ಅಡೆತಡೆ ನಿವಾರಣೆ: ಕೊನೆಗೂ ಇಂದು ಪುರಸಭಾ ಅಧ್ಯಕ್ಷರ ಚುನಾವಣೆ

KannadaprabhaNewsNetwork |  
Published : Nov 11, 2024, 01:06 AM IST
1)-11ಎಚ್‌ ಆರ್‌ ಪಿ 1 - ಪುರಸಭಾ ಕಚೇರಿ 2)-11ಎಚ್‌ ಆರ್‌ ಪಿ 2 - ಎಂ.ವಿ.ಅಂಜಿನಪ್ಪ  | Kannada Prabha

ಸಾರಾಂಶ

ಉಳಿದ 10 ತಿಂಗಳಿಗೆ ನಡೆದ ಅಧ್ಯಕ್ಷ ಚುನಾವಣೆಗೆ ಕಾಂಗ್ರೆಸ್‌ ಒಳ ಜಗಳ ಬಗೆಹರಿಯದ ಹಿನ್ನೆಲೆಯಲ್ಲಿ ಬಿಜೆಪಿಯ ಇನ್ನೊಬ್ಬ ಸದಸ್ಯ ಹರಾಳು ಅಶೋಕ ಅಧ್ಯಕ್ಷರಾಗಿ ಅಧಿಕಾರ ನಡೆಸಿದರು.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಕೋರ್ಟ್‌ನಿಂದ ತಡೆಯಾಜ್ಞೆ ದೊರೆತು ಎರಡು ಸಲ ಮುಂದೂಡಲ್ಪಟ್ಟಿದ್ದ ಇಲ್ಲಿಯ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಕೊನೆಗೂ ನ. 11ರಂದು ಮುಹೂರ್ತ ನಿಗದಿಯಾಗಿದೆ.

ಈ ಹಿಂದೆ ಪಟ್ಟಣದ 27 ವಾರ್ಡ್‌ಗಳಿಗೆ ಚುನಾವಣೆ ಜರುಗಿದಾಗ ಕಾಂಗ್ರೆಸ್‌ -14, ಬಿಜೆಪಿ -10, ಜೆಡಿಎಸ್‌ -1, ಪಕ್ಷೇತರರು -2 ಹೀಗೆ ಮತದಾರರು ತೀರ್ಪು ನೀಡಿದ್ದರು. ಮೊದಲ ಎರಡೂವರೆ ವರ್ಷದ ಮೀಸಲಾತಿಯಲ್ಲಿ ಆಗ ಕಾಂಗ್ರೆಸ್‌ ಒಳಜಗಳದಿಂದ ಬಹುಮತವಿದ್ದರೂ ಕಾಂಗ್ರೆಸ್‌ಗೆ ಅಧಿಕಾರ ಕೈತಪ್ಪಿ 10 ಸದಸ್ಯರಿದ್ದ ಬಿಜೆಪಿಯ ಮಂಜುನಾಥ ಇಜಂತಕರ್‌ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಭೀಮವ್ವ ಸಣ್ಣ ಹಾಲಪ್ಪ ಅಧಿಕಾರಕ್ಕೇರಿದರು.

ಮೊದಲ ಎರಡೂವರೆ ವರ್ಷದಲ್ಲಿ 18 ತಿಂಗಳು ಬಿಜೆಪಿಯ ಮಂಜುನಾಥ ಇಜಂತಕರ್‌ ಅವರು ಅಧಿಕಾರ ನಡೆಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಉಳಿದ 10 ತಿಂಗಳಿಗೆ ನಡೆದ ಅಧ್ಯಕ್ಷ ಚುನಾವಣೆಗೆ ಕಾಂಗ್ರೆಸ್‌ ಒಳ ಜಗಳ ಬಗೆಹರಿಯದ ಹಿನ್ನೆಲೆಯಲ್ಲಿ ಬಿಜೆಪಿಯ ಇನ್ನೊಬ್ಬ ಸದಸ್ಯ ಹರಾಳು ಅಶೋಕ ಅಧ್ಯಕ್ಷರಾಗಿ ಅಧಿಕಾರ ನಡೆಸಿದರು. ಎರಡೂವರೆ ವರ್ಷಗಳ ಮೊದಲ ಅವಧಿ ಪೂರ್ಣಗೊಂಡ ಆನಂತರ ಸುದೀರ್ಘ ಅವಧಿ ಪುರಸಭೆ ಅಧಿಕಾರ ಆಡಳಿತಾಧಿಕಾರಿಗಳ ಕೈಯಲ್ಲಿತ್ತು. ಅಂತಿಮವಾಗಿ ಸರ್ಕಾರ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಸಿಗೆ ಮೀಸಲಾಗಿ ನಿಗದಿ ಮಾಡಿತು.

ಆಗ ಆಗಸ್ಟ್‌ 21, 2024ಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಕಾಂಗ್ರೆಸ್‌ ಹಾಗೂ ಬಿಜೆಪಿ ಕಡೆಯಿಂದ ನಾಮಪತ್ರ ಸಹ ಸಲ್ಲಿಕೆಯಾಗಿತ್ತು. ಇನ್ನೇನು ಚುನಾವಣೆ ಪ್ರಕ್ರಿಯೆ ನಡೆಯಬೇಕು ಎನ್ನುವಷ್ಟರಲ್ಲಿ ಸದಸ್ಯ ಟಿ.ವೆಂಕಟೇಶ ಮೀಸಲಾತಿ ಕುರಿತು ಧಾರವಾಡ ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಕೋರ್ಟ್‌ನಿಂದ ತಡೆಯಾಜ್ಞೆ ದೊರೆತ ಹಿನ್ನೆಲೆಯಲ್ಲಿ ಚುನಾವಣೆ ಮುಂದಕ್ಕೆ ಹೋಗಿತ್ತು.

