ಭಟ್ಕಳ: ಅರಣ್ಯವಾಸಿಗಳ ಜೀವನಕ್ಕೆ ಉಪಯುಕ್ತವಾದ ಮೂಲ ಸೌಕರ್ಯಗಳನ್ನು ನೀಡುತ್ತಿರುವ ಸರ್ಕಾರ ಅರಣ್ಯವಾಸಿಗಳಿಗೆ ಅರಣ್ಯಭೂಮಿ ಹಕ್ಕು ದೊರಕಿಸಿಕೊಡಲು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಸುಪ್ರೀಂಕೋರ್ಟ್‌ನಲ್ಲಿ ಅರಣ್ಯವಾಸಿಗಳ ಪರ ಸರ್ಕಾರ ನಿಲ್ಲಬೇಕು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಭಾನುವಾರ ತಾಲೂಕಿನ ಬೆಳ್ಕೆಯಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ಅರಣ್ಯವಾಸಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಅರಣ್ಯವಾಸಿಗಳಿಗೆ ಸರ್ಕಾರ ವಾಸ್ತವ್ಯದ ಇಮಾರತಿಗೆ ಮನೆ ನಂಬರ್, ವಿದ್ಯುತ್, ನೀರು, ರಸ್ತೆ, ಪಡಿತರ ಚೀಟಿ, ಆಧಾರ ಕಾರ್ಡ್ ಎಲ್ಲ ಮೂಲ ಸೌಲಭ್ಯಗಳನ್ನು ನೀಡುವುದಲ್ಲದೇ ಮನೆಕರ ವಸೂಲಿ ಮಾಡುತ್ತಿದೆ. ಆದರೆ ಸುಪ್ರೀಂ ಕೋರ್ಟನಲ್ಲಿ ಅನಧಿಕೃತ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಇದರಿಂದ ಅರಣ್ಯವಾಸಿಗಳು ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ.ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ತಿರಸ್ಕಾರವಾಗಿರುವ ಅರಣ್ಯವಾಸಿಗಳನ್ನು ಒಕ್ಕಲೇಬ್ಬಿಸುವಂತೆ ಪರಿಸರವಾದಿಗಳು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ನಿರ್ಣಾಯಕ ವಿಚಾರಣೆ ಹಂತದಲ್ಲಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅರಣ್ಯವಾಸಿಗಳು ತಮ್ಮ ಪೂರ್ವಜರ ಕಾಲದಿಂದಲೂ ಅರಣ್ಯಭೂಮಿಯಲ್ಲಿ ವಾಸ್ತವ್ಯ ಮಾಡಿಕೊಂಡು ಬರುತ್ತಿದ್ದಾರೆ. ತಮ್ಮ ಅರಣ್ಯಭೂಮಿ ಹಕ್ಕಿಗಾಗಿ ಕಳೆದ ಹಲವು ವರ್ಷಗಳಿಂದ ಕಾಯುತ್ತಿದ್ದರೂ ಪಟ್ಟಾ ಸಿಕ್ಕಿಲ್ಲ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ತಿರಸ್ಕಾರವಾಗಿರುವ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಂತೆ ಪರಿಸರವಾದಿಗಳು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಿದ್ದಾರೆ.ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ನಿರ್ಣಾಯಕ ವಿಚಾರಣೆ ಹಂತದಲ್ಲಿದೆ. ಅರಣ್ಯವಾಸಿಗಳು ಯಾವುದೇ ಕಾರಣಕ್ಕೂ ಆತಂಕ ಪಡಬಾರದು. ಅರಣ್ಯವಾಸಿಗಳ ಪರವಾಗಿ ಹೋರಾಟ ವೇದಿಕೆ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಹೋರಾಟ ಸೇರಿದಂತೆ ಕಾನೂನಾತ್ಮಕ ಹೋರಾಟವನ್ನೂ ಮಾಡುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಸಂಚಾಲಕರ ದೇವರಾಜ ಗೊಂಡ, ಪಾಂಡುರಂಗ ನಾಯ್ಕ, ಚಂದ್ರು ನಾಯ್ಕ, ಸಂಕೇತ, ಗಿರೀಶ ನಾಯ್ಕ, ಫಾತಿಮಾ ಪಠಾಣ, ಮಂಜುನಾಥ ಮರಾಠಿ ಸೇರಿದಂತೆ ನೂರಾರು ಅರಣ್ಯವಾಸಿಗಳಿದ್ದರು.