ಹಿಮಾಲಯಕ್ಕಿಂತಲೂ ಹೆಚ್ಚು ಭಾರವಾದದ್ದು ಋಣಭಾರ: ಸಿದ್ದಲಿಂಗ ಸ್ವಾಮೀಜಿ

KannadaprabhaNewsNetwork |  
Published : May 21, 2026, 01:45 AM IST
20ಕೆಎಂಎನ್ 19 | Kannada Prabha

ಸಾರಾಂಶ

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದ ಋಣವಿರುತ್ತದೆ. ಹಿಮಾಲಯಕ್ಕಿಂತಲೂ ಹೆಚ್ಚು ಭಾರವಾದದ್ದು ಋಣಭಾರ. ಸಮಾಜ ಸೇವೆ ಮೂಲಕ ಮನುಷ್ಯ ತನ್ನ ಋಣಭಾರ ಇಳಿಸಿಕೊಳ್ಳಬೇಕು. ಹಣವುಳ್ಳವರು ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಯಸ್ಸನ್ನು ವರ್ಷಗಳಿಂದ ಅಳೆಯದೆ ತಾನು ಬದುಕುತ್ತಿರುವ ದಿನಗಳನ್ನು ಸಾಧನೆಗಳ ಮೂಲಕ ಅಳೆಯಬೇಕು ಎಂದು ತುಮಕೂರಿನ ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದ ಜಯನಗರ ಬಡಾವಣೆಯ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್‌ನಿಂದ ಆರ್‌ಟಿಒ ಮಲ್ಲಿಕಾರ್ಜುನ್ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ನಗೆ ಹಬ್ಬ, ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿದರು.

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದ ಋಣವಿರುತ್ತದೆ. ಹಿಮಾಲಯಕ್ಕಿಂತಲೂ ಹೆಚ್ಚು ಭಾರವಾದದ್ದು ಋಣಭಾರ. ಸಮಾಜ ಸೇವೆ ಮೂಲಕ ಮನುಷ್ಯ ತನ್ನ ಋಣಭಾರ ಇಳಿಸಿಕೊಳ್ಳಬೇಕು. ಹಣವುಳ್ಳವರು ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಆರ್‌ಟಿಒ ಮಲ್ಲಿಕಾರ್ಜುನ್ ಹುಟ್ಟು ಹಬ್ಬದ ನೆಪದಲ್ಲಿ ಸಾಮಾಜಿಕ ಸೇವಾ ಕಾರ್ಯ ಮಾಡುತ್ತಿರುವುದು ಇತರರಿಗೆ ಮಾದರಿ. ಇತರರ ನೋವು ನಲಿವುಗಳಿಗೆ ಸ್ಪಂದಿಸುವವನೇ ನಿಜವಾದ ಮನುಷ್ಯ ಎಂದರು.

ಬಿಗ್ ಬಾಸ್ ವಿನ್ನರ್ ಕೆ.ನಟರಾಜ (ಗಿಲ್ಲಿ ನಟ), ರನ್ನರ್ ಕಾವ್ಯ ಸೈವ, ಯುಪಿಎಸ್ಸಿ-2025ರ ಸಾಧಕ ತಾಲೂಕಿನ ಅಂಬಿಗರಹಳ್ಳಿಯ ಮುತ್ತೇಶ್ ಗೌಡ, ಗೌಡೇನಹಳ್ಳಿ ಅಂತಾರಾಷ್ಟ್ರೀಯ ಕ್ರೀಡಾಪಟು ವಿಜಯಕುಮಾರಿ ಅವರಿಗೆ ಸಾಧಕ ಪ್ರಶಸ್ತಿಯನ್ನು ಕುಟುಂಬಸ್ಥರು ಸಾಧಕ ಪುರಸ್ಕಾರ ಸ್ವೀಕರಿಸಿದರು.

ಇದೇ ವೇಳೆ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಸುಮಾರು 700ಕ್ಕೂ ಅಧಿಕ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಮೈಸೂರಿನ ಅನಘ ಆಸ್ಪತ್ರೆ, ಮೌರ್ಯ ಆಸ್ಪತ್ರೆ, ಕೆ.ಆರ್.ನಗರದ ವಿಸ್ಮಯ ಆಸ್ಪತ್ರೆ ಮತ್ತು ಕೆ.ಆರ್.ಪೇಟೆ ನ್ಯೂ ಅಪೂರ್ವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ತಂಡದಿಂದ ಬೃಹತ್ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು. ಆರೋಗ್ಯ ತಪಾಸಣೆಗೆ ಒಳಗಾದವರಿಗೆ ಉಚಿತ ಚಿಕತ್ಸಾ ಕಾರ್ಡ್‌ಗಳನ್ನು ವಿತರಿಸಲಾಯಿತು.

