬೀದಿಗಳು, ಮಕ್ಕಳ ಮತ್ತು ಮಹಿಳೆಯರ ಸಂಭ್ರಮ, ಗುರುಪಾದ ಪೂಜೆಯೊಂದಿಗೆ ಭಕ್ತಿಭಾವದ ಪ್ರದರ್ಶನ ಇವೆಲ್ಲವೂ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.

ಕಾರ್ಯಕ್ರಮಕ್ಕೆ ಆಗಮಿಸಿದ ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿಯನ್ನು ಗ್ರಾಮಸ್ಥರು ಮಂಗಳವಾದ್ಯಗಳೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿ, ಪಾದಪೂಜೆ ಮಾಡುವ ಮೂಲಕ ಗೌರವಿಸಿದರು. ಬಳಿಕ ಭಕ್ತರಿಗೆ ಆಶೀರ್ವಚನ ನೀಡಿದ ಸ್ವಾಮೀಜಿ, ಗುರುವಿನ ಸ್ಥಾನ ನಮ್ಮ ಸಂಸ್ಕೃತಿಯಲ್ಲಿ ಅತ್ಯುನ್ನತವಾಗಿದೆ. ಗುರುವಿನ ಮಾರ್ಗದರ್ಶನವನ್ನು ಅನುಸರಿಸಿದರೆ ಜೀವನದಲ್ಲಿ ಶಾಂತಿ ಮತ್ತು ಸಾರ್ಥಕತೆ ದೊರೆಯುತ್ತದೆ ಎಂದು ಹೇಳಿದರು.

ಭೈರವೈಕ್ಯ ಡಾ. ಬಾಲ ಗಂಗಾಧರನಾಥ ಮಹಾಸ್ವಾಮೀಜಿಗಳು ತೋರಿದ ದಾರಿಯಲ್ಲಿ ನಡೆಯುತ್ತಿರುವ ಈ ತೇರು ಉತ್ಸವವು, ಭಕ್ತರ ನಡುವೆ ಸಂಸ್ಕಾರ ಮತ್ತು ಆತ್ಮೀಯ ಬಾಂಧವ್ಯವನ್ನು ಬಲಪಡಿಸುತ್ತಿರುವುದು ಸಂತೋಷಕರ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಗೃಹ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಆಧುನಿಕ ಜೀವನದ ಓಟದಲ್ಲಿರುವ ಮಾನವನು ಮನಶಾಂತಿಗಾಗಿ ಆಧ್ಯಾತ್ಮಿಕತೆಯತ್ತ ಮುಖ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಶಂಭುನಾಥ ಸ್ವಾಮೀಜಿಗಳು ಭಕ್ತರಲ್ಲಿ ಧಾರ್ಮಿಕತೆ ಹಾಗೂ ಸನ್ಮಾರ್ಗದ ಚಿಂತನೆ ಬೆಳೆಸುವ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಂಚಾಲಕರಾದ ಎಚ್. ಬಿ. ಮದನ್ ಗೌಡ ಮಾತನಾಡಿ, ಪೂಜ್ಯ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಸಂಕಲ್ಪವನ್ನು ಶಂಭುನಾಥ ಸ್ವಾಮೀಜಿಗಳು ಕಾರ್ಯರೂಪಕ್ಕೆ ತಂದಿದ್ದು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬೊಚೇಹಳ್ಳಿ ಮಠದ ಶಿವಾನಂದ ಸ್ವಾಮೀಜಿ, ಗೀಜಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಧರ್ಮೇಶ್ ಸೇರಿದಂತೆ ಗ್ರಾಮಸ್ಥರು ಮತ್ತು ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಗಿಲು ತೆರೆಯದ ಬಹು ನಿರೀಕ್ಷಿತ ಕ್ರೀಡಾ ಸಂಕೀರ್ಣ!
ಬಿಎಸ್‌ವೈ ಅಭಿಮಾನೋತ್ಸವಕ್ಕೆ ಜಿಲ್ಲೆಯಿಂದ ೫೦ ಸಾವಿರ ಅಭಿಮಾನಿಗಳು