ನಂತರ ಟಿ. ವೆಂಕಟೇಶ ತಮ್ಮ ಅರ್ಜಿಯನ್ನು ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಪುನಃ ಸೆ. 2ಕ್ಕೆ ಚುನಾವಣೆ ನಿಗದಿಯಾಗಿತ್ತು. ಈಗ ಬಿಜೆಪಿ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ ಹೈಕೋರ್ಟ್‌ ಮೊರೆ ಹೋದ ಹಿನ್ನೆಲೆಯಲ್ಲಿ ತಡೆಯಾಜ್ಞೆ ದೊರೆತು ಸೆ.2ರ ಚುನಾವಣೆ ಸಹ ಮುಂದಕ್ಕೆ ಹೋಗಿತ್ತು.

ಈಚೆಗೆ ಬಿಜೆಪಿ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ ಸಹ ಅರ್ಜಿ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಬಿ.ವಿ. ಗಿರೀಶಬಾಬು ನ.11ಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿಗೊಳಿಸಿದರು.

ಕಾಂಗ್ರೆಸ್‌ ಒಗ್ಗಟ್ಟು:

ಇದೇ ಪ್ರಥಮ ಬಾರಿಗೆ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಮೂಡಿದಂತಿದೆ. ಪಕ್ಷೇತರರು ಇಬ್ಬರು, ಜೆಡಿಎಸ್‌ ಒಬ್ಬರು ಸಹ ಕಾಂಗ್ರೆಸ್‌ ಕಡೆ ಗುರುತಿಸಿಕೊಂಡಿದ್ದರಿಂದ ಹಾಗೂ ಶಾಸಕಿ ಎಂ.ಪಿ. ಲತಾ ಮತ್ತು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮತಗಳು ಸೇರಿದರೆ ಕಾಂಗ್ರೆಸ್‌ಗೆ 19 ಮತಗಳು ಆದಂತಾಗಿವೆ.

ಬಿಜೆಪಿಯಲ್ಲಿ ಒಡಕು:

ಇಷ್ಟು ದಿವಸ ಕಾಂಗ್ರೆಸ್‌ನಲ್ಲಿ ಒಳಜಗಳವಿದ್ದು ಇದೀಗ ಸರಿ ಹೋಗಿದ್ದರೆ ಇದೀಗ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಉಂಟಾಗಿದೆ. ಬಿಜೆಪಿಯಲ್ಲಿ 10 ಸದಸ್ಯರಿದ್ದರೂ 6 ಜನರ ದಾರಿ ಭಿನ್ನವಾಗಿದೆ.

ಈ ಬಾರಿ ಕಾಂಗ್ರೆಸ್‌ ಸುದೀರ್ಘ ಅವಧಿ ನಂತರ ಪುರಸಭಾ ಆಡಳಿತ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ 20ನೇ ವಾರ್ಡಿನ ಫಾತಿಮಾಬಿ ಎಂ. ಹಾಗೂ 15ನೇ ವಾರ್ಡಿನ ಸಾಹೇರಬಾನು ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ 21 ವಾರ್ಡಿನ ಎಚ್‌.ಕೊಟ್ರೇಶ ಹಾಗೂ 3ನೇ ವಾರ್ಡಿನ ಶೋಭಾ ಆಕಾಂಕ್ಷಿಗಳಾಗಿದ್ದಾರೆ.

ಅದರಲ್ಲಿ ಫಾತಿಮಾಬಿ ಎಂ. ಅಧ್ಯಕ್ಷ ಸ್ಥಾನಕ್ಕೆ ಹಾಗೂ ಎಚ್‌.ಕೊಟ್ರೇಶ ಉಪಾಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿ ಬರುತ್ತಲಿದೆ. ಬಿಜೆಪಿಯಲ್ಲಿ ಸಾಕಷ್ಟು ಬಹುಮತದ ಕೊರತೆ ಇದ್ದರೂ ಈ ಹಿಂದೆ ಹಾಕಿದಂತೆ ಅಂತಿಮ ಹಂತದಲ್ಲಿ 19ನೇ ವಾರ್ಡಿನ ಕೌಟಿ ಸುಮಾ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಬಹುದು.

ಒಟ್ಟಿನಲ್ಲಿ 28 ತಿಂಗಳು ಬಿಜೆಪಿಯವರಿಗೆ ಅಧಿಕಾರ ಬಿಟ್ಟು ಕೊಟ್ಟು ನಂತರ ಕಾಂಗ್ರೆಸ್‌ ಇಲ್ಲಿಯ ಪುರಸಭಾ ಆಡಳಿತ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಶಾಸಕರ ಮಾರ್ಗದರ್ಶನ, ಸಂಸದರ ಸಹಕಾರ, ಸ್ಥಳೀಯ ನಾಯಕರ, ಪಕ್ಷದ ಕಾರ್ಯಕರ್ತರ, ಮುಖಂಡರು ಹಾಗೂ ಕಾಂಗ್ರೆಸ್‌ ಪುರಸಭಾ ಸದಸ್ಯರ ಒಗ್ಗಟ್ಟಿನಿಂದ ಸುದೀರ್ಘ ಅವಧಿ ನಂತರ ಪುರಸಭಾ ಆಡಳಿತ ಕಾಂಗ್ರೆಸ್‌ ಪಕ್ಷಕ್ಕೆ ಬರುತ್ತಿರುವುದು ಸಂತಸದ ಸಂಗತಿ. ಎಲ್ಲರೂ ಸೇರಿ ಹರಪನಹಳ್ಳಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎನ್ನುತ್ತಾರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ಹರಪನಹಳ್ಳಿ ಎಂ.ವಿ.ಅಂಜಿನಪ್ಪ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