ಸಾಲಗಾರರ ಕಿರುಕುಳ: ಒಂದೇ ಕುಟುಂಬದ ನಾಲ್ವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನ, ಓರ್ವ ಸಾವು

KannadaprabhaNewsNetwork |  
Published : Mar 20, 2025, 01:17 AM IST
19ಎಚ್‌ಪಿಟಿ2- ಕ್ರಿಮಿನಾಶಕ ಸೇವಿಸಿ ಮೃತಪಟ್ಟ ಚಂದ್ರಯ್ಯ. | Kannada Prabha

ಸಾರಾಂಶ

ಸಾಲಬಾಧೆಗೆ ಹೆದರಿ ಒಂದೇ ಕುಟುಂಬದ ನಾಲ್ವರು ಹಂಪಿಯಲ್ಲಿ ಬುಧವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕುಟುಂಬದ ಯಜಮಾನ ಚಂದ್ರಯ್ಯ (43) ಮೃತಪಟ್ಟಿದ್ದು, ಮೂವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಸಾಲಬಾಧೆಗೆ ಹೆದರಿ ಒಂದೇ ಕುಟುಂಬದ ನಾಲ್ವರು ಹಂಪಿಯಲ್ಲಿ ಬುಧವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕುಟುಂಬದ ಯಜಮಾನ ಚಂದ್ರಯ್ಯ (43) ಮೃತಪಟ್ಟಿದ್ದು, ಮೂವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಟ್ಟೂರು ತಾಲೂಕಿನ ಗೊಲ್ಲರಹಳ್ಳಿ ನಿವಾಸಿ ಚಂದ್ರಯ್ಯ (43), ಸೌಮ್ಯ (35), ಭವಾನಿ (12) ಮತ್ತು ಶಿವಕುಮಾರ್ (8) ಎಂಬವರು ಹಂಪಿಯಲ್ಲಿ ಕ್ರಿಮಿನಾಶಕ ಸೇವಿಸಿದ್ದಾರೆ. ಸಾಲಗಾರರ ಕಾಟ ಹಾಗೂ ಬ್ಯಾಂಕ್‌ ಸೇವಾ ಕೇಂದ್ರದ ಸೂಪರ್‌ ವೈಸರ್‌ನ ಕಾಟ ತಾಳಲಾರದೇ ಚಂದ್ರಯ್ಯ ಕುಟುಂಬ ಕ್ರಿಮಿನಾಶಕ ಸೇವಿಸಿದೆ ಎನ್ನಲಾಗಿದೆ.

ಚಂದ್ರಯ್ಯ ಮಂಗಳವಾರ ಹಂಪಿ ನೋಡಲು ಕುಟುಂಬ ಸಮೇತ ಬಂದಿದ್ದರು. ಹೋಟೆಲ್‌ವೊಂದರಲ್ಲಿ ಉಳಿದುಕೊಂಡು ಹಂಪಿ, ತುಂಗಭದ್ರಾ ಜಲಾಶಯ ವೀಕ್ಷಣೆ ಮಾಡಿದ್ದರು. ಮನನೊಂದು ಬುಧವಾರ ಬೆಳಗ್ಗೆ ಹಂಪಿಯಲ್ಲಿ ಕ್ರಿಮಿನಾಶಕ ತೆಗೆದುಕೊಂಡಿದ್ದಾರೆ. ಅಲ್ಲಿ ಒಟ್ಟಾಗಿ ಕ್ರಮಿನಾಶಕ ಸೇವಿಸಿದ್ದಾರೆ.

ಈ ಮಧ್ಯೆ ಸೌಮ್ಯ ಅವರು ಸಂಬಂಧಿಕರಿಗೆ ಫೋನ್‌ ಮಾಡಿ, "ಚಂದ್ರಯ್ಯ ಕೊಟ್ಟೂರಿನಲ್ಲಿ ಎಸ್‌ಬಿಐನ ಸೇವಾಕೇಂದ್ರ ನಡೆಸುತ್ತಿದ್ದರು. ಈ ಸೇವಾಕೇಂದ್ರದ ಸೂಪರ್‌ ವೈಸರ್‌ ಬಸವರಾಜ ಎಂಬವರು ಕಿರುಕುಳ ಕೊಡುತ್ತಿದ್ದರು. ಜಗದೀಶ್‌ ಎಂಬವರ ಬಳಿ ನಾಲ್ಕು ಲಕ್ಷ ರು. ಸಾಲ ಮಾಡಿದ್ದರು, ಶ್ರೀಕಾಂತ್ ಪತ್ತಿಕೊಂಡಶೆಟ್ಟಿ, ಹುಣಸಿಕಟ್ಟಿ ಗುರು, ವಾಮಯ್ಯ ಎಂಬವರ ಬಳಿಯೂ ಕೈಗಡ ಸಾಲ ಪಡೆದಿದ್ದರು. ಸಾಲ ಮರುಪಾವತಿಗಾಗಿ ಅವರೆಲ್ಲ ಸತಾಯಿಸುತ್ತಿದ್ದರು. ಸಾಲಗಾರರ ಕಾಟ ಹಾಗೂ ಸೇವಾಕೇಂದ್ರದ ಸೂಪರ್‌ವೈಸರ್‌ನ ಕಿರುಕುಳ ತಡೆಯಲಾರದೇ ಕುಟುಂಬ ಸಮೇತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ " ಎಂದು ವಿಷಯ ತಿಳಿಸಿದ್ದಾರೆ.

ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದ್ದು, ಪೊಲೀಸರು ಪತ್ತೆ ಹಚ್ಚಿ, ನಾಲ್ವರನ್ನು ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ತರುವಾಗ ಚಂದ್ರಯ್ಯ (43) ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ಮೂವರನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಾಲಕ ಶಿವಕುಮಾರ್ (8) ತೀವ್ರ ತೊಂದರೆ ಅನುಭವಿಸಿದ್ದು, ವೈದ್ಯರು ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹಂಪಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