ನಂತರ ಗಂಗಾವತಿ ಪ್ರಾಣೇಶ್, ಬಸವರಾಜು ಮಹಾಮನಿ ಮತ್ತು ನರಸಿಂಹ ಜೋಷಿ ತಂಡದಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಿತು. ತಾಲೂಕು ಆದಿಚುಂಚನಗಿರಿ ಹೇಮಗಿರಿ ಶಾಖಾಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಕೆ.ಆರ್.ನಗರದ ಕನಕ ಗುರುಪೀಠದ ಡಾ.ಶಿವಾನಂಪುರಿ ಸ್ವಾಮೀಜಿ, ತೆಂಡೇಕೆರೆ ಬಾಳೆಗೊನ್ನೂರು ರಂಭಾಪುರಿ ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬೇಬಿ ರಾಮಯೋಗೀಶ್ವರ ಮಠಧ ಶಿವ ಬಸವ ಸ್ವಾಮೀಜಿ, ಬೋಳನಹಳ್ಳಿ ಎಸ್.ಜಿ.ಎಂ ಒಡೆಯರ್ ಮಹಾ ಸಂಸ್ಥಾನ ಮಠ ಮತ್ತು ಶನಿಗುರು ಸಂಗಮ ಕ್ಷೇತ್ರದ ನಿಜಗುಣ ಸಿದ್ದಲಿಂಗಯ್ಯ ಒಡೆಯರ್ ಸ್ವಾಮೀಜಿ, ಪಟ್ಟಣದ ಬಾಲಯೇಸು ದೇವಾಲಯದ ಧರ್ಮಗುರು ರೆವರೆಂಡ್ ಫಾದರ್ ಪೌಲುಸ್ ಥೋಮಸ್, ಜಿಲ್ಲಾ ಕುರಬರ ಸಂಘದ ಅಧ್ಯಕ್ಷ ಸುರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಬಿ.ಎಲ್.ದೇವರಾಜು, ಬಿ.ನಂಜಪ್ಪ, ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಬಿ.ದಿನೇಶ್, ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಿಇಒ ಅನಿಲ್ ಕುಮಾರ್, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್, ಜಿ.ಎನ್.ಮಂಜುನಾಥ್, ಜಂಟಿ ಸಾರಿಗೆ ಆಯುಕ್ತೆ ಗಾಯಿತ್ರಿದೇವಿ, ಕೆ.ಎಂ.ವಿ.ಐ.ಎ ಅಧ್ಯಕ್ಷ ವೈ.ಬಿ.ನಾಗಭೂಷನ್, ಪ್ರಧಾನ ಕಾರ್ಯದರ್ಶಿ ನಾಸೀರ್ ಅಹಮದ್, ಟ್ರಸ್ಟಿನ ಅಧ್ಯಕ್ಷೆ ಗಾಯಿತ್ರಿ ಮಲ್ಲಿಕಾರ್ಜುನ್, ಟ್ರಸ್ಟಿಗಳಾದ ಜಯರಾಮ ನೆಲ್ಲಿತ್ತಾಯ, ಪವರ್ ಟಿ.ವಿ ರಾಕೇಶ್ ಸಂಜೀವಶೆಟ್ಟಿ, ಜಿ.ಕೆ.ಮಹೇಶ್ ಹಲವರು ಇದ್ದರು.

ಮೇ 19ರ ರಾತ್ರಿ ನಡೆದ ರಾಜ್ಯ ಮಟ್ಟದ ರಂಗ ಕುಣಿತ ಸ್ಪರ್ಧೆಗೆ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ನಗಾರಿ ಭಾರಿಸುವ ಮೂಲಕ ಉದ್ಘಾಟಿಸಿದರು. ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ 27 ಕಲಾತಂಡಗಳು ಭಾಗವಹಿಸಿದ್ದವು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಗೆ ಆಗಮಿಸಿದ ಸಿದ್ದಲಿಂಗ ಸ್ವಾಮೀಜಿಗಳು ಮಠದ ಆವರಣದಲ್ಲಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಪುತ್ಥಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ: ಪಿ.ರವಿಕುಮಾರ್
ದಾಳಿಗೆ ಹೆದರಿ ಕಡತಗಳನ್ನು ಬಚ್ಚಿಟ್ಟ ಬೇಲೂರು ಗ್ರಾಪಂ ಅಧಿಕಾರಿಗಳು