- ಬಿಜೆಪಿಗೆ ಬರುವ ಮಾತುಕತೆಗಳಿಲ್ಲ, ಹೊಸ ಪಕ್ಷ ಸ್ಥಾಪಿಸಲು ಕುಳ್ಳುಮಲೆ ಗಣಪತಿ ದೇವರಿಂದ ಶುಭ ಸೂಚನೆ ಸಿಕ್ಕಿದೆ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಮೇ 9ರಂದು ಚಿತ್ರದುರ್ಗದಲ್ಲಿ ನಡೆಯುತ್ತಿರುವ ಅಭಿಮಾನೋತ್ಸವ ಕಾರ್ಯಕ್ರಮವು ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಅವರಿಗೆ ಬಿಜೆಪಿ ಜವಾಬ್ದಾರಿ ಕೊಡುವ ಕಾರಣದಿಂದ ನಡೆಸುತ್ತಿದ್ದಾರೆ. ಇದು ಯಡಿಯೂರಪ್ಪನವರ ಕುಟುಂಬದ ಕಾರ್ಯಕ್ರಮವಾಗಿದೆ ಎಂದು ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಶನಿವಾರ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಎಲ್ಲ ನಾಯಕರು ಸೇರಿ ಬಿಜೆಪಿಯನ್ನು ಕಟ್ಟಿದ್ದು. ಯಡಿಯೂರಪ್ಪ ಒಬ್ಬರಿಂದಲೇ ಬಿಜೆಪಿ ಎಂಬ ಭ್ರಮೆಯಿಂದ ಹೊರಬರಬೇಕು ಎಂದರು.ನಾನು ಬಿಜೆಪಿಗೆ ಬರುವ ಯಾವುದೇ ಮಾತುಕತೆಗಳು ನಡೆದಿಲ್ಲ. ಹೊಸ ಪಕ್ಷವನ್ನು ಸ್ಥಾಪನೆ ಮಾಡಲು ಕುಳ್ಳುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆ ನಡೆಸಿ ಹೊಸ ಪಕ್ಷವನ್ನು ಸ್ಥಾಪನೆ ಮಾಡುವ ಬಗ್ಗೆ ದೇವರಲ್ಲಿ ಕೇಳಿದಾಗ ಶುಭ ಸೂಚನೆ ಸಿಕ್ಕಿದೆ. ರಾಜ್ಯದ ಜನತೆಗೆ ಪರ್ಯಾಯ ಪಕ್ಷ ಅನಿವಾರ್ಯವಾಗಿದ್ದು, ನಾನು ರಾಜ್ಯದ ಯಾವುದೇ ಮೂಲೆಗೆ ಹೋದರೂ ಅಧಿಕ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಪ್ರಾಮಾಣಿಕರಿಗೆ, ಭ್ರಷ್ಟಾಚಾರ ರಹಿತರಿಗೆ ಜನರು ಮನ್ನಣೆ ನೀಡಲಿದ್ದಾರೆ ಎಂದರು.
ನಾನು ದುಡ್ಡು ಮಾಡಿಕೊಳ್ಳುವ ಉದ್ದೇಶಕ್ಕಾಗಿ ರಾಜಕಾರಣ ಮಾಡುತ್ತಿಲ್ಲ. ರೈತರಿಗೆ, ಸಾಮಾನ್ಯ ಜನರಿಗೆ ಅನುಕೂಲವಾಗುವ ಆಡಳಿತ ನೀಡುವುದು ನನ್ನ ಗುರಿಯಾಗಿದೆ. ಮುಂದಿನ 2028ರ ಚುನಾವಣೆಯಲ್ಲಿ ನನ್ನ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದರು.
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದೆ. ಮುಸ್ಲಿಮರಿಗೆ ₹6 ಸಾವಿರ ಕೋಟಿ ಅನುದಾನವನ್ನು ನೀಡಿದ್ದಾರೆ. ಒಂದು ಕೋಮಿಗೆ ಸೀಮಿತವಾಗಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತ ವರ್ಗದ ಜನರ ಹೆಸರೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಯತ್ನಾಳ್ ಕುಟುಕಿದರು.
-2ಕೆಸಿಎನ್‌ಜಿ2: ವಿಜಯಪುರ ನಗರ ಕ್ಷೇತ್ರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮದವರೊಂದಿಗೆ ಮಾತನಾಡಿದರು.