ಹೊಸ ಆಯೋಗ ವರದಿ ನೀಡೋವರೆಗೂ ನೇಮಕಾತಿ ನಿಲ್ಲಿಸಿ

KannadaprabhaNewsNetwork |  
Published : Nov 11, 2024, 01:05 AM IST
10ಕೆಡಿವಿಜಿ2, 3-ದಾವಣಗೆರೆಯಲ್ಲಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಷಡಕ್ಷರಿಮುುನಿ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಒಳಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ಹೊಸ ಆಯೋಗ ರಚಿಸಿ, ವರದಿ ಸಲ್ಲಿಕೆಗೆ 3 ತಿಂಗಳ ಕಾಲವಕಾಶ, ಗಡುವು ನೀಡಿದೆ. ಈ ಹೊಸ ಆಯೋಗದಿಂದ 3 ತಿಂಗಳಲ್ಲೇ ವರದಿ ಪಡೆದು, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು. ಅಲ್ಲಿಯವರೆಗೂ ಯಾವುದೇ ಇಲಾಖೆಗಳಲ್ಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಬಾರದು ಎಂದು ಚಿತ್ರದುರ್ಗದ ಶ್ರೀಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನುಡಿದಿದ್ದಾರೆ.

- ಒಳಮೀಸಲಾತಿ ಜಾರಿ ವಿಳಂಬವಾದಲ್ಲಿ ರಾಜ್ಯಾದ್ಯಂತ ಹೋರಾಟ: ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಎಚ್ಚರಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಒಳಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ಹೊಸ ಆಯೋಗ ರಚಿಸಿ, ವರದಿ ಸಲ್ಲಿಕೆಗೆ 3 ತಿಂಗಳ ಕಾಲವಕಾಶ, ಗಡುವು ನೀಡಿದೆ. ಈ ಹೊಸ ಆಯೋಗದಿಂದ 3 ತಿಂಗಳಲ್ಲೇ ವರದಿ ಪಡೆದು, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು. ಅಲ್ಲಿಯವರೆಗೂ ಯಾವುದೇ ಇಲಾಖೆಗಳಲ್ಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಬಾರದು ಎಂದು ಚಿತ್ರದುರ್ಗದ ಶ್ರೀಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನುಡಿದರು.

ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಸೌಲಭ್ಯ ಒದಗಿಸುವಂತೆ ಎಲ್ಲ ಆಯೋಗಗಳ ವರದಿಗಳೂ ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಸರ್ವೋಚ್ಛ ನ್ಯಾಯಾಲಯ ಸಹ ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ತೀರ್ಪು ನೀಡಿದೆ. ರಾಜ್ಯ ಸರ್ಕಾರದ ಬಳಿ ನ್ಯಾ. ಸದಾಶಿವ ಆಯೋಗ ಸೇರಿದಂತೆ ಎಲ್ಲ ಆಯೋಗಗಳ ವರದಿ, ದತ್ತಾಂಶಗಳು ಇವೆ. ಹೀಗಿದ್ದರೂ, ಮತ್ತೊಂದು ಸರ್ಕಾರ ಹೊಸ ಆಯೋಗ ರಚಿಸಲು ಹೊರಟಿದೆ. ಆಗಲಿ, ಹೊಸ ಆಯೋಗ ರಚಿಸಿ, ವರದಿ ಸಲ್ಲಿಕೆಗೆ 3 ತಿಂಗಳ ಕಾಲವಕಾಶ, ಗಡುವು ನೀಡಿದ್ದಕ್ಕೆ ಸಮ್ಮತಿ ಇದೆ ಎಂದರು.

ಕೆಪಿಎಸ್‌ಸಿ, ಆರೋಗ್ಯ ಇಲಾಖೆಯಲ್ಲಿ ಹುದ್ದೆಗಳ ನೇಮಕಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿರುವ ಬಗ್ಗೆ ಮಾಹಿತಿ ಇದೆ. ಒಂದುವೇಳೆ ಏನಾದರೂ ಹುದ್ದೆಗಳ ನೇಮಕ ಮಾಡಿಕೊಂಡರೆ ನಮ್ಮ ಸಮುದಾಯಕ್ಕೆ ತೀವ್ರ ಅನ್ಯಾಯವಾಗುತ್ತದೆ. ಒಳಮೀಸಲಾತಿ ಜಾರಿಗೊಂಡರೆ ಪರಿಶಿಷ್ಟ ಜಾತಿ ಪಟ್ಟಿಯ ಎಲ್ಲ 101 ಜಾತಿಗಳ ಅನೇಕ ವರ್ಷಗಳ ಬೇಡಿಕೆ ಫಲಿಸುತ್ತದೆ. ಒಂದುವೇಳೆ ಸರ್ಕಾರವು ವರದಿ ಸಲ್ಲಿಕೆ, ಅಧಿವೇಶನ, ಉಪ ಚುನಾವಣೆ ಅಂದೆಲ್ಲಾ ಒಳಮೀಸಲಾತಿ ವಿಳಂಬ ಜಾರಿಗೆ ವಿಳಂಬ, ನಿರ್ಲಕ್ಷ್ಯ ತೋರಿದರೆ ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟವನ್ನು ಮಾದಿಗ ಸಮುದಾಯದಿಂದ ಮಾಡಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು.

