ಷರತ್ತುಗಳೊಂದಿಗೆ ಹಮಾಲರು, ಲಾರಿಚಾಲಕರ ಸಮಸ್ಯೆ ಇತ್ಯರ್ಥ

KannadaprabhaNewsNetwork | Published : Nov 11, 2024 1:05 AM

ಸಾರಾಂಶ

ನಗರದ ಎಪಿಎಂಸಿಯ ಹಮಾಲರ ಮೇಲೆ ನಡೆದ ಹಲ್ಲೆ ಪ್ರಕರಣ ಭಾನುವಾರ ಷರತ್ತುಬದ್ಧ ರಾಜಿಯೊಂದಿಗೆ ಇತ್ಯರ್ಥವಾಗಿದ್ದು, ಹಮಾಲರು ಎಂದಿನಂತೆ ಕಾರ್ಯ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ನಗರದ ಎಪಿಎಂಸಿಯ ಹಮಾಲರ ಮೇಲೆ ನಡೆದ ಹಲ್ಲೆ ಪ್ರಕರಣ ಭಾನುವಾರ ಷರತ್ತುಬದ್ಧ ರಾಜಿಯೊಂದಿಗೆ ಇತ್ಯರ್ಥವಾಗಿದ್ದು, ಹಮಾಲರು ಎಂದಿನಂತೆ ಕಾರ್ಯ ಆರಂಭಿಸಿದರು. ಶನಿವಾರ ಮಧ್ಯಾಹ್ನದಿಂದಲೇ ಬಂದ್ ಮಾಡಿದ್ದ ಹಮಾಲಿ ಕೆಲಸವನ್ನು ಭಾನುವಾರ ಮುಂದುವರೆಸಿದರು. ಮಧ್ಯಾಹ್ನದ ವೇಳೆಗೆ ವರ್ತಕರು, ಲಾರಿ ಚಾಲಕರು ಹಾಗೂ ಹಮಾಲರ ಸಂಘದ ಪ್ರತಿನಿಧಿಗಳೊಂದಿಗೆ ನಡೆದ ಮಾತುಕತೆ ಫಲಪ್ರದವಾಗಿದ್ದು, ಹಮಾಲರ ಸಂಘ ಷರತ್ತುಬದ್ಧವಾಗಿ ಹಮಾಲಿ ಮಾಡಲು ಒಪ್ಪಿಕೊಂಡಿದೆ. ಅಷ್ಟೇ ಅಲ್ಲ, ಹಲ್ಲೆ ಮಾಡಿದ ಲಾರಿ ಚಾಲಕರು ಇರುವ ಲಾರಿಯ ಹಮಾಲಿ ಮಾಡದಿರಲು ನಿರ್ಧರಿಸಲಾಗಿದೆ.

ಏನು ಷರತ್ತು:ಹಮಾಲರ ಮೇಲೆ ಹಲ್ಲೆಯಾಗುವುದಕ್ಕೆ ಕಾರಣವಾಗಿದ್ದೇ ಓವರ್ ಲೋಡ್ ಮಾಡುವ ವಿಷಯಕ್ಕೆ. ಅಂದರೇ 14 ಟನ್ ಲಾರಿಗೆ 18 ಟನ್ ಲೋಡ್ ಮಾಡುವಂತೆ ಒತ್ತಡ ಹಾಕಿದ್ದರಿಂದಲೇ ವಿವಾದವಾಗಿತ್ತು. ಲೋಡ್ ಎತ್ತರವಾಗುವುದರಿಂದ ಸಮಸ್ಯೆಯಾಗುತ್ತದೆ ಎಂದು ತಿರಸ್ಕಾರ ಮಾಡಿದ್ದರಿಂದಲೇ ಲಾರಿ ಚಾಲಕರು ಹಮಾಲರ ವಿರುದ್ಧ ಜಗಳ ಕಾಯ್ದು ಹಲ್ಲೆ ಮಾಡಿದ್ದರು.

ಇದರ ವಿರುದ್ಧ ರೊಚ್ಚಿಗೆದ್ದಿದ್ದ ಹಮಾಲರು ಪೊಲೀಸ್ ಠಾಣೆಯ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ಹಲ್ಲೆ ಮಾಡಿದವರ ಮೇಲೆ ನಿರ್ಧಾಕ್ಷಿಣವಾಗಿ ಕ್ರಮವಹಿಸುವಂತೆ ಆಗ್ರಹಿಸಿದ್ದರು.

ಭಾನುವಾರ ಪುನಃ ಹಮಾಲರು, ಲಾರಿ ಚಾಲಕರ ಮಧ್ಯೆ ವರ್ತಕರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಷರತ್ತುಬದ್ಧವಾಗಿ ಸಮಸ್ಯೆ ಇತ್ಯರ್ಥ ಮಾಡಲಾಗಿದೆ.

ಪಾಸಿಂಗ್ ಇರುವಷ್ಟೇ ಲೋಡ್ ಮಾಡಲು ಹಮಾಲರು ನಿರ್ಧರಿಸಿದ್ದಾರೆ. ಪಾಸಿಂಗ್ ಇರುವುದಕ್ಕಿಂತ ಹೆಚ್ಚಾಗಿ ಲೋಡ್ ಮಾಡದಿರಲು ಹಮಾಲರು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಇನ್ಮುಮುಂದೆ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮಾತ್ರ ಹಮಾಲಿ ಮಾಡಲು ನಿರ್ಧರಿಸಿದ್ದಾರೆ. ನಂತರ ಲೋಡ್ ಮತ್ತು ಅನ್ ಲೋಡ್ ಮಾಡದಿರುವ ಷರತ್ತು ವಿಧಿಸಿದ್ದಾರೆ. ಆದರೆ, ರೈತರ ತಂದಿರುವುದನ್ನು ಮಾತ್ರ ಒಂದು ಗಂಟೆ ಹೆಚ್ಚು ಕಡಿಮೆ ಮಾಡಿಕೊಡಲು ಹಮಾಲರು ಒಪ್ಪಿಕೊಂಡಿದ್ದಾರೆ.

ಈ ಷರತ್ತುಗಳ ಅನ್ವಯ ಹಮಾಲರು ಲೋಡ್ ಒಪ್ಪಿಕೊಂಡಿದ್ದಾರೆ.ಟ್ರಾಫಿಕ್ ಸಮಸ್ಯೆ:

ಹಮಾಲರು ಹಮಾಲಿ ಮಾಡುವುದನ್ನು ನಿಲ್ಲಿಸಿದ್ದರಿಂದ ಎಪಿಎಂಸಿಯಲ್ಲಿ ಸಾಲು ಸಾಲು ವಾಹನಗಳು ನಿಂತಿದ್ದವು. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವಂತೆ ಆಯಿತು. ಲೋಡ್ ಮತ್ತು ಅನ್ ಲೋಡ್ ಮಾಡದೆ ಇರುವುದರಿಂದ ಎಪಿಎಂಸಿಯಲ್ಲಿ ವಹಿವಾಟು ಸಹ ಇರಲಿಲ್ಲ. ಹೀಗಾಗಿ ಟ್ರಾಫಿಕ್ ಸಮಸ್ಯೆಯಾಗಿದ್ದನ್ನು ರಾಜಿಯಾದ ಮೇಲೆ ತಿಳಿಗೊಳಿಸಲಾಯಿತು.

Share this article