ಹಿರಿಯೂರು ಕೋಡಿಹಳ್ಳಿ ಮಠದ ಶ್ರೀ ಷಡಕ್ಷರಿಮುನಿ ಸ್ವಾಮೀಜಿ ಮಾತನಾಡಿ, ಅತಿ ಶೋಷಣೆ, ವಂಚನೆ, ತೀವ್ರ ಅನ್ಯಾಯಕ್ಕೆ ಒಳಗಾಗಿರುವ ನಮ್ಮ ಸಮುದಾಯವು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತೀರಾ ಹಿಂದುಳಿದಿದೆ. ಸಮಾಜವು ಮುಖ್ಯವಾಹಿನಿಗೆ ಬರಲು ಎಲ್ಲ ಕ್ಷೇತ್ರಗಳಲ್ಲೂ ನ್ಯಾಯ ದೊರೆಯಬೇಕಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಒಳಮೀಸಲಾತಿ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ ಅಧ್ಯಕ್ಷ ಬಿ.ಎಚ್. ವೀರಭದ್ರಪ್ಪ, ಎಲ್.ಎಂ. ಹನುಮಂತಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ್, ಬಿ.ಎಂ. ರಾಮಸ್ವಾಮಿ, ಎಸ್.ಎಸ್. ಮಲ್ಲಿಕಾರ್ಜುನ ಮತ್ತಿತರರು ಇದ್ದರು.

- - -

ಕೋಟ್‌

ಒಳ ಮೀಸಲಾತಿಗಾಗಿ ನಾವು ಕೈಗೊಂಡ ಹೋರಾಟ ಯಾವುದೇ ಸಮಾಜಗಳ ವಿರುದ್ಧದ ಹೋರಾಟವಲ್ಲ. ನಮ್ಮ ಸಮುದಾಯದ ಪಾಲು, ನ್ಯಾಯ ಕೇಳುತ್ತಿದ್ದೇವೆ. ಇನ್ನೊಬ್ಬರ ತಟ್ಟೆಯಲ್ಲಿರುವ ಅನ್ನವನ್ನು ನಾವು ಕೇಳುತ್ತಿಲ್ಲ. ನಮಗೆ ಸ್ವಲ್ಪ ಹೆಚ್ಚಿನ ತುತ್ತು ಕೇಳುತ್ತಿದ್ದೇವೆ. ಈ ವಿಚಾರದಲ್ಲಿ ಸರ್ಕಾರ ತಾಯಿಯ ಗುಣ ತೋರಬೇಕು. ಅನಾದಿ ಕಾಲದಿಂದ ವಂಚನೆಗೊಳಗಾದ ಸಮುದಾಯಕ್ಕೆ ಅದರ ಪಾಲಿನ ನ್ಯಾಯ ಒದಗಿಸಬೇಕು. ವಕ್ಫ್‌ ಸಂಸ್ಥೆ ಹೆಸರಿನಲ್ಲಿ ಯಾರೇ ಆಗಲಿ ಅಕ್ರಮವಾಗಿ ರಾಜ್ಯದ ರೈತರು, ಜನಸಾಮಾನ್ಯರು, ಸಾರ್ವಜನಿಕರು, ಮಠಗಳ ಆಸ್ತಿಗಳ ಪಡೆದಿದ್ದಲ್ಲಿ ಅಂಥದ್ದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ

- ಶ್ರೀ ಷಡಕ್ಷರಿಮುನಿ ಸ್ವಾಮೀಜಿ, ಕೋಡಿ ಮಠ, ಹಿರಿಯೂರು

- - - -10ಕೆಡಿವಿಜಿ2, 3:

ದಾವಣಗೆರೆಯಲ್ಲಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಷಡಕ್ಷರಿಮುುನಿ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...